ಮಹಾಲಕ್ಷ್ಮೀ ಬ್ಯಾಂಕ ಠೇವಣಿದಾರರ ಹಣಕ್ಕೆ ನಾನು ಜವಾಬ್ದಾರಿ: ರಮೇಶ ಜಾರಕಹೊಳಿ

| Published : Sep 22 2024, 02:00 AM IST

ಮಹಾಲಕ್ಷ್ಮೀ ಬ್ಯಾಂಕ ಠೇವಣಿದಾರರ ಹಣಕ್ಕೆ ನಾನು ಜವಾಬ್ದಾರಿ: ರಮೇಶ ಜಾರಕಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳಾಸಾಹೇಬ ಮಾಂಗಳೇಕರ ಸೇರಿ ಇನ್ನಿತರೆ ಹಿರಿಯರು ಕಟ್ಟಿದ ಮಹಾಲಕ್ಷ್ಮೀ ಬ್ಯಾಂಕನ್ನು ಮುಚ್ಚಲು ಬಿಡುವುದಿಲ್ಲ. ಠೇವಣಿದಾರರ ಹಣಕ್ಕೆ ನಾನು ಜವಾಬ್ದಾರನಿದ್ದೇನೆ. ಬ್ಯಾಂಕಿನ ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ. ಶೀಘ್ರದಲ್ಲಿ ನಿಮ್ಮ ಹಣ ವಾಪಸ್‌ ಕೊಡಿಸುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಗ್ರಾಹಕರಿಗೆ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬಾಳಾಸಾಹೇಬ ಮಾಂಗಳೇಕರ ಸೇರಿ ಇನ್ನಿತರೆ ಹಿರಿಯರು ಕಟ್ಟಿದ ಮಹಾಲಕ್ಷ್ಮೀ ಬ್ಯಾಂಕನ್ನು ಮುಚ್ಚಲು ಬಿಡುವುದಿಲ್ಲ. ಠೇವಣಿದಾರರ ಹಣಕ್ಕೆ ನಾನು ಜವಾಬ್ದಾರನಿದ್ದೇನೆ. ಬ್ಯಾಂಕಿನ ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ. ಶೀಘ್ರದಲ್ಲಿ ನಿಮ್ಮ ಹಣ ವಾಪಸ್‌ ಕೊಡಿಸುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಗ್ರಾಹಕರಿಗೆ ಭರವಸೆ ನೀಡಿದರು.

ನಗರದ ಮಹಾಲಕ್ಷ್ಮೀ ಸಭಾಭವನದಲ್ಲಿ ಶನಿವಾರ ನಡೆದ ಮಹಾಲಕ್ಷ್ಮೀ ಬ್ಯಾಂಕ್‌ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಎರಡ್ಮೂರು ದಿನಗಳ ಹಿಂದೆ ಬ್ಯಾಂಕಿನ ಸಿಬ್ಬಂದಿ ಅವ್ಯವಹಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಆಡಳಿತ ಮಂಡಳಿ ಬಗ್ಗೆಯೂ ನನಗೆ ಸಂಶಯವಿತ್ತು. ಆದರೆ ಈ ಅವ್ಯವಹಾರದಲ್ಲಿ ಆಡಳಿತ ಮಂಡಳಿಯವರು ಭಾಗಿಯಾಗಿಲ್ಲ ಎಂದು ಹೇಳಿದರು.ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ 2021ರಿಂದ ಇಲ್ಲಿಯವರೆಗೆ ₹6.90 ಕೋಟಿ ಠೇವಣಿ ಮಾಡಿ ಸುಮಾರು ₹95 ಕೋಟಿ ಅವ್ಯವಹಾರ ನಡೆಸಿದ್ದಾರೆ. ಅದರಲ್ಲಿ ₹20 ಕೋಟಿಗೂ ಹೆಚ್ಚು ಹಣ ಮರಳಿಸಿದ್ದು, ಇನ್ನೂ ₹74 ಕೋಟಿ ಪಾವತಿಸಬೇಕಿದೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಆರ್‌ಬಿಐ ಹಾಗೂ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮೋಸ ಹೋದ ಬಡವರ ಹಣ ಮರಳಿಸುತ್ತೇನೆ. ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ಹೆಚ್ಚಾಗಿ ಬಡವರು, ಮಕ್ಕಳ ವಿದ್ಯಾಭ್ಯಾಸ, ಮದುಗೆ ಕಾರ್ಯ ಇನ್ನಿತರ ಸೌಲಭ್ಯಕ್ಕಾಗಿ ಠೇವಣಿ ಮಾಡಿದ್ದಾರೆ. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಖಾತೆ ಹಾಗೂ ವ್ಯಾಪಾರಸ್ಥರ ಹಣಕ್ಕೆ ನಾನು ಜವಾಬ್ದಾರನಿದ್ದು, ಎಲ್ಲ ಹಣ ಮರಳಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ರಾಜ್ಯದಲ್ಲಿ ಇಂತಹ ಅನೇಕ ಅವ್ಯವಹಾರಗಳು ನಡೆದಿವೆ. ಅವ್ಯವಹಾರ ಎಸಗಿದವರು ಬಂಧನ ಬಳಿಕ ಬೇಲ್ ಮೇಲೆ ಹೊರಬಂದಿದ್ದಾರೆ. ಹಾಗಾಗಿ ಈವರೆಗೆ ಬ್ಯಾಂಕ್‌ ಅವ್ಯವಹಾರ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ. ಎಲ್ಲವೂ ನಾಟಕೀಯ ಪ್ರಕರಣಗಳು. ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ಸ್ವತಃ ನನ್ನ ಮಗನ ಹಣವೂ ಇದೆ. ನನ್ನ ಮಗನಿಗೂ ತಿಳಿಸಿ ಹೇಳಿದ್ದೇನೆ. ಹಿರಿಯರ ಪರಿಶ್ರಮದಿಂದ ಬ್ಯಾಂಕ್‌ ಉನ್ನತ ಮಟ್ಟಕ್ಕೆ ಏರಿದೆ. ಸಿಬ್ಬಂದಿ ಮಾಡಿದ ಅವ್ಯವಹಾರದಿಂದ ಬ್ಯಾಂಕಿಗೆ ಕೆಟ್ಟು ಹೆಸರು ಬಂದಿದೆ ಎಂದು ಹೇಳಿದರು.

ಮಹಾಲಕ್ಷ್ಮೀ ಬ್ಯಾಂಕ್‌ ಬಂದ್ ಮಾಡಿಸಲು ಬಹಳಷ್ಟು ಜನ ಕಾತುರದಿಂದ ನೋಡುತ್ತಿದ್ದಾರೆ. ಆದರೆ, ಮಹಾಲಕ್ಷ್ಮೀ ಬ್ಯಾಂಕ್‌ ಮತ್ತೆ ತಲೆ ಎತ್ತಿ ನಿಲ್ಲಬೇಕು. ಅವ್ಯವಹಾರ ಎಸಗಿರುವವರ ಆಸ್ತಿ ಮುಟ್ಟುಗೊಲು ಹಾಕಿಸಿ ನಿಮ್ಮ ಹಣ ಮರಳಿಸುತ್ತೇನೆ. ಬ್ಯಾಂಕಿನಿಂದ ಮೋಸ ಆದ ಮೇಲೆ ರಾಜಕಾರಣಿಗಳು, ಅಧಿಕಾರಿಗಳು ಸಭೆ ಮಾಡಿ ಬಡವರಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಬ್ಯಾಂಕ್‌ ಎಂದಿನಂತೆ ಮತ್ತೆ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿಯಾಗಬೇಕು. ಬ್ಯಾಂಕಿನ ಆಸ್ತಿಪಾಸ್ತಿಗೆ ಹಾನಿ ಮಾಡದಂತೆ ಎಂದು ಮನವಿ ಮಾಡಿದರು.

ಸಿಪಿಐ ಗೋಪಾಲ ರಾಠೋಡ ಮಾತನಾಡಿ, ಮಹಾಲಕ್ಷ್ಮೀ ಬ್ಯಾಂಕ ಅವ್ಯವಹಾರದಲ್ಲಿ ಪಾಲ್ಗೊಂಡ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಗ್ರಾಹಕರು ಬ್ಯಾಂಕ್‌ ಮುಂದೆ ಜಮಾವಣೆಯಾಗದೆ ತಮ್ಮ ದೂರುಗಳಿದ್ದರೆ ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ತಿಳಿಸಿದರು.ಈ ವೇಳೆ ತಹಸೀಲ್ದಾರ ಡಾ.ಮೋಹನ ಭಸ್ಮೆ ಸೇರಿದಂತೆ ಸಾವಿರಕ್ಕೂ ಅಧಿಕ ಜನ ಗ್ರಾಹಕರು ಪಾಲ್ಗೊಂಡಿದ್ದರು.