ನಾನು ಅಪ್ಪಟ ಕಾಂಗ್ರೆಸ್ಸಿಗ, ಆರ್‌ಎಸ್‌ಎಸ್‌ಬಿಜೆಪಿ ಜತೆ ಕೈ ಜೋಡಿಸಲ್ಲ: ಶಿವಕುಮಾರ್‌

| Published : Aug 23 2025, 02:00 AM IST

ನಾನು ಅಪ್ಪಟ ಕಾಂಗ್ರೆಸ್ಸಿಗ, ಆರ್‌ಎಸ್‌ಎಸ್‌ಬಿಜೆಪಿ ಜತೆ ಕೈ ಜೋಡಿಸಲ್ಲ: ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗನಾಗಿದ್ದು, ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನಾನೀಗ ಪಕ್ಷ ಮುನ್ನಡೆಸುತ್ತಿದ್ದು, ಪಕ್ಷಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗನಾಗಿದ್ದು, ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನಾನೀಗ ಪಕ್ಷ ಮುನ್ನಡೆಸುತ್ತಿದ್ದು, ಪಕ್ಷಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

ಸದನದಲ್ಲಿ ಗುರುವಾರ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆಯನ್ನು ಡಿ.ಕೆ.ಶಿವಕುಮಾರ್‌ ಅವರು ಹೇಳಿದ್ದು ಶುಕ್ರವಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗತೊಡಗಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ವಿಧಾನಸಭೆ ಕಲಾಪದಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡುವಾಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು, ‘ನೀವೂ ಒಂದು ಸಲ ಆರ್‌ಎಸ್‌ಎಸ್‌ ಚಡ್ಡಿ ಹಾಕಿದ್ದೇನೆ ಎಂದು ಹೇಳಿದ್ದೀರಲ್ಲ ಎಂದು ಕಿಚಾಯಿಸಿದರು. ಅಷ್ಟು ಹೇಳುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ಆರ್‌ಎಸ್‌ಎಸ್‌ ಪ್ರಾರ್ಥನೆಯಾದ, ‘ನಮಸ್ತೆ ಸದಾ ವತ್ಸಲೆ ಮಾತೃಭೂಮೆ...’ ಎಂದು ಹಾಡಿದರು.

ಅದಕ್ಕೆ ಸಂಬಂಧಿಸಿ ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ನಾನು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ. ನಾನು ಅಪ್ಪಟ ಕಾಂಗ್ರೆಸ್ಸಿಗ. ನನ್ನ ಜೀವ, ರಕ್ತ ಎಲ್ಲವೂ ಕಾಂಗ್ರೆಸ್‌. ಜೆಡಿಎಸ್‌-ಬಿಜೆಪಿ ಕುರಿತು ಸಂಶೋಧನೆ ಮಾಡುತ್ತಿರುತ್ತೇನೆ. ಅದೇ ರೀತಿ ಆರ್‌ಎಸ್‌ಎಸ್‌ ಬಗ್ಗೆಯೂ ತಿಳಿದುಕೊಂಡಿದ್ದೇನಷ್ಟೆ ಎಂದರು.

ನಾನು ಪ್ರತಿ ರಾಜಕೀಯ ಪಕ್ಷಗಳ ಬಗ್ಗೆಯೂ ನನ್ನದೇ ರೀತಿಯಲ್ಲಿ ಸಂಶೋಧನೆ ನಡೆಸಿದ್ದೇನೆ. ರಾಜ್ಯದಲ್ಲಿ ಆರ್‌ಎಸ್‌ಎಸ್‌ ಹೇಗೆ ತನ್ನ ಸಂಘಟನೆ ಕಟ್ಟಿತು ಎಂಬುದು ನನಗೆ ತಿಳಿದಿದೆ. ಪ್ರತಿ ತಾಲೂಕು, ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಸಾಕಷ್ಟು ಹಣ ಹೂಡಿಕೆ ಮಾಡುತ್ತಾ, ಮಕ್ಕಳನ್ನು ತಲುಪುವ ಕೆಲಸ ಮಾಡುತ್ತಿದೆ. ರಾಜಕೀಯ ವ್ಯಕ್ತಿಯಾದ ನಾನು ರಾಜಕೀಯ ಎದುರಾಳಿಗಳಲ್ಲಿ ಯಾರು ಸ್ನೇಹಿತರಿದ್ದಾರೆ, ಯಾರು ಶತ್ರುಗಳಿದ್ದಾರೆ ಎನ್ನುವುದನ್ನು ತಿಳಿಯಬೇಕಲ್ಲವೇ? ಹೀಗಾಗಿ ಆರ್‌ಎಸ್‌ಎಸ್‌ ಇತಿಹಾಸ ತಿಳಿದುಕೊಂಡಿದ್ದೇನೆ ಎಂದು ತಿಳಿಸಿದರು.

ಕೆಲ ಸಂದರ್ಭದಲ್ಲಿ ಕೆಲವೊಂದು ಸಂಸ್ಥೆಗಳಲ್ಲಿ ಒಂದಷ್ಟು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನೂ ನಾವೂ ಗಮನಿಸಬೇಕು. ನೇರವಾಗಿ, ದಿಟ್ಟವಾಗಿ ಮಾತನಾಡುವುದು ನಮ್ಮ ಗುಣ. ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸಬೇಕು. ನಾವು ಆ ಕೆಲಸ ಮಾಡಿದ್ದೇವೆ. ಮಾಧ್ಯಮದವರಲ್ಲೂ ಒಬ್ಬೊಬ್ಬರದು ಒಂದೊಂದು ಗುಣ ಇರುತ್ತದೆ. ಹಿಡಿಯಲು ಬಂದರೆ ಜಾರಿಕೊಳ್ಳುವ ಗುಣವಿದೆ. ಅದನ್ನು ನಾವು ಗಮನಿಸಬೇಕಲ್ಲವೇ ಎಂದು ಸೂಚ್ಯವಾಗಿ ಹೇಳಿದರು.