ಪೂಜಾರ ತರ ಹಿಟ್‌ ಆ್ಯಂಡ್‌ ರನ್‌ ಗಿರಾಕಿ ನಾನಲ್ಲ

| Published : Aug 13 2024, 01:03 AM IST

ಸಾರಾಂಶ

ಕನ್ನಡ ಪ್ರಭ ವಾರ್ತೆ ಬಾಗಲಕೋಟೆ ವಿಧಾನ ಪರಿಷತ್‌ ಸದಸ್ಯ ಪಿ.ಎಚ್. ಪೂಜಾರ ತರ ನಾನು ಹಿಟ್ ಆ್ಯಂಡ್ ರನ್ ಗಿರಾಕಿ ಅಲ್ಲ, ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದಲ್ಲಿ ಸಮರ್ಥವಾಗಿ ಎದುರಿಸುವೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಗುಡುಗಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೇನಾದರೂ ಮೊಕದ್ದಮೆ ಹೂಡಿದಲ್ಲಿ, ತಂಟೆಗೆ ಬಂದಲ್ಲಿ ಅವರ ಬಂಡವಾಳ ಬಯಲಿಗೆ ಎಳೆಯುವೆ. ಬ್ಲಾಕ್ ಮೇಲ್ ಉದ್ಯೋಗ ಬಂದ್ ಮಾಡಿ, ಪಕ್ಷದ ವ್ಯವಸ್ಥೆಯಲ್ಲಿ ಹೇಗೆ ಇರಬೇಕು ಎನ್ನುವುದನ್ನು ಕಲಿಯಲಿ ಎಂದು ಕಿವಿಮಾತು ಹೇಳಿದರು.

ಕನ್ನಡ ಪ್ರಭ ವಾರ್ತೆ ಬಾಗಲಕೋಟೆ

ವಿಧಾನ ಪರಿಷತ್‌ ಸದಸ್ಯ ಪಿ.ಎಚ್. ಪೂಜಾರ ತರ ನಾನು ಹಿಟ್ ಆ್ಯಂಡ್ ರನ್ ಗಿರಾಕಿ ಅಲ್ಲ, ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದಲ್ಲಿ ಸಮರ್ಥವಾಗಿ ಎದುರಿಸುವೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಗುಡುಗಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೇನಾದರೂ ಮೊಕದ್ದಮೆ ಹೂಡಿದಲ್ಲಿ, ತಂಟೆಗೆ ಬಂದಲ್ಲಿ ಅವರ ಬಂಡವಾಳ ಬಯಲಿಗೆ ಎಳೆಯುವೆ. ಬ್ಲಾಕ್ ಮೇಲ್ ಉದ್ಯೋಗ ಬಂದ್ ಮಾಡಿ, ಪಕ್ಷದ ವ್ಯವಸ್ಥೆಯಲ್ಲಿ ಹೇಗೆ ಇರಬೇಕು ಎನ್ನುವುದನ್ನು ಕಲಿಯಲಿ ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್‌ ಸದಸ್ಯ ಪಿ.ಎಚ್.ಪೂಜಾರ ಪಕ್ಷ ಬದಲಾಯಿಸುವ ಜಂಪಿಂಗ್ ಸ್ಟಾರ್ ಎಂದು ವ್ಯಂಗ್ಯವಾಡಿದರು. ಪಕ್ಷದಿಂದ ಹೊರಗೆ ಹೋಗಿದ್ದವರು ಎಲ್ಲ ಪಕ್ಷಗಳನ್ನು ಸುತ್ತಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಸುತ್ತಾಡಿದ್ದಾರೆ. ಬೇರೆ ಪಕ್ಷಗಳಿದ್ದಿದ್ದರೆ ಅಲ್ಲಿಗೂ ಹೋಗಿ ಬರುತ್ತಿದ್ದರು ಏನೋ ಎಂದು ಲೇವಡಿ ಮಾಡಿದರು.

ಅವರಿಗೆಲ್ಲಿ ಪಕ್ಷ ನಿಷ್ಠೆ..?

ಪಕ್ಷದಲ್ಲಿ ದಬ್ಬಾಳಿಕೆ ವಾತಾವರಣವಿದ್ದರೆ ವಾಪಸ್ ಪಕ್ಷಕ್ಕೆ ಬಂದದ್ದು ಏಕೆ ಎಂದು ಪ್ರಶ್ನಿಸಿದ ಚರಂತಿಮಠ, ಸುಮ್ಮನೆ ಸಂಘ ಪರಿವಾರದಿಂದ ಬಂದವರು, ಪಕ್ಷ ಕಟ್ಟಿದವರು ಎಂದು ಹೇಳಿಕೊಳ್ಳುತ್ತಾರೆ. ಅವರಿಗೆಲ್ಲಿ ಪಕ್ಷ ನಿಷ್ಠೆ, ಪಕ್ಷದ ಮೇಲೆ ಪ್ರೀತಿ ಬರಲು ಸಾಧ್ಯ. ಅವರೊಬ್ಬ ಹೊಂದಾಣಿಕೆ ಮನುಷ್ಯ. ಪೂಜಾರಿ ಅವರಿಗೆ ಹೊಂದಾಣಿಕೆ ನೀತಿಯ ಫಲವಾಗಿಯೇ ಬಿಟಿಡಿಎ ಸದಸ್ಯತ್ವ ಸಿಕ್ಕಿದೆ. ಇವರು ಯಾವ ಮಂತ್ರಿಗಳ ಜತೆ ಮಾತನಾಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಾಗದು. ಯಾವುದೇ ಕಾರಣಕ್ಕೂ ಪೂಜಾರ ಜತೆ ಹೊಂದಾಣಿಕೆ ಅಸಾಧ್ಯ. ಅವರಷ್ಟಕ್ಕೆ ಅವರು ಎನ್ನುವ ಮೂಲಕ ರಾಜಕೀಯ ಸಂಘರ್ಷ ಹಾಗೆ ಮುಂದುವರಿಯಲಿದೆ ಎಂದು ವಾಗ್ದಾಳಿ ನಡೆಸಿದರು.ಚಮಚಾಗಿರಿ ಬಿಟ್ಟು ಕೆಲಸ ಮಾಡಿ:

ಕಾಂಗ್ರೆಸ್ ಮುಖಂಡ ನಾಗರಾಜ್ ಹದ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಚರಂತಿಮಠ, ಜಾತಿ ಮುಂದೆ ಮಾಡಿ ರಾಜಕಾರಣ ಮಾಡುತ್ತಿಲ್ಲ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಚಮಚಾಗಿರಿ ಬಿಟ್ಟು ಕೆಲಸ ಮಾಡಿಕೊಂಡು ಇರಿ ಎಂದು ಕಿವಿ ಮಾತು ಹೇಳಿದರು.ಸಂಘ ಪರಿವಾರದ ಕಾರ್ಯಕರ್ತ ಎಂದು ಹೇಳಿಕೊಂಡು ತಿರುಗಾಡಿದ ನಾಗರಾಜ್ ಹದ್ಲಿ ಮೇಲೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಇವರೊಂದಿಗಿದ್ದ ಸ್ವಯಂ ಸೇವಕರ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿ ಹೈರಾಣಾಗಿದ್ದಾರೆ. ಬರೀ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದು, ಆಡಳಿತದಲ್ಲಿದ್ದು ಬಿಟಿಡಿಎದಲ್ಲಿನ ಹಗರಣಗಳ ಕುರಿತು ಸಮಗ್ರ ತನಿಖೆ ಮಾಡಿಸಲಿ. ಆಗ ಯಾರದು ಸರಿ, ಯಾರದು ತಪ್ಪು ಎನ್ನುವುದು ಬಯಲಿಗೆ ಬರಲಿದೆ ಎಂದು ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಮಹೇಶ ಅಥಣಿ, ಕುಮಾರ ಯಳ್ಳಿಗುತ್ತಿ, ರಾಜು ನಾಯ್ಕರ್, ಶಿವಾನಂದ ಟಿವಳಿ ಇತರರು ಇದ್ದರು.ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಜಿ.ಎನ್.ಪಾಟೀಲ ಮಾತನಾಡಿ, ಬಿವಿವಿ ಸಂಘವು ಲಿಂಗಾಯತ ಸಮಾಜದ ಹೆಮ್ಮೆಯಾಗಿದೆ, ಇಂತಹ ಸಮಾಜಕ್ಕೆ ಅನ್ಯಾಯವಾದರೆ ಸಮಾಜ ಸುಮ್ಮನೇ ಇರುವುದಿಲ್ಲ ಎಂದು ಎಚ್ಚರಿಸಿದರು------------------------------------------

ಕೋಟ್‌

ಪೂಜಾರ ಅವರು ಪಕ್ಷ ಬಿಟ್ಟು ಹೋಗಿ ವಾಪಸ್ ಬರುವವರೆಗೂ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿತ್ತು. ಅವರು 15 ವರ್ಷ ಬೇರೆ ಬೇರೆ ಕಡೆ ಓಡಾಡಿ ಏನು ಆಗದೆ ವಾಪಸ್ ಬಂದು ಇಲ್ಲಿ ಎಂಎಲ್‌ಸಿ ಆಗಿದ್ದಾರೆ. ಇವರು ಪಕ್ಷಕ್ಕೆ ಬಂದ ಬಳಿಕವೇ ಒಡಕಿನ ಧ್ವನಿ ಆರಂಭವಾಗಿದೆ. ಇಂದು ಅವರೊಂದಿಗೆ ಪಕ್ಷದಿಂದ ಉಚ್ಛಾಟನೆಗೊಂಡವರೇ ಇದ್ದಾರೆ. ಪಕ್ಷಕ್ಕೆ ಅವರಿಂದ ಯಾವುದೇ ಕೊಡುಗೆ ಇಲ್ಲ.ವೀರಣ್ಣ ಚರಂತಿಮಠ, ಮಾಜಿ ಶಾಸಕ