ಈ ಬಾರಿ ಜನ ಜಾಸ್ತಿ ಇದ್ರು... ಮೊಬೈಲೂ ಜಾಸ್ತಿ ಇತ್ತು...

| Published : Oct 14 2024, 01:19 AM IST

ಈ ಬಾರಿ ಜನ ಜಾಸ್ತಿ ಇದ್ರು... ಮೊಬೈಲೂ ಜಾಸ್ತಿ ಇತ್ತು...
Share this Article
  • FB
  • TW
  • Linkdin
  • Email

ಸಾರಾಂಶ

ಅಂಬಾರಿ ಆನೆ ಅಭಿಮನ್ಯು ಮತ್ತು ಮಾವುತ ವಸಂತ.

ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿ ಜಂಬೂಸವಾರಿ ಮಾರ್ಗದಲ್ಲಿ ಜನ ಜಾಸ್ತಿ ಇದ್ರು... ಮೊಬೈಲೂ ಜಾಸ್ತಿ ಇತ್ತು... ಆನೆ ಮೇಲಿಂದ ಯಾವ ಕಾಡೆ ನೋಡಿದರು ಜನ ಕಂಡ್ರು... ಅಷ್ಟೇ ಪ್ರಮಾಣದಲ್ಲಿ ಮೊಬೈಲೂ ಕಂಡವು...

- ಹೀಗೆ ಸಂತಸ ಹಂಚಿಕೊಂಡವರು ಸತತ 5ನೇ ಬಾರಿ ಚಿನ್ನದ ಅಂಬಾರಿಯನ್ನು ಅಭಿಮನ್ಯು ಆನೆ ಮೇಲೆ ಹೊರಿಸಿದ ಮಾವುತ ವಸಂತ. ಅಂಬಾರಿ ಹೊತ್ತ ಆನೆ ಮೇಲಿಂದ ಜಂಬೂಸವಾರಿಯಲ್ಲಿ ತಾನು ಕಂಡಂತಹ ದೃಶ್ಯಾವಳಿಗಳನ್ನು ಮೇಲಿನಂತೆ ವಿವರಿಸಿದರು.

ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಭಾನುವಾರ ಖುಷಿಯಿಂದ ಓಡಾಡಿಕೊಂಡಿದ್ದ ಮಾವುತ ವಸಂತ ಅವರ ಮುಖದಲ್ಲಿ ಜಂಬೂಸವಾರಿ ಯಶಸ್ವಿಗೊಳಿಸಿದ ಸಾರ್ಥಕತೆ ಇತ್ತು. ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಅಭಿಮನ್ಯು ಅಂಬಾರಿ ಹೊತ್ತು ಕರ್ನಾಟಕದಲ್ಲೇ ಮಾತ್ರವಲ್ಲದೇ ಇಡೀ ಇಂಡಿಯಾದಲ್ಲೇ ಫೇಮಸ್ ಆಗಿದೆ ಎಂದು ವಸಂತ ಹರ್ಷ ವ್ಯಕ್ತಪಡಿಸಿದರು.

ಕೊರೋನಾ ಕಾರಣ 2020 ಮತ್ತು 2021ನೇ ಸಾಲಿನಲ್ಲಿ ಅರಮನೆ ಆವರಣದಲ್ಲೇ ಅಭಿಮನ್ಯು ಮೇಲೆ ಅಂಬಾರಿ ಹೊರಿಸಿದೆ. ಕಳೆದ 3 ವರ್ಷಗಳಿಂದ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆಯಲ್ಲಿ ಅಂಬಾರಿ ಹೊರಿಸಿದ್ದೇನೆ ಎಂದರು.

ಎಲ್ಲವೂ ಅಭಿಮನ್ಯು ಆನೆಯಿಂದಲೇ ಆರಂಭವಾಗುತ್ತಿದೆ. ಅರಮನೆ ಆವರಣದಲ್ಲೇ ಅಂಬಾರಿ ಹೊರಿಸಿದ್ದೆ. ಈಗ ಅರಮನೆ ಆವರಣದಲ್ಲಿ 300 ಮೀಟರ್ ಹೆಚ್ಚುವರಿಯಾಗಿ ಅಂಬಾರಿ ಹೊರಿಸಿದ್ದೇನೆ. ಬನ್ನಿಮಂಟಪಕ್ಕೆ ತಲುಪುವ ಮುನ್ನ ದಸರಾ ದೀಪಾಲಂಕಾರ ಬೆಳಕು ಹಾಕಿದರು. ವಿದ್ಯುತ್ ದೀಪಗಳ ಬೆಳಕಿನಲ್ಲಿ ಚಿನ್ನದ ಅಂಬಾರಿ ಮತ್ತಷ್ಟು ಪ್ರಜ್ವಲಿಸುತ್ತಾ ಜನರನ್ನು ಆಕರ್ಷಿಸಿತು ಎಂದು ತಮ್ಮ ರೋಮಾಂಚನ ಕ್ಷಣಗಳನ್ನು ಹಂಚಿಕೊಂಡರು.

ಮೈಸೂರಿಗೆ ಕರೆದುಕೊಂಡು ಬಂದಾಗಲೇ ಅಭಿಮನ್ಯು ಆನೆಗೆ ಯಾವ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದೇವೇ ಎಂಬುದು ಗೊತ್ತು. ಹೀಗಾಗಿ, ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಅಂಬಾರಿ ಹೊರಿಸುವ ಮುನ್ನ ಆಯುಧಪೂಜೆ ದಿನದಂದು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಬಂದಿದ್ದೇವು. ಚಾಮುಂಡೇಶ್ವರಿ ಆಶೀರ್ವಾದದಿಂದ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದೆ ಎಂದರು.

ಅಂಬಾರಿ ಹೊತ್ತು ಬನ್ನಿಮಂಟಪ ತಲುಪಿದ ಅಭಿಮನ್ಯು ಆನೆಯನ್ನು ವಾಪಸ್ ಅರಮನೆಗೆ ಕರೆತಂದು ಬಿಸಿ ನೀರು ಸ್ನಾನ ಮಾಡಿಸಿ, ವಿಶೇಷವಾದ ಅವಲಕ್ಕಿ ಕುಸುರೆಯನ್ನು ನೀಡಿದ್ದೇವೆ. ಅಂಬಾರಿ ಹೊತ್ತ ಬಳಿಕ ಅಭಿಮನ್ಯು ರಿಲ್ಯಾಕ್ಸ್ ಆಗಿದೆ ಎಂದು ವಸಂತ ಸಾರ್ಥಕಭಾವದಿಂದ ನುಡಿದರು.