ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಖ್ಯಮಂತ್ರಿಗಳ ಸಲಹೆಗಾರ, ಆಳಂದ ಶಾಸಕ ಬಿ.ಆರ್ ಪಾಟೀಲ್ ಮುಂಬರುವ ಲೋಕಸಬಾ ಚುನಾವಣೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಮಗೆ ಅವಕಾಶ ಕಲ್ಪಿಸಿಕೊಡುವಂತೆ ವರಿಷ್ಠರನ್ನು ಕೋರಲೂ ಅವರು ಮುಂದಾಗಿದ್ದಾರೆ.ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಸವಣ್ಣನವರ ಪರಮ ಭಕ್ತ ಎಂದರಲ್ಲದೆ, ಇಡೀ ಬೀದರ್ ಜಿಲ್ಲೆ ಬಸವಣ್ಣನವರ ಕರ್ಮ ಭೂಮಿ, ಬಸವಣ್ಣನವರ ನಂಬಿಕೆ ಇರುವ ಎಲ್ಲಾ ಪ್ರಗತಿಪರ ಸಂಘಟನೆಗಳು, ಎಲ್ಲಾ ಜಾತಿ ಧರ್ಮದವರು ಚುನಾವಣೆಯಲ್ಲಿ ತಮಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ನಾನು ಶಾಸಕನಾಗಿರುವ ಆಳಂದ ಮತಕ್ಷೇತ್ರವು ಬೀದರ್ ಲೋಕಸಭಾ ಕ್ಷೇತ್ರದಡಿಯಲ್ಲೇ ಬರಲಿದೆ. ಹೀಗಾಗಿ ಲೋಕಸಭೆಯಲ್ಲಿ ಬೀದರ್‌ನಿಂದ ಕಣಕ್ಕಿಳಿಯುವ ಬಗ್ಗೆ ಶೀಘ್ರ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬೇಡಿಕೆ ಮಂಡಿಸುವೆ. ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರನ್ನೆಲ್ಲ ಕಂಡು ಬೀದರ್ ಟಿಕೆಟ್ ಕೇಳುವೆ ಎಂದಿದ್ದಾರೆ.2019ರ ಲೋಕ ಸಮರದಲ್ಲಿ ಬಿಜೆಪಿಯ ಭಗವಂತ ಖೂಬಾ ವಿರುದ್ಧ ಕಾಂಗ್ರೆಸ್‌ನಿಂದ ಈಶ್ವರ ಖಂಡ್ರೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಈಶ್ವರ ಕಂಡ್ರೆ ಸಚಿವರಾಗಿದ್ದಾರೆ. ತಮ್ಮ ಪುತ್ರ ಸಾಗರ್ ಖಂಡ್ರೆಯನ್ನ ಲೋಕಸಭೆ ಕಣಕ್ಕಿಳಿಸುವ ಸಿದ್ಧತೆಯಲ್ಲಿದ್ದಾರೆ. ಇನ್ನೊಂದೆಡೆ ಹುಮನಾಬಾದ್ ಮಾಜಿ ಶಾಸಕ ರಾಜಶೇಖರ್ ಪಾಟೀಲ್ ಕೂಡಾ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಇವೆಲ್ಲದರ ನಡುವೆ ಬಿ.ಆರ್ ಪಾಟೀಲ್ ಕೂಡಾ ಕಾಂಗ್ರೆಸ್ ಟಿಕೆಟ್‌ಗಾಗಿ ಇದೀಗ ತಮ್ಮ ಇಂಗಿತ ಹೊರಹಾಕಿರೋದು ಬೀದರ್ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಭಾರಿ ಸ್ಪರ್ಧೆಯೇ ಏರ್ಪಟ್ಟಂತಾಗಿದೆ.
ಬೀದರ್ ಲೋಕಸಭಾ ಕ್ಷೇತ್ರದಿಂದ 1980, 90ರ ದಶಕದಲ್ಲಿ ಸುದೀರ್ಘ ಅವಧಿಗೆ ರಾಮಚಂದ್ರ ವೀರಪ್ಪ ಪ್ರತಿನಿಧಿಸಿದ್ದರು. ನಂತರದಲ್ಲಿ ನರಸಿಂಗರಾವ ಸೂರ್ಯವಂಶಿ, ಧರ್ಮಸಿಂಗ್ ಇಲ್ಲಿಂದ ಗೆದ್ದು ದಿಲ್ಲಿಗೆ ಹೋಗಿದ್ದರು. ಇದೀಗ ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರವಿದೆ. ಹೆಚ್ಚಿನ ಸ್ಥಾನ ಗೆಲ್ಲಲು ಪಕ್ಷ ಹೆಣಗುತ್ತಿದೆ. ಈ ಸಂದರ್ಭದಲ್ಲಿ ಬಿ.ಆರ್ ಪಾಟೀಲರು ಕೂಡಾ ಬೀದರ್‌ನಿಂದ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರ ಗೈರು ಬಗ್ಗೆ ಸ್ಪಂದಿಸಿದ ಬಿಆರ್ ಪಾಟೀಲ್, ಅದು ಒಂದು ಧಾರ್ಮಿಕ ಸಭೆ, ಶಂಕರಾಚಾರ್ಯರು ಸಹ ಹೋಗುತ್ತಿಲ್ಲ. ದೇಶದಲ್ಲಿ ಅದು ಒಂದು ದೊಡ್ಡ ರಾಜಕೀಯ ಆಗಿ ಬಿಟ್ಟಿದೆ. ನಾಲ್ಕು ಜನ ಶಂಕರಾಚಾರ್ಯರು ಹೋಗುತ್ತಿಲ್ಲ ಇದು ಪ್ರಧಾನಿ ಮೋದಿಯವರಿಗೆ ದೊಡ್ಡ ಹಿನ್ನೆಡೆ ಎಂದು ಬಣ್ಣಿಸಿದರು.
ಸ್ಲೀಪಿಂಗ್ ಸರ್ಕಾರವೆಂಬ ಪೋಸ್ಟರ್ ವಾರ್ ಕುರಿತಂತೆ ಮಾತನಾಡಿದ ಬಿಆರ್ ಪಾಟೀಲರು, ಬಿಜೆಪಿಯವರು ಇನ್ನೂ ನಿದ್ರೆಯಲ್ಲಿದ್ದಾರೆ. ಸೋಲಿನ ಹತಾಶೆಯಿಂದ ಹೊರಬಂದಿಲ್ಲವೆಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.ಶಿವಮೊಗ್ಗದಲ್ಲಿ ಒಂದು ಲಕ್ಷ ಜನ ಸೇರಿಸಿ ಯುವನಿಧಿ ಲೋಕರ್ಪಣೆಯಾಗಿದೆ. ಇದು ಸ್ಲೀಪಿಂಗ್ ಸರ್ಕಾರಾನಾ? ಗೃಹ ಲಕ್ಷ್ಮೀಯಡಿ ಪ್ರತಿ ಕುಟುಂಬಕ್ಕೂ 2 ಸಾವಿರ ರು. ಹೋಗುತ್ತಿದೆ. ಇದು ಸ್ಲೀಪಿಂಗ್ ಸರ್ಕಾರವಾ? ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಇವೆಲ್ಲ ಜಾರಿಯಾಗಿಲ್ಲವೆ? ಅದ್ಹೇಗೆ ಸ್ಲೀಪಿಂಗ್ ಸರ್ಕಾರ ಅಂತೀರಾ? ಬಿಜೆಪಿಯವರು ಸೋಲಿನಿಂದ ಹತಾಶರಾಗಿ ಸಲ್ಲದ ಟೀಕೆಗೆ ಮುಂದಾಗಿದ್ದಾರೆಂದರು.
;Resize=(128,128))
;Resize=(128,128))
;Resize=(128,128))