ಸಾರಾಂಶ
ಕೊಳ್ಳೇಗಾಲದಲ್ಲಿ ಸಂಸದ ಸುನೀಲ್ ಬೋಸ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು. ಈ ವೇಳೆ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ, ಕಾಡಾ ಅಧ್ಯಕ್ಷ ಮರಿಸ್ವಾಮಿ ಇದ್ದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಾನು ಇನ್ನು ರಾಜಕಾರಣಕ್ಕೆ ವಿದ್ಯಾರ್ಥಿಯಾಗಿದ್ದೇನೆ. ಚಾಮರಾಜನಗರ ಜನತೆ ನನ್ನನ್ನು ಈಗಷ್ಟೆ ಸ್ಕೂಲ್‍ಗೆ ಅಡ್ಮಿಷನ್ ಮಾಡಿದ್ದಾರೆ. ಸ್ವಲ್ಪ ಕಾಲಾವಕಾಶ ಕೊಡಿ, ಜನರೊಟ್ಟಿಗಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ, ಹಂತ ಹಂತವಾಗಿ ಜಿಲ್ಲೆಯ ಪ್ರಗತಿಗೆ ದುಡಿಯುವೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕರ್ತರು, ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ತಂದೆಯವರು ಟಿ.ನರಸೀಪುರ ಕ್ಷೇತ್ರದಿಂದ ಗೆದ್ದು 20 ವರ್ಷ ಸೇವೆ ಸಲ್ಲಿಸಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ನಾನು ಕೂಡ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಜನ ಸೇವೆ ಮಾಡಿದ್ದೇನೆ. ಅಲ್ಲಿನ ಜನರ ಸೇವೆಯನ್ನು ಅಧಿಕಾರವಿಲ್ಲದಿದ್ದರು ಮಾಡಿದ್ದೆ. ಅಂತಹ ತೃಪ್ತಿ ನನಗಿದೆ. ಮನೆ ಮಗನಾಗಿ ಜನರ, ತುಡಿತ ಮಿಡಿತಕ್ಕೆ ಸ್ಪಂದಿಸುವೆ. ಗೆದ್ದು 1 ತಿಂಗಳಾಗಿದೆ, ಈಗಲೇ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರದ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯಗೆ ಒತ್ತು ನೀಡುತ್ತೇನೆ, ಅಪಪ್ರಚಾರಕ್ಕೆ ಕಿವಿಗೊಡಲ್ಲ, ರೈಲ್ವೆ ಯೋಜನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಜಿಲ್ಲೆಗೆ ಅಗತ್ಯವಿರುವ ರೈಲ್ವೆ ಯೋಜನೆ ಬಗ್ಗೆಯೂ ರೈಲ್ವೆ ಸಚಿವ ಸೋಮಣ್ಣ ಅವರೊಂದಿಗೆ ಚರ್ಚಿಸಿದ್ದೇನೆ. ಬಜೆಟ್ ನಲ್ಲಿ ಯೋಜನೆ ಸೇರಿಸುವ ಭರವಸೆ ನೀಡಿದ್ದಾರೆ. ಕ್ಷೇತ್ರದಲ್ಲಿ ಶೇ.42 ರಷ್ಟು ಅರಣ್ಯ ಪ್ರದೇಶವಿದ್ದು. ಕೇಂದ್ರದಿಂದ ಬರುವ ಸೌಲಭ್ಯಗಳನ್ನು ಬಳಸಿಕೊಂಡು ಅರಣ್ಯದಲ್ಲಿರುವ ಬುಡಕಟ್ಟು ಜನರ ಅಭಿವೃದ್ಧಿಗೆ ಬದ್ದನಾಗಿರುವೆ ಎಂದರು.ಈ ಸಂದರ್ಭದಲ್ಲಿ ಕಾಡಾ ಅಭಿವೃದ್ದಿ ನಿಗಮ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದವರ್ಮ, ಉಪ್ಪಾರ ನಿಗಮದ ಮಾಜಿ ರಾಜ್ಯಾಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಚಾಮುಲ್ ಮತ್ತು ಕೆಎಂಎಫ್ ನಿರ್ದೆಶಕ ನಂಜುಂಡಸ್ವಾಮಿ, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ನಗರಸಭೆ ಮಾಜಿ ಅದ್ಯಕ್ಷರಾದ ರಮೇಶ್, ಬಸ್ತಿಪುರ ಶಾಂತರಾಜು, ಮಲ್ಲಿಕಾರ್ಜುನ ರೇಖಾ ರಮೇಶ್, ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಶಾ ಇದ್ದರು.