ಕಾಂಗ್ರೆಸ್ ಟಿಕೆಟ್ ನೀಡಿದೆ ಎಂಬ ಸೊಕ್ಕು ನನಗಿಲ್ಲ

| Published : Mar 26 2024, 01:19 AM IST

ಸಾರಾಂಶ

ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿದೆ ಎಂಬ ಸೊಕ್ಕು ನನಗಿಲ್ಲ. ಹಾಗಂತ ಯಾರ ಮೇಲೂ ಕೆಸರು ಎರೆಚುವ ಕೆಲಸ ಮಾಡಲ್ಲ. ಸಂವಿಧಾನ ಉಳಿದು ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದೇ ನನ್ನ ಧ್ಯೇಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿದೆ ಎಂಬ ಸೊಕ್ಕು ನನಗಿಲ್ಲ. ಹಾಗಂತ ಯಾರ ಮೇಲೂ ಕೆಸರು ಎರೆಚುವ ಕೆಲಸ ಮಾಡಲ್ಲ. ಸಂವಿಧಾನ ಉಳಿದು ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದೇ ನನ್ನ ಧ್ಯೇಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, 2014 ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಚಿತ್ರದುರ್ಗ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಟ್ಟರು. ಐದು ವರ್ಷಗಳ ಕಾಲ ಮನೆಯ ಮಗನಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಮತದಾರರಿಗೆ ಎಲ್ಲಿಯೂ ಕಳಂಕ ತರಲಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ 63 ಸಲ ಮಾತನಾಡಿದ್ದೇನೆ. 2019 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಹೋದ ಬಿಜೆಪಿಯವರು ಏನು ಕೆಲಸ ಮಾಡಿದ್ದಾರೆನ್ನುವುದಕ್ಕೆ ಎಲ್ಲಿಯಾದರೂ ಸಾಕ್ಷಿಯಿದ್ದರೆ ತೋರಿಸಿ ಎಂದು ಪ್ರಶ್ನಿಸಿದರು.

ನನ್ನ ಅವಧಿಯಲ್ಲಿ ಎಲ್ಲ ಕಡೆ ಶುದ್ಧ ಕುಡಿವ ನೀರಿನ ಘಟಕ, ಹೈಮಾಸ್ಟ್ ದೀಪ, ಶಾಲಾ-ಕಾಲೇಜು, ಬಸ್‍ನಿಲ್ದಾಣಗಳನ್ನು ನಿರ್ಮಿಸಿದ್ದೇನೆ. ಕೇಂದ್ರೀಯ ವಿದ್ಯಾಲಯ, ಮೆಡಿಕಲ್ ಕಾಲೇಜು, ಭದ್ರಾಮೇಲ್ದಂಡೆ ಯೋಜನೆಗೆ ಸಾಕಷ್ಟು ಹೋರಾಡಿದ್ದೇನೆ. ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಸಚಿವರಾಗಿದ್ದ ಎ.ನಾರಾಯಣಸ್ವಾಮಿರವರ ಕೊಡುಗೆ ಏನು? ಕಳೆದ ಚುನಾವಣೆಯಲ್ಲಿಯೂ ಜನ ನನಗೆ ಮತ ನೀಡಿದರು. ಆದರೆ ಇವಿಎಂ ಏನು ನಿರ್ಣಯಿಸಿತೋ ಗೊತ್ತಿಲ್ಲ. ಎಂಟು ಕ್ಷೇತ್ರಗಳಲ್ಲಿಯೂ ಗೆದ್ದವರಿಗಿಂತ ನಾಲ್ಕು ಪಟ್ಟು ಹೆಚ್ಚು ಸುತ್ತಾಡಿದ್ದೇನೆ. ಬುದ್ದ, ಬಸವ, ಅಂಬೇಡ್ಕರ್, ಕನಕದಾಸರ ಆಶಯದಂತೆ ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿದ್ದೇನೆ ಎಂದರು.

ನಾನು ಮಾದಿಗ ಜನಾಂಗದಲ್ಲಿ ಹುಟ್ಟಿದ್ದೇನೆ. ಮಾದಿಗನೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಸರ್ವ ಜನಾಂಗದ ಜೊತೆಯಲ್ಲಿದ್ದೇನೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ವರಿಷ್ಟರು ನನ್ನನ್ನು ಉಮೇದುವಾರನನ್ನಾಗಿ ಮಾಡಿದ್ದಾರೆ. ದೇಶದಲ್ಲಿ ಜನ ನೆಮ್ಮದಿಯಾಗಿ ಇರಬೇಕಾಗಿರುವುದರಿಂದ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜನತೆಯಲ್ಲಿ ವಿನಂತಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ರವಿಕುಮಾರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ವಿಶ್ವಕರ್ಮ ವಿಭಾಗದ ಪ್ರಸನ್ನಕುಮಾರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್. ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ಮರುಳಾರಾಧ್ಯ, ಅಲ್ಲಾಭಕ್ಷಿ, ಟಿಪ್ಪುಖಾಸಿಂಆಲಿ, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಮಾಜಿ ಸದಸ್ಯರಾದ ಆರ್.ನರಸಿಂಹಮೂರ್ತಿ, ಅನಂತ್, ಮುನಿರಾ ಎ.ಮಕಾಂದಾರ್, ಮೆಹಬೂಬ್ ಖಾತೂನ್, ಮೋಕ್ಷರುದ್ರಸ್ವಾಮಿ, ರೇಣುಕ, ಜಿಲ್ಲಾ ಕಾಂಗ್ರೆಸ್‌ ಕಿಸಾನ್ ಸೆಲ್ ವಿಭಾಗದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಶಿವಲಿಂಗಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು. ಇದಕ್ಕೂ ಮುನ್ನ ಒನಕೆ ಓಬವ್ವ ಪ್ರತಿಮೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಚಂದ್ರಪ್ಪ ಅವರ ಮೇಲೆ ಕ್ರೇನ್ ಸಹಾಯದಿಂದ ಹೂ ಮಳೆಗರೆದರು.