ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿ

| Published : Feb 13 2024, 12:47 AM IST

ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೀಸಲು ಕ್ಷೇತ್ರ ಚಿತ್ರದುರ್ಗದಿಂದ ಸ್ಪರ್ಧಿಸಲು ತಾವು ಉತ್ಸುಕರಾಗಿದ್ದು ಟಿಕೆಟ್ ಗಾಗಿ ಹೈಕಮಾಂಡ್ ಮುಂದೆ ಮನವಿ ಮಾಡಿಕೊಳ್ಳುವುದಾಗಿ ಕೆಪಿಸಿಸಿ ವಕ್ತಾರ, ದಾವಣಗೆರೆಯ ಡಿ.ಬಸವರಾಜ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೀಸಲು ಕ್ಷೇತ್ರ ಚಿತ್ರದುರ್ಗದಿಂದ ಸ್ಪರ್ಧಿಸಲು ತಾವು ಉತ್ಸುಕರಾಗಿದ್ದು ಟಿಕೆಟ್ ಗಾಗಿ ಹೈಕಮಾಂಡ್ ಮುಂದೆ ಮನವಿ ಮಾಡಿಕೊಳ್ಳುವುದಾಗಿ ಕೆಪಿಸಿಸಿ ವಕ್ತಾರ, ದಾವಣಗೆರೆಯ ಡಿ.ಬಸವರಾಜ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್ಎಸ್‌ಯುಐನ ರಾಜ್ಯ ಸಮಿತಿ ಉಪಾಧ್ಯಕ್ಷನಾಗಿ, ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಪ್ರಸ್ತುತ ಕೆಪಿಸಿಸಿ ವಕ್ತಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯಿಂದಲೇ ಕಾಂಗ್ರೆಸ್ ಕಟ್ಟಾಳುವಾಗಿ ಕಳೆದ ನಾಲ್ಕು ದಶಕಗಳಿಂದ ಕೆಲಸ ಮಾಡಿದ್ದೇನೆ. ಭರಮಸಾಗರ ಮೀಸಲು ಕ್ಷೇತ್ರದಿಂದ ಸ್ಫರ್ಧೆ ಬಯಸಿ ನಾಲ್ಕಾರು ಬಾರಿ ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದೆ. ಕಾಂಗ್ರೆಸ್ ಪರಿಗಣಿಸಿರಲಿಲ್ಲ. ಮುಂದೊಂದು ದಿನ ಅವಕಾಶಗಳು ಸಿಗುತ್ತವೆ ಎಂಬ ಕಾರಣಕ್ಕೆ ಕಾದುಕೊಂಡು ಬಂದಿದ್ದೇನೆ. ಆರ್ಥಿಕವಾಗಿ ಅತ್ಯಂತ ಹಿಂದುಳಿದ ಬೋವಿ ಸಮುದಾಯ ಪ್ರತಿನಿಧಿಸುತ್ತಿದ್ದೇನೆ. ಈ ಸಮುದಾಯದ ಅಭಿವೃದ್ಧಿಗಾಗಿ ಭೋವಿ ಸಮುದಾಯಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಕೇಳಲಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಲ್ಕು ಕಡೆ ಮಾತ್ರ ಪರಿಗಣಿಸಿ ಟಿಕೆಟ್ ನೀಡಿತ್ತು. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನನಗೆ ಟಿಕೆಟ್ ನೀಡಿದರೆ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ನನಗೆ ರಾಜಕೀಯದಲ್ಲಿ ಯಾರೊಬ್ಬರೂ ಗಾಡ್ ಫಾದರ್ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸದ್ಯಕ್ಕೆ ನನ್ನ ರಾಜಕೀಯ ಗುರುಗಳು. ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷ ಭೋವಿ ಸಮುದಾಯದವರನ್ನು ಮೇಲ್ಮನೆಗೆ ನೇಮಕ ಮಾಡಿಲ್ಲ. ಜಗದೀಶ್ ಶೆಟ್ಟರ್ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕೆಂದು ಮನವಿ ಮಾಡಿದರು.

ಚಿತ್ರದುರ್ಗ ಪ್ರತಿನಿಧಿಸಿರುವ ಹಾಲಿ ಸಂಸದರು ಕೇವಲ ಟಿಎ, ಡಿಎಗೆ ಬಂದು ಹೋಗುತ್ತಿದ್ದು ಆಟಕ್ಕುಂಟು ಲೆಕ್ಕಕ್ಕೆ ಇಲ್ಲವೆನ್ನುವಂತಾಗಿದೆ. ಅವರಿಗೆ ಜವಾಬ್ದಾರಿನೇ ಇಲ್ಲ. ಕೇಂದ್ರದ ಮೋದಿ ಸರ್ಕಾರ ಭದ್ರಾ ಮೇಲ್ದಂಡೆಗೆ 5300 ಕೋಟಿ ರು. ನೀಡುವುದಾಗಿ ಹೇಳಿತ್ತು. ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಆದರೆ ಈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲೆಯ ರೈತರು ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸಚಿವರು ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಮಾಡದವರು ಮತ್ತೆ ಎಲ್ಲಿಯೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಂಜಿನಪ್ಪ, ರಾಮಣ್ಣ, ವೆಂಕಟೇಶ್, ರಾಜು, ದಾದಾಪೀರ್, ವಿನಾಯಕ, ಶಿವಕುಮಾರ್, ತಿಪ್ಪೇಸ್ವಾಮಿ, ವೀರೇಶ್, ಮತ್ತಿತರರಿದ್ದರು.