ಚುನಾವಣೆಯಲ್ಲಿ ನಾನು ಮೊದಲ ಸ್ಥಾನದಲ್ಲಿದ್ದೇನೆ : ಕೆ.ಎಸ್‌.ಈಶ್ವರಪ್ಪ

| Published : Apr 07 2024, 01:46 AM IST

ಚುನಾವಣೆಯಲ್ಲಿ ನಾನು ಮೊದಲ ಸ್ಥಾನದಲ್ಲಿದ್ದೇನೆ : ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಹತ್ತಿರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಷ್ಟ್ರ ಭಕ್ತರ ಬಳಗದ ಕಚೇರಿಯನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಈಗಾಗಲೇ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕಾಗಿ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್‌ ಅಭ್ಯರ್ಥಿ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶನಿವಾರ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಹತ್ತಿರ ಲೋಕಸಭಾ ಚುನಾವಣೆಯ ರಾಷ್ಟ್ರ ಭಕ್ತ ಬಳಗದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿಶ್ಚಿತ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಮೋದಿಯವರಿಗಾಗಿ ರಾಯಣ್ಣ ಬ್ರಿಗೇಡ್‌ ಮಾಡಿದ್ದೇವು. ಆದರೆ, ಅದನ್ನು ನಮ್ಮ ಪಕ್ಷದ ನಾಯಕರೇ ಹಿಂದೆ ಸರಿಸಿದರು, ಈ ಚುನಾವಣೆಯಲ್ಲಿ ರಾಜ್ಯದಲ್ಲಿ 27 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಶಿವಮೊಗ್ಗದಲ್ಲಿ ನಾನು ಗೆದ್ದು, ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುಬೇಕು ಎಂದರು.

ಬಿಜೆಪಿಯಲ್ಲಿ ಸಿದ್ಧಾಂತದ ವಿರುದ್ಧವಾಗಿ ಕಾರ್ಯ ಚಟುವಟಿಕೆ ನಡೆಯುತ್ತಿದ್ದು, ಒಂದು ಕುಟುಂಬಕ್ಕೆ ಒಂದು ಹುದ್ದೆ ಎನ್ನುವುದನ್ನು ಗಾಳಿಗೆ ತೂರಲಾಗಿದೆ. ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಹಾಗೂ ಹಿಂದೂ ಧರ್ಮದ ಪರವಾಗಿ ಧ್ವನಿ ಎತ್ತುವವರನ್ನು ತುಳಿಯುವ ಕೆಲಸ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಾಯಕರು ನುಡಿದಂತೆ ನಡೆಯಲಿಲ್ಲ. ಪುತ್ರನಿಗೆ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿ ಅದರಂತೆ ನಡೆದುಕೊಳ್ಳಲಿಲ್ಲ. ಪಕ್ಷ ಸಂಘಟನೆಗಾಗಿ ಕಳೆದ ನಾಲ್ಕು ದಶಕದಿಂದ ಶ್ರಮಿಸಿದ್ದೇನೆ. ಇದೀಗ ಪಕ್ಷದಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣದ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವ ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಯಲ್ಲಿ ಭೇಟಿಯಾಗಲು ಆಹ್ವಾನ ನೀಡಿದ್ದರು. ನಂತರ ಅವರ ಭೇಟಿ ಸಾಧ್ಯವಾಗಲಿಲ್ಲ. ಇದರಿಂದ ತಮ್ಮ ಸ್ಪರ್ಧೆಗೆ ಅವರು ಪರೋಕ್ಷವಾಗಿ ಒಪ್ಪಿಗೆ ಸೂಚಿಸಿ ಕಳುಹಿಸಿದ್ದಾರೆ. ಇದು ನನಗೆ ಲಾಭವಾಗುವ ಸಾಧ್ಯತೆ ಇದೆ. ತಮ್ಮ ಸ್ಪರ್ಧೆ ಏನಿದ್ದರೂ ಒಂದು ಕುಟುಂಬದ ವಿರುದ್ಧವೇ ಹೊರತು. ಕೇಂದ್ರದ ವಿರುದ್ಧವಲ್ಲ ಎಂದರು.

ಪಕ್ಷ ನಿಷ್ಠೆ ಮತ್ತು ಅಭಿವೃದ್ಧಿಯ ಮೇಲೆ ನಿಂತಿದ್ದರೂ ಸಂಘಟನೆಯನ್ನು ಬಲಪಡಿಸಿಕೊಂಡು ತಾವು ಈ ಬಾರಿ ಗೆಲವು ನಮ್ಮದಾಗಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಚೇರಿಯನ್ನು ಉದ್ಘಾಟಿಸಲಾಗುತ್ತಿದ್ದು, ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಏ.12 ರಂದು ತಾವು ನಾಮಪತ್ರ ಸಲ್ಲಿಸುತ್ತಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದ ತಾಲೂಕು ಸಂಚಾಲಕ ಕೆ.ಪ್ರಭಾಕರ ರಾಯ್ಕರ್, ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್ ಚಿದಾನಂದಗೌಡ, ಪುರಸಭೆ ಮಾಜಿ ಸದಸ್ಯ ಮಹೇಶ ಗೌಳಿ, ಬಜರಂಗದಳ ತಾಲೂಕು ಮಾಜಿ ಸಂಚಾಲಕ ಅಣ್ಣಪ್ಪ, ಆರ್ಯ ಈಡಿಗ ಸಮಾಜದ ಮಹಿಳಾ ಜಿಲ್ಲಾಧ್ಯಕ್ಷೆ ಹೇಮಾ ರವಿ, ಪ್ರಮುಖರಾದ ಅಣ್ಣಾಜಿಗೌಡ ತಲಗುಂದ, ಪರಮೇಶ್ವರಪ್ಪ ಯಡಗೊಪ್ಪ ಹಲವರು ಇದ್ದರು.