ಕನ್ನಡಪ್ರಭವಾರ್ತೆ ತುರುವೇಕೆರೆ

ನಾನು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಯಿಂದ ಟಿಕೆಟ್ ಕೊಟ್ರೂ ನಾನೇ ಕ್ಯಾಂಡಿಡೇಟ್, ಎನ್ ಡಿ ಎ ಯಿಂದ ಟಿಕೆಟ್ ಕೊಟ್ರೂ ನಾನೇ ಕ್ಯಾಂಡಿಡೇಟ್. ಇದರಲ್ಲಿ ಡೌಟೇ ಬೇಡ ಎಂದು ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಸ್ಪಷ್ಟಪಡಿಸಿದರು.

ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಇರುವ ತಮ್ಮ ಫಾರಂ ಹೌಸ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಚುನಾವಣೆಗೆ ಇನ್ನೂ ಎರಡು ವರ್ಷಗಳು ಇವೆ. ಅಷ್ಟರಲ್ಲೇ ಎಲ್ಲಾ ಪಕ್ಷಗಳಲ್ಲಿ ಮುಂದಿನ ಚುನಾವಣೆಗೆ ನಾನೇ ಕ್ಯಾಂಡಿಡೇಟ್ ಎಂದು ಅವರವರೇ ಪ್ರಚಾರ ಮಾಡುತ್ತಿದ್ದಾರೆ. ಇತ್ತ ನಮ್ಮ ಬಿಜೆಪಿ ಕಾರ್ಯಕರ್ತರು ಇವರುಗಳ ಆರ್ಭಟಕ್ಕೆ ತಕ್ಕ ಉತ್ತರ ಕೊಡುವಂತೆ ಆಗ್ರಹಿಸಿದ್ದರಿಂದ ಅನಿವಾರ್ಯವಾಗಿ ಈ ಘೋಷಣೆ ಮಾಡಬೇಕಾಗಿದೆ ಎಂದು ಮಸಾಲಾ ಜಯರಾಮ್ ತಿಳಿಸಿದರು. ನಾನು ಎರಡು ಬಾರಿ ಸೋತಿದ್ದೇನೆ. ಒಮ್ಮೆ ಶಾಸಕನಾಗಿದ್ದೇನೆ. ಪ್ರತಿ ಬಾರಿ ಚುನಾವಣೆಗೆ ನಿಂತಾಗಲೂ ಈ ಕ್ಷೇತ್ರದ ಜನತೆ ಕನಿಷ್ಠ 55 ಸಾವಿರದಿಂದ 60 ಸಾವಿರ ಮತಗಳನ್ನು ನೀಡಿ ಆಶೀರ್ವಾದಿಸಿದ್ದಾರೆ. ಕಳೆದ ಬಾರಿಯೂ ನನಗೆ 60 ಸಾವಿರದಷ್ಟು ಮತಗಳನ್ನು ನೀಡಿದ್ದಾರೆ. 60 ಸಾವಿರ ಮತಗಳನ್ನು ನೀಡಿ ಬೆನ್ನು ತಟ್ಟಿದ ಬಿಜೆಪಿ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳನ್ನು ನಿರಾಸೆ ಮಾಡಲು ಸಾಧ್ಯವೇ ಇಲ್ಲ. ತಮಗೆ ಬಿಜೆಪಿ ಹೈಕಮಾಂಡ್ ಮೊದಲು ಪಕ್ಷ ಸಂಘಟನೆ ಮಾಡಲು ಸೂಚಿಸಿದೆ. ಎನ್ ಡಿ ಎ ಇರುತ್ತೋ ಇಲ್ಲವೋ ಗೊತ್ತಿಲ್ಲ. ಮೈತ್ರಿ ಇದ್ದರೂ ಸಹ ನಾನೇ ಎನ್ ಡಿ ಎ ಕ್ಯಾಂಡಿಡೇಟ್, ಮೈತ್ರಿ ಇಲ್ಲದಿದ್ದರೆ ಸಹಜವಾಗಿ ನಾನೇ ಬಿಜೆಪಿ ಕ್ಯಾಂಡಿಡೇಟ್ ಎಂದು ಮಸಾಲಾ ಜಯರಾಮ್ ಹೇಳಿದರು. ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ನಾನು ಕ್ಯಾಂಡಿಡೇಟ್ ಆಗ್ತೀನಿ. ಟಿಕೆಟ್ ತರುವ ಜವಾಬ್ದಾರಿ ನನ್ನದು. ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ನೆರೆದಿದ್ದ ಕಾರ್ಯಕರ್ತರಿಗೆ ಹೇಳಿದರು. ನಾನು ಜೆಡಿಎಸ್ ಸೇರುತ್ತೇನೆಂದು ಹೇಳಿರುವ ಶಾಸಕ ಎಂ.ಟಿ.ಕೃಷ್ಣಪ್ಪನವರು ಯಾಕೆ ಇಂತಹ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ನಾನು ಬಿಜೆಪಿಯಲ್ಲಿದ್ದೇನೆ. ಬಿಜೆಪಿ ವರಿಷ್ಠರು ಏನು ಹೇಳುತ್ತಾರೋ ಹಾಗೆ ಮಾಡುತ್ತೇನೆ. ಮೈತ್ರಿ ಇದ್ದು ಇಲ್ಲಿಗೆ ಜೆಡಿಎಸ್ ನಿಂದ ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದು ನೀನು ಜೆಡಿಎಸ್ ನಿಂದ ನಿಲ್ಲು ಎಂದು ಆದೇಶಿಸಿದರೆ ಅದಕ್ಕೂ ನನ್ನ ಸಮ್ಮತಿ ಇದೆ. ಬದಲಾಗಿ ಈ ಕ್ಷೇತ್ರವನ್ನು ಬಿಜೆಪಿಗೇ ಬಿಟ್ಟು ಕೊಟ್ಟರೆ ಇನ್ನೂ ಒಳ್ಳೆಯದೇ ಎಂದು ಮಸಾಲಾ ಜಯರಾಮ್ ಹೇಳಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಮಹೇಶ್, ನವೀನ್, ಹಿರಿಯ ಮುಖಂಡರಾದ ಕಡೇಹಳ್ಳಿ ಸಿದ್ದೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಸ್ವಪ್ನಾ ನಟೇಶ್, ಆಂಜನ್ ಕುಮಾರ್, ಆಶಾ ರಾಜಶೇಖರ್, ಚಿದಾನಂದ್, ಪ್ರಭಾಕರ್, ಉಗ್ರಪ್ಪ, ಪ್ರಸಾದ್, ನರಸಿಂಹ ಮೂರ್ತಿ, ಬೊಮ್ಮಲಿಂಗಯ್ಯ, ಕಣತೂರು ನಾಗೇಶ್, ಕೋಳಾಲ ರಘು, ಅರಳೀಕೆರೆ ಸತೀಶ್, ಪಾಂಡು, ಚೂಡಾಮಣಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.