ನಾನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರಮೋದ್ ಮಧ್ವರಾಜ್
KannadaprabhaNewsNetwork | Published : Oct 11 2023, 12:46 AM IST
ನಾನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರಮೋದ್ ಮಧ್ವರಾಜ್
ಸಾರಾಂಶ
ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಕ್ಕಿದರೇ ಕಷ್ಟ ಆಗುತ್ತದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಟಿಕೆಟ್ ಸಿಕ್ಕಿದಾಗ ಈ ಅನುಭವ ಆಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ ರಾಜಕೀಯದಲ್ಲಿರುವ ಪ್ರತಿಯೊಬ್ಬರಿಗೂ ಹುದ್ದೆ ಅಧಿಕಾರದ ಆಸೆ ಇರುತ್ತದೆ, ಇಲ್ಲದಿದ್ದರೇ ಯಾರೂ ರಾಜಕೀಯಕ್ಕೆ ಬರುತ್ತಿರಲಿಲ್ಲ. ನಾನೂ ಕೂಡ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಮಂಗಳವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದರು. ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಕ್ಕಿದರೇ ಕಷ್ಟ ಆಗುತ್ತದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಟಿಕೆಟ್ ಸಿಕ್ಕಿದಾಗ ಈ ಅನುಭವ ಆಗಿದೆ. ಆದ್ದರಿಂದ ನಾನು ಈಗಾಗಲೇ ಉಡುಪಿ ಚಿಕ್ಕಮಗಳೂರಿನ ಬಿಜೆಪಿಯ ಪ್ರತಿಯೊಂದು ಶಕ್ತಿಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ, ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ, ಬೇರೆಯವರಿಗೆ ನೀಡಿದರೆ ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದರು. ನನ್ನ ಕೊನೆಯ ಉಸಿರುವವರೆಗೆ ಬಿಜೆಪಿಯಲ್ಲಿಯೇ ಇರುತ್ತೇನೆ ಎಂದು ಸ್ಷಷ್ಟವಾಗಿ ಹೇಳಿದ್ದೇನೆ, ಆದರೂ ಕಾಂಗ್ರೆಸ್‌ನವರು ಯಾಕೆ ಇನ್ನೂ ನಾನು ವಾಪಾಸ್ ಬರುತ್ತೇನೆ ಎಂದು ಚರ್ಚಿಸುತಿದ್ದಾರೋ, ಅವರಿಗೆ ಇನ್ಯಾವ ಭಾಷೆಯಲ್ಲಿ ಅರ್ಥ ಮಾಡಿಸಬೇಕೋ ಗೊತ್ತಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗ್ಯಾರಂಟಿಯಿಂದ ಅನುದಾನ ಇಲ್ಲ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನನ್ನ ವಿರೋಧ ಇಲ್ಲ, ಆದರೆ ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಇತರ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ, ಒಬ್ಬ ಶಾಸಕನಿಗೆ ಕನಿಷ್ಟ 1000 ಕೋಟಿ ರು. ಅನುದಾನ ನೀಡಬೇಕಾಗುತ್ತದೆ. ಅದನ್ನೂ ನೀಡಲಿಕ್ಕೆ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದವರು ಆರೋಪಿಸಿದರು. ಇದೇ ಸಂದರ್ಭದಲ್ಲಿ ಪ್ರಮೋದ್ ಅವರು ತಾವು ಪ್ರೆಸ್ ಕ್ಲಬ್ ಗೆ ದೇಣಿಗೆಯಾಗಿ ನೀಡಿದ ಪಾರ್ಕಿಂಗ್ ರೂಫ್ ನ್ನು ಉದ್ಘಾಟಿಸಿದರು.