ಶೆಟ್ಟರ್‌ ಸೇರ್ಪಡೆ ನನಗೆ ಸಂತೋಷ: ಜೋಶಿ

| Published : Jan 28 2024, 01:24 AM IST / Updated: Jan 28 2024, 01:25 AM IST

ಸಾರಾಂಶ

ಶಾಸಕ ಗಾಲಿ ಜನಾರ್ದನ ರೆಡ್ಡಿ ಕೂಡ ಓರಿಜನಲ್‌ ಬಿಜೆಪಿಯವರು, ಅವರೂ ಬರಬಹುದು ಎಂದು ನುಡಿದರು. ನಾವು ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದೇವೆ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿಗೆ ಮರಳಿ ಬಂದಿರುವುದು ಸಂತಸವಾಗಿದೆ. ಆವತ್ತು ನನಗೆ ದೊಡ್ಡವರ ಜತೆಗೆ ಮೀಟಿಂಗ್‌ ಇದ್ದ ಕಾರಣ ಸೇರ್ಪಡೆ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಆಗಲಿಲ್ಲವಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇದೇ ವೇಳೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತಾವೇ ಅಭ್ಯರ್ಥಿ ಎಂದು ತಿಳಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೆಟ್ಟರ್‌ ಮರಳಿ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ಶೆಟ್ಟರ್‌ ಸೇರ್ಪಡೆ ಬಗ್ಗೆ ನನಗೆ ಯಾವುದೇ ಬಗೆಯ ವಿರೋಧ ಇಲ್ಲ. ವಿರೋಧ ಏನಾದರೂ ಇದ್ದರೆ ನಿಮಗೆ ತಿಳಿಸುತ್ತಿದ್ದೆ ಎಂದರು.

ನಾನು ಆರು ತಿಂಗಳ ಹಿಂದೆಯೇ ಶೆಟ್ಟರ್‌ ಅವರು ವಾಪಸ್‌ ಬರುತ್ತಾರೆ ಎಂದು ಹೇಳಿದ್ದೆ. ನನಗೆ ಶೆಟ್ಟರ್‌ ಬಂದಿರುವುದು ಸಂತೋಷ. ಇವತ್ತು ಕಾರ್ಯಕಾರಿಣಿಯಲ್ಲಿ ಶೆಟ್ಟರ್‌ ಸಿಕ್ಕಿದ್ದರು ಅವರಿಗೆ ವೆಲಕಂ ಬ್ಯಾಕ್‌ ಎಂದು ಹೇಳಿದ್ದೇನೆ ಎಂದರು.

ಈ ಬಗ್ಗೆ ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ಮಾಹಿತಿ ಇರಲಿಲ್ಲ ಎಂದು ಭಾವಿಸುವುದು ತಪ್ಪು. ಅವತ್ತು ನಾನು ದೆಹಲಿಯಲ್ಲೇ ಇದ್ದೆ. ಶಾಸಕ ಅರವಿಂದ ಬೆಲ್ಲದ ನನ್ನ ಜೊತೆಗೆ ಇರಲಿಲ್ಲ. ಆದರೆ ಹಿಂದಿನ ದಿನ ಬೆಲ್ಲದ ಜೊತೆಗಿದ್ದರು ಎಂದರು.

ನಮಗೆ ಲಿಂಗಾಯತ ಸೇರಿದಂತೆ ಎಲ್ಲರೂ ಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಲಕ್ಷ್ಮಣ ಸವದಿ ಅವರಲ್ಲೂ ನಮ್ಮ ವೈಚಾರಿಕತೆ ರಕ್ತ ಇದೆ. ಅವರು ಬಂದರೂ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಕೂಡ ಓರಿಜನಲ್‌ ಬಿಜೆಪಿಯವರು, ಅವರೂ ಬರಬಹುದು ಎಂದು ನುಡಿದರು. ನಾವು ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದೇವೆ ಎಂದರು.

ನಾನೇ ಅಭ್ಯರ್ಥಿ:ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಅಭ್ಯರ್ಥಿ ಹೆಸರು ಘೋಷಣೆ ಮುನ್ನ ನಾನು ಏನು ಮಾತನಾಡಲ್ಲ. ಆದರೆ ನಾನು ಚುನಾವಣೆ ತಯಾರಿ ನಡೆಸಿದ್ದೇನೆ. ಹೀಗಾಗಿ ಧಾರವಾಡ ಲೋಕಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಸರ್ಕಾರ ಐದು ವರ್ಷ ನಡೆಸಬೇಕು. ಆದರೆ ಅವರು ಸರ್ಕಾರ ಸರಿಯಾಗಿ ನಡೆಸುತ್ತಿಲ್ಲ ಎಂಬ ಆಕ್ರೋಶ ಜನರಲ್ಲೇ ಇದೆ. ಜನರಿಗೂ ಆಕ್ರೋಶ ಇದೆ. ನಮಗೂ ಅವಕಾಶವಿದೆ ಎಂದು ಸೂಚ್ಯವಾಗಿ ಹೇಳಿದರು.

ತಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ, ತಮ್ಮ ಪಕ್ಷದ ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿದೆ ಎಂದು ಹೇಳಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ನಾಚಿಕೆ ಆಗಬೇಕು. ಕೇಜ್ರಿವಾಲ್‌ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ. ಇವತ್ತು ಭ್ರಷ್ಟಾಚಾರದಿಂದ ಬಂದ ಹಣದಿಂದಲೇ ಜೀವನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.