ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಯುವತಿ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪೊಲೀಸರು ಒಟ್ಟು 11.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಯುವತಿ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪೊಲೀಸರು ಒಟ್ಟು 11.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ದೆಹಲಿಯಿಂದ ನಗರಕ್ಕೆ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಯುವತಿ ಸೇರಿ ಇಬ್ಬರು ಆರೋಪಿಗಳನ್ನು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಗಂಗೊಂಡನಹಳ್ಳಿ ನಿವಾಸಿ ಇಮ್ರಾನ್ ಪಾಷಾ (28) ಮತ್ತು ಈತನ ಸ್ನೇಹಿತೆ ಹೊಸಕೋಟೆ ನಿವಾಸಿ ಆಯಿಷಾ ಸಿದ್ದಿಕಿ (27) ಬಂಧಿತರು. ಆರೋಪಿಗಳಿಂದ 11.44 ಕೋಟಿ ರು.ಮೌಲ್ಯದ 5.72 ಕೆ.ಜಿ. ತೂಕದ ಎಂಡಿಎಂಎ ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ಸಾದಿಯಾ ಎಂಬಾಕೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿ ಸಾದಿಯಾ ಪತಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಳಿಕ ಸಾದಿಯಾ ಮೇಲೆ ನಿಗಾವಹಿಸಿದ್ದಾಗ, ಮಾದಕ ವಸ್ತು ಸೇವನೆ ಮಾಡುತ್ತಿದ್ದ ಇಮ್ರಾನ್ ಪಾಷಾ ಮತ್ತು ಆಯಿಷಾ ಸಿದ್ದಿಕಿಯನ್ನು ಬಳಸಿಕೊಂಡು ದಂಧೆ ಆರಂಭಿಸಿರುವುದು ಗೊತ್ತಾಗಿದೆ. ಅದರಂತೆ ಈ ಇಬ್ಬರು ಆರೋಪಿಗಳನ್ನು ದೆಹಲಿಯಲ್ಲಿರುವ ತನ್ನ ಸಹಚರನ ಬಳಿ ಕಳುಹಿಸಿ ಡ್ರಗ್ಸ್‌ ವಸ್ತುಗಳನ್ನು ನಗರಕ್ಕೆ ತರಿಸುತ್ತಿದ್ದಳು. ಅದನ್ನು ಈ ಇಬ್ಬರು ಆರೋಪಿಗಳು ವ್ಯಾನಿಟಿ ಬ್ಯಾಗ್‌ಗಳಲ್ಲಿ ಇರಿಸಿಕೊಂಡು ರಸ್ತೆ ಮಾರ್ಗವಾಗಿ ಬರುತ್ತಿದ್ದರು. ನಂತರ ನಿರ್ಜನ ಪ್ರದೇಶದಲ್ಲಿ ಮಾದಕ ವಸ್ತು ಇರಿಸಿ, ಮೊಬೈಲ್‌ ಲೋಕೇಷನ್‌ ಮೂಲಕ ಗ್ರಾಹಕರಿಗೆ ಕಳುಹಿಸಿ, ಹಣ ಪಡೆದು ದಂಧೆ ನಡೆಸುತ್ತಿದ್ದಳು. ಹೀಗಾಗೆ ಸುಮಾರು ಆರೇಳು ತಿಂಗಳಿಂದ ವ್ಯವಹಾರ ನಡೆಸುತ್ತಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ನ.22ರಂದು ಕೆಂಚೇನಹಳ್ಳಿಯಿಂದ ಹಾರೋಹಳ್ಳಿ ಕಡೆ ತೆರಳುವ ರಸ್ತೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದರಂತೆ ದಾಳಿ ನಡೆಸಿ ಮಾದಕ ವಸ್ತು ಸಮೇತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಯ ಬಂಧನ:

ಮತ್ತೊಂದು ಪ್ರಕಣದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿನೋಬನಗರ ನಿವಾಸಿ ಶೇಖ್‌ ಮುದಾಸೀರ್‌ (38) ಬಂಧಿತ. ಆರೋಪಿಯಿಂದ 30 ಲಕ್ಷ ರು.ಮೌಲ್ಯದ 150 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಆರೋಪಿ ಕೇರಳ ಮತ್ತು ಇತರೆಡೆ ಮಾದಕ ವಸ್ತುಗಳನ್ನು ಖರೀದಿಸಿ ನಗರಕ್ಕೆ ತಂದು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.