ಸಾಂಸಾರಿಕ ಕಲಹದಿಂದ ಬೇಸತ್ತು ಪತ್ನಿ ಹತ್ಯೆಗೈದ ಪತಿ

| Published : Aug 15 2025, 01:00 AM IST

ಸಾರಾಂಶ

ಬುಧವಾರ ರಾತ್ರಿ ಕಲಹ ವಿಕೋಪಕ್ಕೆ ತಿರುಗಿದ್ದು, ರೊಚ್ಚಿಗೆದ್ದ ಪತಿ ಸಿದ್ದಯ್ಯ ಪತ್ನಿ ಶಿವಮ್ಮಳ ಮೇಲೆ ಮಚ್ಚಿನಿಂದ ಕತ್ತು ಹಾಗೂ ಹೊಟ್ಟೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸಕಲೇಶಪುರ: ಸಾಂಸಾರಿಕ ಕಲಹದಿಂದ ಬೇಸತ್ತು ಪತಿಯೇ ಪತ್ನಿಯನ್ನು ಹತ್ಯೆಗೈದ ಘಟನೆ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಮ್ಮ (56) ಹತ್ಯೆಯಾದ ಮಹಿಳೆಯಾಗಿದ್ದಾಳೆ. ಪತಿ ಸಿದ್ದಯ್ಯ ಹಾಗೂ ಪತ್ನಿಯ ನಡುವೆ ಹಲವು ವರ್ಷಗಳಿಂದ ಮನೆಯಲ್ಲಿ ಕಲಹ ನಡೆಯುತ್ತಿತ್ತು, ಬುಧವಾರ ರಾತ್ರಿ ಕಲಹ ವಿಕೋಪಕ್ಕೆ ತಿರುಗಿದ್ದು, ರೊಚ್ಚಿಗೆದ್ದ ಪತಿ ಸಿದ್ದಯ್ಯ ಪತ್ನಿ ಶಿವಮ್ಮಳ ಮೇಲೆ ಮಚ್ಚಿನಿಂದ ಕತ್ತು ಹಾಗೂ ಹೊಟ್ಟೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದರಿಂದ ಹೆದರಿದ ಪತಿ ಸಹ ಆತ್ಮಹತ್ಯೆ ಗೆ ಯತ್ನಿಸಿ, ಮಚ್ಚಿನಿಂದ ಕತ್ತು ಕುಯ್ದುಕೊಂಡಿದ್ದಾನೆ. ಮುಂಜಾನೆ ಬೆಂಗಳೂರಿನಲ್ಲಿದ್ದ ಪುತ್ರ ತಂದೆಗೆ ಕರೆಮಾಡಿದ ವೇಳೆ ಮಾತನಾಡಲು ತಡವರಿಸಿದ್ದನ್ನು ಕೇಳಿ, ಪಕ್ಕದ ಗ್ರಾಮದಲ್ಲೇ ಇದ್ದ ತನ್ನ ಸಹೋದರಿಗೆ ಕರೆ ಮಾಡಿ ತಿಳಿಸಿದ ಹಿನ್ನೆಲೆ ಮನೆಗೆ ತೆರಳಿದ ಪುತ್ರಿ ಪರಿಶೀಲಿಸಲಾಗಿ ವಿಷಯ ಬೆಳಕಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹವನ್ನು ಕ್ರಾಫರ್ಡ್ ಆಸ್ಪತ್ರೆ ಗೆ ಸಾಗಿಸಲಾಗಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.