ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ:ಪರಿಶಿಷ್ಟ ಜಾತಿಯಲ್ಲಿ ತಾರತಮ್ಯ ಹೋಗಲಾಡಿಸಲು ಒಳಮೀಸಲಾತಿ ನೀಡುವ ಬಗ್ಗೆ ಸದಾಶಿವ ಆಯೋಗ ರಚಿಸಿದ್ದು ಕಾಂಗ್ರೆಸ್ ಸರ್ಕಾರ. ಅತ್ಯಂತ ಶೋಷಣೆಗೆ ಒಳಗಾದ ಸಮುದಾಯಕ್ಕೆ ಸುಪ್ರಿಂಕೋರ್ಟ್ ಒಳಮೀಸಲಾತಿ ನೀಡುವ ಬಗ್ಗೆ ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ ನೀಡಿರುವುದು ಅತ್ಯಂತ ಸ್ವಾಗತಾರ್ಹ. ಒಳಮೀಸಲಾತಿ ಜಾರಿಗೆ ನನ್ನ ಒಪ್ಪಿಗೆ ಇದೆ ಎಂದು ಶಾಸಕ ಡಾ.ಟಿ.ಬಿ. ಜಯಚಂದ್ರ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಾತಂಗ ಸೇವಾನಿರತ ಮತ್ತು ನಿವೃತ್ತ ನೌಕರರ ಬಳಗದ ವತಿಯಿಂದ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಮಾತಂಗ (ಮಾದಿಗ) ಸಮುದಾಯದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶೋಷಣೆಗೊಳಗಾದ ಸಮುದಾಯಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದರು. ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, ಕಳೆದ 30 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಒಳಮೀಸಲಾತಿಗಾಗಿ ಹೋರಾಟ ಮಾಡಿದ್ದಾರೆ. ಒಳಮೀಸಲಾತಿಯನ್ನು ನಾವು ಕೇಳುತ್ತಿರುವುದು ಸಾಮಾಜಿಕ ನ್ಯಾಯಕ್ಕಾಗಿಯೇ ಹೊರತು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಲಿಕ್ಕಲ್ಲ. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಯವರಿಗೂ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ದೇಶದ ಪ್ರಧಾನಿ ಕೂಡ ಒಳಮೀಸಲಾತಿಯ ಪರವಾಗಿದ್ದಾರೆ. ದೇಶದಲ್ಲಿನ ಎನ್.ಡಿ.ಎ. ಸರ್ಕಾರ ಒಳಮೀಸಲಾತಿ ಜಾರಿಗೆ ನಾವು ಬದ್ಧರಿದ್ದೇವೆ ಎಂದು ಸುಪ್ರಿಂ ಕೋರ್ಟಿಗೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮುಖಾಂತರ ಅಫಿಡವಿಟ್ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಕೇಂದ್ರದ ಎನ್.ಡಿ.ಎ. ಸರ್ಕಾರ ಒಳಮೀಸಲಾತಿಗೆ ಬದ್ಧವಾಗಿದೆ ಎಂದರು.ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಅತ್ಯಂತ ಹಿಂದುಳಿದ ಮಾದಿಗ ಸಮುದಾಯದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದಿರುವುದು ಶ್ಲಾಘನೀಯ. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು. ದೇಶದಲ್ಲಿ ಸಮ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಜತೆಯಾಗಿ ಕೆಲಸ ಮಾಡೋಣ ಎಂದರು.ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಮಾದಿಗ ಸಮುದಾಯದ ವಿದ್ಯಾರ್ಥಿಗಳಲ್ಲಿ ಅತ್ಯಂತ ಪ್ರತಿಭಾವಂತರಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಮುದಾಯದ ನೌಕರರು ತಮ್ಮ ವೇತನದಲ್ಲಿ ಕನಿಷ್ಠ ಶೇ. 10 ರಷ್ಟನ್ನು ಮೀಸಲಿಟ್ಟು ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಆದಿಜಾಂಬವ ನಿಗಮದಲ್ಲಿ ಹಲವಾರು ಸೌಲಭ್ಯಗಳನ್ನು ಮಾದಿಗ ಸಮುದಾಯಕ್ಕೆ ನೀಡಲಾಗುತ್ತಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು. 100ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೈದ್ಯರಾದ ಡಾ.ಅರುಂಧತಿ, ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರಪ್ಪ, ಚರಕ ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜು, ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ವೈ.ಕೆ.ಬಾಲಕೃಷ್ಣ, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ, ಬಿ.ಆರ್.ಸಿ. ಎಚ್.ರಂಗಪ್ಪ, ಜಿ.ಎನ್.ರಾಜಸಿಂಹ, ಕೊಟ್ಟ ಶಂಕರ್, ಮುಖ್ಯ ಶಿಕ್ಷಕ ರಾಮರಾಜ್, ರಾಜಣ್ಣ, ನರಸಿಂಹಮೂರ್ತಿ, ಮಹದೇವಪ್ಪ, ರವಿ, ನವೋದಯ ಬಳಗದ ಜಯರಾಮಕೃಷ್ಣ, ಉಪನ್ಯಾಸಕ ಶಿವಣ್ಣ ಹೆಂದೊರೆ, ಕೆಪಿಸಿಸಿ ಸದಸ್ಯ ಕೋಟೆ ಲೋಕೇಶ್, ಪಿ.ಬಿ.ನರಸಿಂಹಯ್ಯ, ನಾಗರಾಜು ಹಾಜರಿದ್ದರು.