ಕೊಡಗಿನ ಸುಗ್ಗಿ ಹಬ್ಬ ಹುತ್ತರಿ’ (ಪುತ್ತರಿ) ಯನ್ನು ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಪೂರ್ವಕವಾಗಿ ಬುಧವಾರ ಸಂಜೆ ಆಚರಿಸಲಾಯಿತು.

ದುಗ್ಗಳ ಸದಾನಂದ

ನಾಪೋಕ್ಲು : ಕೊಡಗಿನ ಸುಗ್ಗಿ ಹಬ್ಬ ಹುತ್ತರಿ’ (ಪುತ್ತರಿ) ಯನ್ನು ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಪೂರ್ವಕವಾಗಿ ಬುಧವಾರ ಸಂಜೆ ಆಚರಿಸಲಾಯಿತು.ಜಿಲ್ಲೆಯಲ್ಲಿಯೇ ಮೊಟ್ಟಮೊದಲನೆಯದಾಗಿ ಪಾಡಿ ಸನ್ನಿಧಿಯಲ್ಲಿ ಹುತ್ತರಿ ಆಚರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಬಂದಿದ್ದು, ಈ ಬಾರಿಯೂ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ನೆರವೇರಿತು.

ಸಂಪ್ರದಾಯದಂತೆ ಸನ್ನಿಧಿಯ ಸುತ್ತಮುತ್ತಲಿನ ಅಮ್ಮಂಗೇರಿಗೆ ಒಳಪಟ್ಟ ಪೊಂಗೇರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆತನದವರು ಹುತ್ತರಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಊರಿನವರು ಹಾಗೂ ಪರವೂರಿನ ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಮುಖ ಮನೆತನದ ಕುಟುಂಬದ ಹೆಣ್ಣುಮಕ್ಕಳು ‘ತಳಿಯತಕ್ಕಿ ಬೊಳಕ್’ನೊಂದಿಗೆ ಆಗಮಿಸಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದರು. ಈ ವೇಳೆ ದುಡಿಕೊಟ್ಟ್ ಪಾಟ್ ತಂಡವೂ ಸಾಥ್ ನೀಡಿತು. ಹುತ್ತರಿ ಹಬ್ಬದ ಅಂಗವಾಗಿ ಪೊಂಗೇರ ಉಲ್ಲಾಸ್ ಅವರು ನಾಡಿನ ಸುಭಿಕ್ಷೆಗಾಗಿ ದೇವಾಲಯದ ನಡೆಯಲ್ಲಿ ನಿಂತು ಮಳೆ, ಬೆಳೆ ಸಮೃದ್ಧಿ ಹಾಗೂ ನಾಡಿನ ಸುಭಿಕ್ಷಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಶುಭ ಮೂಹೂರ್ತದಲ್ಲಿ ಕದಿರು ಕೊಯ್ಲು: ಬಳಿಕ ತಳಿಯತಕ್ಕಿ ಬೊಳಕ್, ಡೋಲು, ಜಾಗಟೆಗಳ ನಿನಾದದೊಂದಿಗೆ ದೇವಾಲಯದ ಮುಕ್ಕಾಟಿ ಸುಬ್ರಮಣಿ ಅವರು ಬೆಳ್ಳಿಯ ಬಿಂದಿಗೆ ಹೊತ್ತು, ‘ಪೊಲಿಪೊಲಿಯೇ ಬಾ’ ಎಂಬ ಉದ್ಘೋಷ ಹಾಗೂ ಪಟಾಕಿಗಳ ಮೊರೆತದೊಂದಿಗೆ ಪೊಂಗೇರ ಅಪ್ಪಣ್ಣ ಅವರ ‘ಬಾಹುಬಲ್ಯ’ ಗದ್ದೆಗೆ ತೆರಳಿದರು. ಗದ್ದೆಯಲ್ಲಿ ಕದಿರು ಕೊಯ್ಯುವುದಕ್ಕೂ ಮುನ್ನ ಸುಬ್ರಮಣಿ ಅವರು ವಿಧಿವಿಧಾನಗಳನ್ನು ನೆರವೇರಿಸಿ, ಕದಿರು ಕಟ್ಟಿ, ಹಾಲು-ತುಪ್ಪ ಬಿಟ್ಟು ಪ್ರಾರ್ಥನೆ ಸಲ್ಲಿಸಿದರು. ನಿಗದಿತ ಶುಭ ಮೂಹುರ್ತದಲ್ಲಿ ಕದಿರು ಕೊಯ್ದು ನೆರೆದವರ ಕೈಗೆ ನೀಡಿದರು. ಈ ವೇಳೆ ಶುಭಸೂಚಕವಾಗಿ ಗುಂಡು ಹಾರಿಸಲಾಯಿತು. ಪಟಾಕಿಗಳ ಸದ್ದು ಮುಗಿಲು ಮುಟ್ಟಿತು.ವಿಶೇಷ ಧಾನ್ಯಲಕ್ಷ್ಮೀ ಪೂಜೆ: ಅನಂತರ ಡೋಲು, ಜಾಗಟೆ ಹಾಗೂ ‘ಪೊಲಿಪೊಲಿಯೇ ದೇವಾ’ ಘೋಷದೊಂದಿಗೆ ಮೊದಲು ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕಿ ದೇವಾಲಯಕ್ಕೆ ಮರಳಲಾಯಿತು. ಸನ್ನಿಧಿಗೆ ಪ್ರದಕ್ಷಿಣೆ ಬಂದು, ಕದಿರನ್ನು ಅರ್ಚಕರಿಗೆ ಹಸ್ತಾಂತರಿಸಲಾಯಿತು. ಬಳಿಕ ನಮಸ್ಕಾರ ಮಂಟಪದಲ್ಲಿಟ್ಟು ವಿಶೇಷ ಧಾನ್ಯಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಮುಖ್ಯ ಅರ್ಚಕ ಕುಶ ಭಟ್ ಮತ್ತು ಜಗದೀಶ್ , ಶ್ರೀಕಾಂತ್ ತಂಡ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಮೊದಲೇ ನೆರೆಕಟ್ಟಿದ ಎಲೆಗಳ ಸುರುಳಿ ಮಧ್ಯ ಬತ್ತದ ಕದಿರನ್ನು ಪೊಣಿಸಿ ಪ್ರಥಮವಾಗಿ ಕದಿರನ್ನು ಗರ್ಭಗುಡಿಯಲ್ಲಿ ಕಟ್ಟಿ, ನಂತರ ಇತರ ಗುಡಿಗಳಿಗೆ ಕಟ್ಟಲಾಯಿತು ಹಾಗೂ ನೆರೆದ ಭಕ್ತಾದಿಗಳಿಗೆ ಕದಿರು ವಿತರಿಸಲಾಯಿತು.ಸಂಪ್ರದಾಯ ಪಾಲನೆ: ಸಂಪ್ರದಾಯದಂತೆ ಪೊಂಗೇರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಕುಟುಂಬಸ್ಥರು ದೇವಾಲಯದಿಂದ ಕದಿರನ್ನು ಕೊಂಡೊಯ್ಯದೆ, ತಮ್ಮ ಮನೆಗಳಿಗೆ ಹಿಂತಿರುಗಿ ತಮ್ಮದೇ ಗದ್ದೆಯಿಂದ ಕದಿರು ಕೊಯ್ಯುವ ಮೂಲಕ ಹಳೆಯ ಸಂಪ್ರದಾಯವನ್ನು ಪಾಲಿಸಿದರು.ವಿಶೇಷ ಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಪೊಂಗೇರ ಚಂಗಪ್ಪ, ಕಣಿಯರ ನಾಣಯ್ಯ, ಜೀವನ್, ಕೋಲೆಯಂಡ ಅಶೋಕ್, ಬೊಳ್ಳನಮ್ಮಂಡ ಪೊನ್ನಪ್ಪ, ಐರಿರ ಉತ್ತಪ್ಪ ಸೇರಿದಂತೆ ನಾಪೋಕ್ಲು ಕೊಡವ ಸಮಾಜ ಹಾಗೂ ಸುತ್ತಮುತ್ತಲಿನ ನಾಗರಿಕರು ಉಪಸ್ಥಿತರಿದ್ದರು.