ನನಗೂ ಮಂತ್ರಿಯಾಗುವ ಆಸೆ ಇದ್ದೇ ಇದೆ

| Published : Jun 19 2024, 01:02 AM IST

ಸಾರಾಂಶ

ನನಗೂ ಮಂತ್ರಿ ಆಗಬೇಕೆಂದು ಆಸೆ ಇದ್ದೇ ಇರುತ್ತದೆ. ಹಿರಿಯ ರಾಜಕಾರಣಿ, ಕಳೆದ 20 ವರ್ಷಗಳಿಂದ ಶಾಸಕನಾಗಿದ್ದು, ಒಮ್ಮೆ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಲ್ಲದೇ ಈ ಭಾಗದಲ್ಲಿ ನನ್ನದೇ ಗುರುತು ಇದ್ದು, ಪಕ್ಷದ ಕಾರ್ಯಾಧ್ಯಕ್ಷನಾಗಿದ್ದೇನೆ. ಮಂತ್ರಿ ಸ್ಥಾನ ನೀಡುವಾಗ ನನಗಿರುವ ಸಿನಿಯಾರಿಟಿ ಪರಿಗಣನೆಗೆ ಬರುತ್ತದೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನನಗೂ ಮಂತ್ರಿ ಆಗಬೇಕೆಂದು ಆಸೆ ಇದ್ದೇ ಇರುತ್ತದೆ. ಹಿರಿಯ ರಾಜಕಾರಣಿ, ಕಳೆದ 20 ವರ್ಷಗಳಿಂದ ಶಾಸಕನಾಗಿದ್ದು, ಒಮ್ಮೆ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಲ್ಲದೇ ಈ ಭಾಗದಲ್ಲಿ ನನ್ನದೇ ಗುರುತು ಇದ್ದು, ಪಕ್ಷದ ಕಾರ್ಯಾಧ್ಯಕ್ಷನಾಗಿದ್ದೇನೆ. ಮಂತ್ರಿ ಸ್ಥಾನ ನೀಡುವಾಗ ನನಗಿರುವ ಸಿನಿಯಾರಿಟಿ ಪರಿಗಣನೆಗೆ ಬರುತ್ತದೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರಿಂದ ತಮಗೆ ಮಂತ್ರಿ ಸ್ಥಾನ ಸಿಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ನಾನು ಕೇಳಿಲ್ಲ. ಪಕ್ಷದಲ್ಲೂ ಆ ಚರ್ಚೆ ಇಲ್ಲ. ಸಹಜವಾಗಿ ನನಗೂ ಮಂತ್ರಿ ಆಗಬೇಕೆಂದು ಆಸೆ ಇದ್ದೇ ಇರುತ್ತದೆ. ಮಂತ್ರಿ ಸ್ಥಾನ ನೀಡುವಾಗ ನನಗಿರುವ ಸಿನಿಯಾರಿಟಿ ಪರಿಗಣನೆಗೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಾಸಕರಾದ ವಿನಯ ಕುಲಕರ್ಣಿ, ಲಕ್ಷ್ಮಣ ಸವದಿ ಅವರು ಮಂತ್ರಿ ಆಗುತ್ತಾರೆ ಎಂಬ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿಲ್ಲ. ನನ್ನ ಮುಂದೆ ಏನೂ ಚರ್ಚೆ ಮತ್ತು ಸಭೆ ಆಗಿಲ್ಲ. ಹಿಂದೆ ಮಂತ್ರಿ ಆದಾಗಲೂ ನಾನು ಯಾರಿಗೂ ಮನವಿ ಮಾಡಿಕೊಂಡಿಲ್ಲ. ನನ್ನ ಸಾಮರ್ಥ್ಯ ನೋಡಿ ಕೊಟ್ಟಿದ್ದರು‌. ಈಗಲೂ ನನ್ನ ಬಗ್ಗೆ ಪಕ್ಷದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಹಾಗಾಗಿ, ಈಗಲೂ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಅಲ್ಲದೇ ನಾನು ಕೇಳದೇ ಕಾರ್ಯಾಧ್ಯಕ್ಷ ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಹಾಗಾಗಿ, ಮನವಿ ಮಾಡಿ, ಒತ್ತಡ ಹಾಕಿ ಮಂತ್ರಿ ಸ್ಥಾನ ಪಡೆಯುವ ಅವಶ್ಯಕತೆ ಇಲ್ಲ. ನನ್ನ ವ್ಯಕ್ತಿತ್ವ ಗುರುತಿಸಿ ನೀಡಬೇಕು. ಇನ್ನು ಸಂಪುಟ ಪುನರ್ ರಚನೆಯಾದರೆ ನನ್ನ ಸಿನಿಯಾರಿಟಿ ನೋಡಿ ಕೊಡಬಹುದು ಎಂದು ಹೇಳಿದರು.ಲೋಕಸಭೆ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಸೋಲು, ಗೆಲವು ಸಾಮಾನ್ಯ. ಚುನಾವಣೆಯಲ್ಲಿ ಸೋತ ತಕ್ಷಣ ಉಸ್ತುವಾರಿ ಸಚಿವರ ಬದಲಾವಣೆ ಮಾಡೋದು ಇರುವುದಿಲ್ಲ‌. ಚುನಾವಣೆ ಸೋಲಿಗೆ ಸಾಕಷ್ಟು ಕಾರಣಗಳಿರುತ್ತವೆ. ಪ್ರಾದೇಶಿಕತೆ ಮತ್ತು ಕ್ಷೇತ್ರವಾರು ಬೇರೆ ಬೇರೆ ಕಾರಣಗಳು ಇರುತ್ತವೆ ಎಂದು ವಿವರಿಸಿದರು.ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರಕ್ಕೆ ಕಳೆದ 25 ವರ್ಷಗಳಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಈಗ ಸ್ವಾಮೀಜಿಯವರು ತೀವ್ರವಾಗಿ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ನಾವೆಲ್ಲ ಅವರಿಗೆ ಬೆಂಬಲಿಸಿದ್ದೇವೆ. ಪಂಚಮಸಾಲಿ ಹೋರಾಟದಲ್ಲಿ ಬಿಜೆಪಿ ಸರ್ಕಾರ ಸುಳ್ಳು ಭರವಸೆ ಕೊಟ್ಟು ದಾರಿ ತಪ್ಪಿಸಿದೆ. ಎಲ್ಲ ಸಮಾಜಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು. ಎಲ್ಲ ಸಮಾಜದಂತೆ ನಮ್ಮನ್ನು ಪರಿಗಣಿಸಿ ಅಂತಾ ಸಿಎಂಗೆ ಮನವಿ ಮಾಡಿದ್ದೇವೆ. ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಈಗ ಹೋರಾಟ ಆರಂಭಿಸುತ್ತೇವೆ. ಸ್ವಾಮೀಜಿಗಳ ಹೋರಾಟದಲ್ಲಿ ನಾವೆಲ್ಲ ಭಾಗಿಯಾಗುತ್ತೇವೆ. ಅಲ್ಲದೇ ಮುಖ್ಯಮಂತ್ರಿಗಳನ್ನೂ ಭೇಟಿಯಾಗುತ್ತೇವೆ ಎಂದು ತಿಳಿಸಿದರು‌.ದರ್ಶನ ಕೇಸ್‌ನಲ್ಲಿ ಒತ್ತಡ ಹಾಕಲು ಆಗಲ್ಲ: ಸಹಜವಾಗಿ ಚಿತ್ರನಟ ದರ್ಶನ್ ಅವರು ರ್‍ಯಾಶ್‌ ಆಗಿ ವರ್ತಿಸುತ್ತಿದ್ದರು. ಆದರೆ, ನಮ್ಮ ಜತೆ ಇರುವಾಗ ಆ ರೀತಿ ಇರುತ್ತಿರಲಿಲ್ಲ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿನಯ ಕುಲಕರ್ಣಿ, ದರ್ಶನ್ ಅವರ ಮೇಲೆ ಆರೋಪ ಇದ್ದಿದ್ದಕ್ಕೆ ಪೊಲೀಸರು ಬಂಧಿಸಿ, ಕ್ರಮ ತೆಗೆದುಕೊಂಡಿದ್ದಾರೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ. ತಪ್ಪು ಯಾರೇ ಮಾಡಿದರೂ ಅದು ತಪ್ಪೆ. ಏನು ಶಿಕ್ಷೆ ಆಗಬೇಕು ಎಂಬುದನ್ನು ಕೋರ್ಟ್ ತೀರ್ಮಾನಿಸುತ್ತದೆ ಎಂದರು.ದರ್ಶನ್ ಪ್ರಕರಣದಲ್ಲಿ ಪ್ರಭಾವಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಕೇಸ್‌ನಲ್ಲಿ ಯಾರೂ ಒತ್ತಡ ಹಾಕಲು ಬರೋದಿಲ್ಲ. ಕೇಸ್ ಮುಗಿದು ಹೋಗಿದೆ. ಇಡೀ ರಾಜ್ಯಕ್ಕೆ ಪ್ರಕರಣದ ಬಗ್ಗೆ ಗೊತ್ತಿದೆ. ಅಲ್ಲದೇ ಮಾಧ್ಯಮಗಳಲ್ಲಿ ಯುವಕನ ಪರ ಸಾಕಷ್ಟು ತೋರಿಸಿದ್ದಿರಿ. ಹಾಗಾಗಿ, ಯಾವುದೇ ರೀತಿ ಒತ್ತಡ ಹಾಕಲು ಆಗೋದಿಲ್ಲ ಎಂದು ತಿಳಿಸಿದರು.