ಸಾರಾಂಶ
ಚಾಮರಾಜನಗರ: ಕಬಿನಿ ಕಚೇರಿಯ ಮುಂಭಾಗ ನಾಲೆ ಹೂಳೆತ್ತಬೇಕು, ಅನಧಿಕೃತವಾಗಿ ಕೆರೆ ಅತಿಕ್ರಮಣ ಮಾಡಿರುವವರನ್ನು ತೆರವುಮಾಡಿಸಬೇಕು, ಗುಂಡಾಲ್‌ನಿಂದ ರೈತರಿಗೆ ಸಮರ್ಪಕವಾಗಿ ನೀರು ಬಿಡುಗಡೆ ಮಾಡಬೇಕು ಎಂಬಿತ್ಯಾಧಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುಂಡಾಲ್ ಅಚ್ಚುಕಟ್ಟು ಹಿತರಕ್ಷಣಾ ಸಮಿತಿಯ ರೈತರು ನಡೆಸುತ್ತಿದ್ದ 42ನೇ ದಿನದ ಅನಿರ್ದಿಷ್ಟ ಮುಷ್ಕರಕ್ಕೆ ಅಂತ್ಯ ಹಾಡುವಲ್ಲಿ ಹನೂರು ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ. 42 ದಿನಗಳಿಂದಲೂ ನಿರಂತರ ಧರಣಿ ನಡೆಸಲಾಗುತ್ತಿದ್ದರೂ ಸಚಿವರು, ಶಾಸಕರಾರೂ ಸ್ಥಳಕ್ಕೆ ಬಾರದ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು. ಕಬಿನಿ ಕಚೇರಿಯ ಸ್ಥಳೀಯ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕುರಿತು ರೈತರು ಧಿಕ್ಕಾರದ ಘೋಷಣೆ ಕೂಗಿ ಭಾನುವಾರ ಸಹಾ ಧರಣಿ ನಡೆಸಿದರು. ಈ ವೇಳೆ ಮಧ್ಯಾಹ್ನ ಹನೂರು ಶಾಸಕ ಎಂ.ಆರ್. ಮಂಜುನಾಥ್ ಸ್ಥಳಕ್ಕೆ ಆಗಮಿಸಿ ರೈತರ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಶಾಸಕ ಮಂಜುನಾಥ್ ಮಾತನಾಡಿ, ಗುಂಡಾಲ್ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಈಗಾಗಲೇ ಅಧಿಕಾರಗಳ ಬಳಿ ಚರ್ಚಿಸಲಾಗಿದೆ. ಮುಂದಿನ 6ರಿಂದ 9ತಿಂಗಳ ಒಳಗೆ ನಾಲೆಗಳಲ್ಲಿರುವ ಹೂಳನ್ನು ತೆಗೆದು ದುರಸ್ತಿ ಕಾರ್ಯ ಮಾಡಿಸಿ ನೀರು ಪೋಲಾಗುವುದನ್ನು ತಡೆದು ಸರಾಗವಾಗಿ ರೈತರ ಜಮೀನುಗಳಿಗೆ ನೀರು ಹರಿಯುವ ರೀತಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು, ನಿಮ್ಮ ಎಲ್ಲಾ ಬೇಡಿಕೆಗಳಿಗೂ 6 ತಿಂಗಳಲ್ಲಿ ಪರಿಹಾರ ಕಂಡುಕೊಳ್ಳುವೆ, ನಾನು ಭರವಸೆ ನೀಡಲ್ಲ, ರೈತರ ಪರವಾಗಿ ಕೆಲಸ ಮಾಡಿ ತೋರಿಸುವೆ, ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿ ಜ್ಯೂಸ್ ಕುಡಿಸುವ ಮೂಲಕ ರೈತರ 42ದಿನಗಳ ಪ್ರತಿಭಟನೆ ಅಂತ್ಯಕ್ಕೆ ನಾಂದಿ ಹಾಡಿದರು.ಈ ವೇಳೆ ಗುಂಡಾಲ್ ಅಚ್ಚುಕಟ್ಟು ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಣಗಳ್ಳಿ ದಶರಥ್ ಮಾತನಾಡಿ, ಇಲ್ಲಿತನಕ ನಾವು 42ದಿನ ಪ್ರತಿಭಟನೆ ನಡೆಸಿದರೂ ಸಂಸದರಾಗಲಿ, ಸ್ಥಳೀಯ ಶಾಸಕರಾಗಲಿ ಆಗಮಿಸಿಲ್ಲ, ಜಿಲ್ಲೆಯ ಯಾವುದೇ ಒಬ್ಬ ಜನಪ್ರತಿನಿಧಿಯೂ ನಮ್ಮ ಸಮಸ್ಯೆಯನ್ನು ಕಳೆದ 42 ದಿನದಿಂದ ಕೇಳಿಲ್ಲ, ಆದರೆ ಹನೂರು ಶಾಸಕ ಮಂಜುನಾಥ್ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಬೆಲೆಕೊಟ್ಟು ಧರಣಿಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ತಿಳಿಸಿದರು.