ಸಾರಾಂಶ
ಕತ್ತೆಕಿರುಬ ನಡೆಸಿದ ದಾಳಿಗೆ 7 ಕುರಿಮರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಕೆ. ಕಾಟಾಪುರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕನಕಗಿರಿ : ಕತ್ತೆಕಿರುಬ ನಡೆಸಿದ ದಾಳಿಗೆ 7 ಕುರಿಮರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಕೆ. ಕಾಟಾಪುರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಶುಕ್ರವಾರ ತಡರಾತ್ರಿ ಮಳೆ ಸುರಿಯುತ್ತಿದ್ದರಿಂದ ಕುರಿಗಾಹಿಗಳಿಗೆ ಕುರಿಮರಿಯನ್ನು ಹೊತ್ತೊಯ್ಯುವ ಸದ್ದು ಕೇಳಿಸಿಲ್ಲ. ಬೆಳಗಿನ ಜಾವ ಹಟ್ಟಿ ಸುತ್ತಮುತ್ತ ಕುರಿ ನೋಡಿದರೆ ಕಾಣಸಿಗಲಿಲ್ಲ. ಕುರಿಗಾಹಿಗಳು ಹುಡುಕಿದಾಗ ಕೆರೆ ಪಕ್ಕದ ಬತ್ತದ ಗದ್ದೆಯಲ್ಲಿ ಕುರಿಮರಿಯ ದೇಹದ ತುಣುಕುಗಳು ಕಂಡು ಬಂದಿದೆ. ತಕ್ಷಣ ಕುರಿಗಾಹಿಗಳು ಅಧಿಕಾರಿಗಳ ಗಮನಕ್ಕೆ ತಂದರು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕುರಿಗಾಹಿ ಯಮನೂರಪ್ಪ ಪಚ್ಚೇರ್ ಅವರಿಗೆ ಸೇರಿದ ೭ ಕುರಿಮರಿಗಳು ಕತ್ತೆಕಿರುಬ ದಾಳಿಗೆ ಬಲಿಯಾಗಿವೆ. ಹೆಜ್ಜೆ ಗುರುತುಗಳ ಆಧಾರದ ಮೇಲೆ ಕತ್ತೆಕಿರುಬ ಎಂದು ಅರಣ್ಯಪಾಲಕ ಶಿವಕುಮಾರ ವಾಲಿ ದೃಢಪಡಿಸಿದ್ದಾರೆ. ಯಮನೂರಪ್ಪ ಪಚ್ಚೇರ್ ಅವರಿಗೆ ಲಕ್ಷಾಂತರ ರು. ನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ನವಲಿ ಅರಣ್ಯ ಪ್ರದೇಶದಲ್ಲಿ ಕತ್ತೆಕಿರುಬ ಸಂತತಿ ಇದೆ. ಎರಡ್ಮೂರು ವರ್ಷಗಳ ಹಿಂದೆ ಮಲ್ಲಿಗೆವಾಡ ಹಾಗೂ ನವಲಿಯಲ್ಲಿ ಕುರಿಗಳ ಮೇಲೆ ದಾಳಿ ಮಾಡಿದ್ದವು. ಈಗ ಕೆ. ಕಾಟಾಪುರದಲ್ಲಿ ದಾಳಿ ನಡೆಸಿರುವುದು ಕಂಡು ಬಂದಿದೆ. ಕತ್ತೆಕಿರುಬ ದಾಳಿ ಮಾಡುವುದಕ್ಕಿಂತ ಸತ್ತ ಪ್ರಾಣಿಗಳನ್ನೇ ತಿನ್ನುವುದು ಹೆಚ್ಚು. ಆಹಾರದ ಕೊರತೆಯಾದಾಗ ದಾಳಿ ಮಾಡಬಹುದು. ಸರ್ಕಾರ ಹಾಗೂ ಇಲಾಖೆಯಿಂದ ಪರಿಹಾರ ನೀಡಲು ಇ-ಪರಿಹಾರ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಮಾಹಿತಿ ಕಳುಹಿಸಲಾಗಿದೆ. ಪರಿಹಾರದ ಮೊತ್ತವನ್ನು ಕುರಿಗಾಹಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಅರಣ್ಯಪಾಲಕ ಶಿವಕುಮಾರ ವಾಲಿ ತಿಳಿಸಿದ್ದಾರೆ.
ಈ ವೇಳೆ ಪಶು ಆಸ್ಪತ್ರೆಯ ಸಹಾಯಕ ಹೊನ್ನೂರುಬಾಷಾ ಹಿಂದಲಮನಿ, ಗ್ರಾಮ ಸಹಾಯಕ ಹನುಮಂತಪ್ಪ, ರೈತರಾದ ಪಂಪಾಪತಿ ಪಚ್ಚಿ, ಶರಣಪ್ಪ ಪಚ್ಚಿ, ಮಂಜುನಾಥ ಪಚ್ಚೇರ, ನಾಗನಗೌಡ ಇತರರಿದ್ದರು.