ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ: ಶಾಸಕ ವಿನಯ ಕುಲಕರ್ಣಿ

| Published : Nov 30 2024, 12:45 AM IST

ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ: ಶಾಸಕ ವಿನಯ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕೂಗು ಹೆಚ್ಚಿದೆ. ಈ ನಿಟ್ಟಿನಲ್ಲಿ ಸಮರ್ಥರಿಗೆ ಕ್ಯಾಬಿನೆಟ್‌ ವಿಸ್ತರಣೆಯಲ್ಲಿ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.

ಧಾರವಾಡ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕೂಗು ಹೆಚ್ಚಿದೆ. ಈ ನಿಟ್ಟಿನಲ್ಲಿ ಸಮರ್ಥರಿಗೆ ಕ್ಯಾಬಿನೆಟ್‌ ವಿಸ್ತರಣೆಯಲ್ಲಿ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.

ಸಮೀಪದ ಕಿತ್ತೂರಿನಲ್ಲಿ ಶುಕ್ರವಾರ ಧಾರವಾಡ ಗ್ರಾಮೀಣ -71 ಕ್ಷೇತ್ರದ ಜನರೊಂದಿಗೆ ಜನಸ್ಪಂದನ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ ಕೆಲಸ ಮಾಡಿರುವ ಸಚಿವರ ಬದಲಾವಣೆ ಅವಕಾಶ ಬಂದಿದೆ. ಹೀಗಾಗಿ, ಅವಕಾಶ ಇರುವವರಿಗೆ ಸಚಿವ ಸ್ಥಾನ ಕೊಡಲಿದ್ದಾರೆ ಎಂಬ ಮಾಹಿತಿ ಇದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಇಬ್ಬರು-ಮೂವರ ಹೆಸರು ಅಂತಿಮ ಹಂತದಲ್ಲಿವೆ. ಉಪ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಒತ್ತಡ ಆಗುತ್ತಿದೆ. ಹೀಗಾಗಿ, ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ಆಗುತ್ತಿವೆ. ಗ್ಯಾರೆಂಟಿ ಯೋಜನೆಗಳಿಗೆ ಹಣ ಕೊಡುತ್ತಿರುವುದಿಂದ ಪ್ರಾರಂಭದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದವು. ಇದೀಗ ಕ್ಷೇತ್ರದಲ್ಲಿ ಅಭಿವೃದ್ಧಿ ಶುರುವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಜನರು ಮೆಚ್ಚಿದ್ದಾರೆ. ಹೀಗಾಗಿ, ಉಪಚುನಾವಣೆಯಲ್ಲಿ ಪಕ್ಷದ ಒಗ್ಗಟ್ಟು ಕೆಲಸ ಮಾಡಿದೆ. ಶಿಗ್ಗಾಂವಿ ಉಪಚುನಾವಣೆಯಲ್ಲಿ ಶೇ. 100ರಷ್ಟು ಹಗಲಿರುಳು ಶ್ರಮವಹಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ ಎಂದು ಶಾಸಕ ವಿನಯ ಕುಲಕರ್ಣಿ ಹೆಮ್ಮೆ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈ ಹಿಂದೆ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಈ ಹಿಂದಿನ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಸಿಕ್ಕಿಲ್ಲ. ಜಯಮೃತ್ಯುಂಜಯ ಸ್ವಾಮೀಜಿ ಸುಮಾರು 10 ಸಾವಿರ ಜನರನ್ನು ಸೇರಿಸಿ ಬೆಳಗಾವಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಲು ನಿರ್ಧಾರಿಸಿದ್ದಾರೆ ಎಂಬ ಮಾಹಿತಿ ಇದೆ. ಪ್ರತಿಭಟನೆ ಅವರ ಹಕ್ಕು. ಆಹ್ವಾನ ನೀಡಿದರೆ ನಾನೂ ಹೋಗಲಿದ್ದೇವೆ. ಈ ಬಾರಿ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಪಡೆಯಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅರವಿಂದ ಏಗನಗೌಡರ, ಕಾಂಗ್ರೆಸ್ ಮುಖಂಡರಾದ ಚನ್ನಬಸಪ್ಪ ಮಟ್ಟಿ, ಪರಮೇಶ ಕಾಳೆ, ನಂದೀಶ ನಾಯಕರ, ರೇಣುಕಾ ಕಳ್ಳಿಮನಿ, ಹನಮಂತ ಮಾದರ, ಈಶ್ವರ ಶಿವಳ್ಳಿ ಮತ್ತಿತರರು ಇದ್ದರು.

ಪ್ರತ್ಯೇಕ ಪಾಲಿಕೆಯ ಹೋರಾಟಕ್ಕೆ ಜಯ

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಹೋರಾಟಕ್ಕೆ ಜಯ ಸಿಕ್ಕಿದೆ. ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಠರಾವು ಪಾಸ್ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ವಿಶೇಷ ಚರ್ಚೆ ಮಾಡುತ್ತೇನೆ. ಅಭಿವೃದ್ಧಿ ದೃಷ್ಟಿಯಿಂದ ಹುಬ್ಬಳ್ಳಿ- ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂದು ಹೋರಾಟ ಮಾಡಿದವರ ಪೈಕಿ ತಾವು ಸಹ ಒಬ್ಬರು.

ವಿನಯ ಕುಲಕರ್ಣಿ, ಶಾಸಕರು.