ಹಾನಗಲ್ಲ: ಹೊಸ ಸಂಪುಟದಲ್ಲಿ ಸಚಿವರಾಗುವ ಬಯಕೆ ಎಲ್ಲ ಶಾಸಕರದ್ದೂ ಇದ್ದೇ ಇರುತ್ತದೆ. ನಾನೂ ಸಚಿವ ಸ್ಥಾನ ಕೇಳಿದ್ದೇನೆ, ಆದರೆ ಅದೃಷ್ಟವೂ ಬೇಕು, ಪಕ್ಷದ ಹೈಕಮಾಂಡ್ ಈ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಪಕ್ಷ ನನ್ನನ್ನು ಬೆಳೆಸಿದೆ, ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿ ಸಣ್ಣವನಾಗುವುದಿಲ್ಲ. ನಾನು ಸಚಿವ ಸ್ಥಾನಕ್ಕಾಗಿ ಯಾರ ವಿರುದ್ಧವೂ ಮಾತಾಡುವಷ್ಟು ಸಣ್ಣವನಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಸ್ಪಷ್ಟಪಡಿಸಿದರು.ಶನಿವಾರ ಹಾನಗಲ್ಲಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ೬ ಶಾಸಕರೂ ಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಸದ್ಯಕ್ಕೆ ಜಿಲ್ಲೆಯ ಮೂವರು ಶಾಸಕರು ಸಚಿವ ಸ್ಥಾನ ಕೇಳಿದ್ದೇವೆ. ಅದೃಷ್ಟ ಯಾರಿಗಿದೆ, ಯಾರಿಗಿಲ್ಲ ಕಾದು ನೋಡಬೇಕು. ಮಂತ್ರಿ ಸ್ಥಾನ ನೀಡುವಾಗ ವಯಸ್ಸು, ಆರೋಗ್ಯ, ಜಾತಿ ಎಂಬೆಲ್ಲ ವಿಷಯಗಳು ಅನ್ವಯಿಸುವುದಿಲ್ಲ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಾವೇರಿ ಜಿಲ್ಲೆಗೂ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ ಅಷ್ಟೇ. ಯಾರಿಗೇ ನಾಯಕತ್ವ ನೀಡಿದರೂ ಅದನ್ನು ಶಿರಸಾವಹಿಸಿ ಒಪ್ಪಿಕೊಂಡು ಕೆಲಸ ಮಾಡುತ್ತೇನೆ ಎಂದರು.ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ಮಂತ್ರಿ ಸ್ಥಾನಕ್ಕಾಗಿ ಪ್ರತಿಭಟನೆ ಮಾಡುವುದಾದರೆ ಅದು ನನ್ನ ಪಕ್ಷದ ವಿರುದ್ಧ ಪ್ರತಿಭಟನೆಯಾಗುತ್ತದೆ. ನನ್ನನ್ನು ಬೆಳೆಸಿದ ಪಕ್ಷದ ವಿರುದ್ಧ ನಾನು ಪ್ರತಿಭಟನೆ ಮಾಡುವುದೆಂದರ ಹೇಗೆ? ನಮ್ಮ ಕಾರ್ಯಕರ್ತರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಯಾರೂ ನನಗೆ ಮಂತ್ರಿ ಸ್ಥಾನಕ್ಕಾಗಿ ಪ್ರತಿಭಟನೆ ಮಾಡುವಂತಿಲ್ಲ. ಹೈಕಮಾಂಡ್ ಕೂಡ ನನಗೇನೂ ಭರವಸೆ ನೀಡಿಲ್ಲ. ನಾನೂ ಆಕಾಂಕ್ಷಿಯಾಗಿ ನಿರೀಕ್ಷೆಯಲ್ಲಿದ್ದೇನೆ. ಈಗ ಸಚಿವ ಸ್ಥಾನ ಕೇಳಿದ ಮೂವರನ್ನು ಹೊರತುಪಡಿಸಿಯೂ ಜಿಲ್ಲೆಗೆ ಸಚಿವ ಸ್ಥಾನ ನೀಡಬಹುದು ಎಂದು ತಿಳಿಸಿದರು.ಬಸವರಾಜ ಶಿವಣ್ಣನವರಿಗೆ ಮಂತ್ರಿ ಸ್ಥಾನ ತಪ್ಪಿಸುವುದಕ್ಕಾಗಿ ನಾನು ಎಲ್ಲಿಯೂ ಅವರ ವಿರುದ್ಧ ನಡೆದುಕೊಂಡಿಲ್ಲ. ಯಾರಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿಯವರಿಗೆ ಪತ್ರ ಬರೆದು ವಿನಂತಿಸಿದ್ದೇನೆ. ಈ ಬಗ್ಗೆ ಹಿರಿಯ ಶಾಸಕರಾದ ರುದ್ರಪ್ಪ ಲಮಾಣಿ ಅವರು ಚರ್ಚಿಸಿದ್ದಾರೆ ಎಂಬ ಮಾಹಿತಿ ನನಗಿದೆ. ಏನೆಲ್ಲ ಊಹಾಪೋಹಗಳು ಹಬ್ಬಿದರೂ ಕೂಡ ಅದಕ್ಕೊಂದು ಅಂತ್ಯವಿದೆ. ಹಾವೇರಿ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಾನೂ ಸಚಿವ ಸ್ಥಾನದ ಆಕಾಂಕ್ಷಿ-ಶಾಸಕ ಶ್ರೀನಿವಾಸ ಮಾನೆ
ಹೊಸ ಸಂಪುಟದಲ್ಲಿ ಸಚಿವರಾಗುವ ಬಯಕೆ ಎಲ್ಲ ಶಾಸಕರದ್ದೂ ಇದ್ದೇ ಇರುತ್ತದೆ. ನಾನೂ ಸಚಿವ ಸ್ಥಾನ ಕೇಳಿದ್ದೇನೆ, ಆದರೆ ಅದೃಷ್ಟವೂ ಬೇಕು, ಪಕ್ಷದ ಹೈಕಮಾಂಡ್ ಈ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಪಕ್ಷ ನನ್ನನ್ನು ಬೆಳೆಸಿದೆ, ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿ ಸಣ್ಣವನಾಗುವುದಿಲ್ಲ. ನಾನು ಸಚಿವ ಸ್ಥಾನಕ್ಕಾಗಿ ಯಾರ ವಿರುದ್ಧವೂ ಮಾತಾಡುವಷ್ಟು ಸಣ್ಣವನಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಸ್ಪಷ್ಟಪಡಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.