ದರ್ಶನ್‌ ವಿರುದ್ಧ ತೀರ್ಪಿಂದ ಬೇಸರ,ಸಮಾಧಾನ ಎರಡೂ ಆಗಿದೆ: ರಮ್ಯಾ

| N/A | Published : Aug 17 2025, 01:34 AM IST / Updated: Aug 17 2025, 12:42 PM IST

Ramya Darshan Thoogudeepa
ದರ್ಶನ್‌ ವಿರುದ್ಧ ತೀರ್ಪಿಂದ ಬೇಸರ,ಸಮಾಧಾನ ಎರಡೂ ಆಗಿದೆ: ರಮ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್‌ಗೆ ಬೇಲ್‌ ರದ್ದಾಗಿ ಸೆರೆಮನೆ ವಾಸ ಕಾಯಂ ಆಗಿದೆ. ಅವರ ವಿಚಾರದಲ್ಲಿ ನಟಿ ರಮ್ಯಾ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.

 ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್‌ಗೆ ಬೇಲ್‌ ರದ್ದಾಗಿ ಸೆರೆಮನೆ ವಾಸ ಕಾಯಂ ಆಗಿದೆ. ಅವರ ವಿಚಾರದಲ್ಲಿ ನಟಿ ರಮ್ಯಾ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.

‘ದರ್ಶನ್ ಬಗ್ಗೆ ಸುಪ್ರೀಂ ಕೋರ್ಟ್ ಜಡ್ಜ್‌ಮೆಂಟ್‌ ಕೇಳಿದಾಗ ನನಗೆ ಬೇಸರ, ಸಮಾಧಾನ ಎರಡೂ ಆಯ್ತು. ಬೇಸರ ಏಕೆಂದರೆ ನಾನು ‘ದತ್ತ’ ಸಿನಿಮಾದಲ್ಲಿ ದರ್ಶನ್‌ ಜೊತೆಗೆ ಕೆಲಸ ಮಾಡಿದ್ದೇನೆ. ಅವರು ನನಗೆ ಗೊತ್ತಿರುವ ವ್ಯಕ್ತಿ. ಈ ಪ್ರಕರಣದಲ್ಲಿ ಅವರು ದುಡುಕಿ ಜೀವನ ಹಾಳು ಮಾಡಿಕೊಂಡರು. ಕಷ್ಟಪಟ್ಟು ಮೇಲೆ ಬಂದವರ ಬದುಕು ಹೀಗಾಯ್ತಲ್ಲ ಅಂತ ಬೇಸರವಾಯ್ತು. ಜೊತೆಯಾಗಿ ಕೆಲಸ ಮಾಡುತ್ತಿದ್ದಾಗ ಅವರು ತಮ್ಮ ಬದುಕಿನ ಕಥೆಯನ್ನು ನನ್ನ ಜೊತೆ ಹಂಚಿಕೊಂಡಿದ್ದರು. ಲೈಟ್‌ಬಾಯ್‌ ಆಗಿದ್ದವರು ಈ ಲೆವೆಲ್‌ಗೆ ಬೆಳೆದರಲ್ಲಾ ಅಂತ ಅವರ ಬಗ್ಗೆ ಹೆಮ್ಮೆ ಅನಿಸಿತ್ತು. ಆದರೆ ಅವರ ಇತ್ತೀಚಿನ ನಡವಳಿಕೆ ಬೇಸರ ತರಿಸಿತ್ತು. ಅವರ ಅಕ್ಕಪಕ್ಕ ಒಳ್ಳೆಯವರಿಲ್ಲವೇನೋ ಅಂತ ಅನಿಸಿತು. ಪ್ರಕರಣದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಆತನ ಪತ್ನಿಗೆ ಈಗಷ್ಟೇ ಮಗುವಾಗಿದೆ. ಅವರು ಬಡವರು, ಅವರಿಗೆ ನ್ಯಾಯ ಸಿಕ್ಕಿರುವುದು ಸಮಾಧಾನ ತಂದಿದೆ’ ಎಂಬ ಮಾತನ್ನು ರಮ್ಯಾ ಹೇಳಿದ್ದಾರೆ.

‘ಪವಿತ್ರಾ ಗೌಡ ಬಗ್ಗೆ ಬೇಸರವೆನಿಸುತ್ತದೆ. ಈ ಕೇಸ್‌ನಲ್ಲಿ ಅರೆಸ್ಟ್ ಆದಾಗಲೇ ನಾನು ಮೊದಲ ಬಾರಿ ಅವರ ಹೆಸರು ಕೇಳಿರುವುದು. ಕಾನೂನು ಕೈಗೆ ತಗೊಳ್ಳದೆ ರೂಲ್ಸ್‌ ಪ್ರಕಾರ ನಡೆದಿದ್ದರೆ ಇದೆಲ್ಲ ಆಗುತ್ತಿರಲಿಲ್ಲ’ ಎಂದು ರಮ್ಯಾ ಹೇಳಿದ್ದಾರೆ.

‘ನಾವು ಒಂದು ಹಂತಕ್ಕೆ ಏರಿದ ಮೇಲೆ ನಮ್ಮ ಜೊತೆಗಿರುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸೆಲೆಬ್ರಿಟಿಯಾದ ಮೇಲೆ ಒಳ್ಳೆಯ ಗೆಳೆಯರನ್ನೂ ಹೊಂದಿರಬೇಕು. ಇತ್ತೀಚೆಗೆ ಹೆಣ್ಣಮಕ್ಕಳ ಬಗ್ಗೆ ಗೌರವ ಇಲ್ಲದೆ ಕೆಟ್ಟದಾಗಿ ಮೆಸೇಜ್‌ ಮಾಡುವ ಮನಸ್ಥಿತಿ ಹೆಚ್ಚಾಗುತ್ತಿದೆ. ಆದರೆ ಕಾನೂನು ಪಾಲನೆ ಮಾಡಬೇಕಿರುವುದು ನಾಗರಿಕ ಸಮಾಜದ ಅಗತ್ಯ ಗುಣ. ಕಾನೂನನ್ನು ನಮ್ಮ ಕೈಗೆ ತಗೊಂಡ್ರೆ ಕೆಟ್ಟ ಕೆಲಸ ಆಗುತ್ತೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಉತ್ತಮ ತೀರ್ಪಿನಿಂದ ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಾಬೀತಾಗಿದೆ’ ಎಂದು ಹೇಳಿದ್ದಾರೆ. ಕೆಲಸ ಮಾಡೋ ಮುಂಚೆ ಯೋಚನೆ ಮಾಡಬೇಕು. ಕೆಲವೊಂದು ಸನ್ನಿವೇಶದಲ್ಲಿ ಕೋಪ ಬರುತ್ತದೆ, ಹತಾಶೆ ಕೂಡ ಆಗುತ್ತದೆ. ಅಂಥಾ ಸಮಯದಲ್ಲೂ ನಿಯಮ ಮೀರಬಾರದು. ಮೀರಿದರೆ ನಿಮ್ಮ ಜೀವನ ಹಾಳಾಗುತ್ತೆ. ಇಷ್ಟೆಲ್ಲ ಮಾಡಿದ ಮೇಲೆ ಸಮಾಜಕ್ಕೆ ಏನು ಸಂದೇಶ ನೀಡುತ್ತೀರಿ, ಎಲ್ಲರೂ ನಿಮ್ಮ ಥರ ಮಾಡಿದ್ರೆ ಸಮಾಜ ಏನಾಗುತ್ತೆ, ಎಲ್ಲಕ್ಕೂ ಮಿತಿ ಇದೆ. ಕಾನೂನು ಅಂತಿದೆ. ಅದರಿಂದ ಆಚೆ ನಿಲ್ಲೋದಕ್ಕಾಗಲ್ಲ’ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ.

Read more Articles on