ಸಿಎಂ ಬದಲು ಹೈಕಮಾಂಡ್‌ ನಿರ್ಧಾರಕ್ಕೆ ನಾ ಬದ್ಧ : ಸಿಎಂ

| N/A | Published : Nov 25 2025, 02:15 AM IST

Siddaramaiah

ಸಾರಾಂಶ

ಸಿಎಂ ಬದಲಾವಣೆ ವಿಷಯದಲ್ಲಿ ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ದ. ಹೈಕಮಾಂಡ್‌ ತೀರ್ಮಾನವನ್ನು ನಾನೂ ಒಪ್ಪಬೇಕು, ಡಿ.ಕೆ.ಶಿವಕುಮಾರ್‌ ಅವರೂ ಒಪ್ಪಬೇಕು. ಎಲ್ಲವೂ ಹೈಕಮಾಂಡ್‌ ನಿರ್ಧಾರದ ಮೇಲೆ ನಿಂತಿದೆ.

 ಶಿಡ್ಲಘಟ್ಟ/ಚಿಕ್ಕಬಳ್ಳಾಪುರ :  ‘ಸಿಎಂ ಬದಲಾವಣೆ ವಿಷಯದಲ್ಲಿ ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ದ. ಹೈಕಮಾಂಡ್‌ ತೀರ್ಮಾನವನ್ನು ನಾನೂ ಒಪ್ಪಬೇಕು, ಡಿ.ಕೆ.ಶಿವಕುಮಾರ್‌ ಅವರೂ ಒಪ್ಪಬೇಕು. ಎಲ್ಲವೂ ಹೈಕಮಾಂಡ್‌ ನಿರ್ಧಾರದ ಮೇಲೆ ನಿಂತಿದೆ. ಹೈಕಮಾಂಡ್‌ ನಾನೇ ಮುಂದುವರಿಯಬೇಕು ಎಂದು ಹೇಳಿದರೆ, ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ಬದಲಾವಣೆ ವಿಷಯದಲ್ಲಿ ಹೈಕಮಾಂಡ್‌ ಹೇಳಿದಂತೆ ನಾವು ಕೇಳುತ್ತೇವೆ. ಹೈಕಮಾಂಡ್‌ ನಿರ್ಧರಿಸಿದರೆ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದರು.

ಈ ವಿಷಯವಾಗಿ ಹೈಕಮಾಂಡ್‌ ಜೊತೆ ನಾನು ಚರ್ಚೆ ನಡೆಸಿಲ್ಲ. ಹೈಕಮಾಂಡ್‌ ಭೇಟಿಯಾದಾಗ ಸಚಿವ ಸಂಪುಟದ ಪುನಾರಚನೆ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದ್ದರಿಂದ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೇನೆ. ನಾಲ್ಕೈದು ತಿಂಗಳ ಹಿಂದೆಯೇ ಹೈಕಮಾಂಡ್‌ ನಾಯಕರು ಸಂಪುಟ ಪುನಾರಚನೆ ಮಾಡಿ ಎಂದು ಹೇಳಿದ್ದರು. ಎರಡೂವರೆ ವರ್ಷ ತುಂಬಲಿ, ಆಮೇಲೆ ಮಾಡೋಣ ಅಂದಿದ್ದೆ. ಈಗಲೂ ಹೈಕಮಾಂಡ್ ಹೇಳಿದಂತೆ ಕೇಳುವೆ ಎಂದರು.

ಕೆಲಸ ಮಾಡದ ಬಿಜೆಪಿಯಿಂದ ಟೀಕೆ:

ಬಳಿಕ, ಶಿಡ್ಲಘಟ್ಟ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ₹2,000 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು. ಈ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ, ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಕೆಲಸ ಮಾಡಲಿಲ್ಲ. ಈಗ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಸರ್ಕಾರದ ಬಳಿ ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಣವಿಲ್ಲದಿದ್ದರೆ 2 ಸಾವಿರ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಗುತ್ತಾ. ಖಜಾನೆ ಖಾಲಿ ಎನ್ನುವ ಬಿಜೆಪಿಯ ಸುಳ್ಳಿನ‌ ಆರೋಪಕ್ಕೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರಿಸಿದ್ದೇವೆ ಎಂದು ಹೇಳಿದರು.

ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ

ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದ್ದೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದ್ದೆವು, ಅದರಂತೆ ನಡೆದಿದ್ದೇವೆ. ಹೀಗಾಗಿ, 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ಇದೇ ವೇಳೆ, ಜಿಲ್ಲಾ ಕುರುಬರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬನ್ನೂರು ಕುರಿಯನ್ನು ಉಡುಗೊರೆಯಾಗಿ ನೀಡಲಾಯಿತು.

Read more Articles on