ಸಾರಾಂಶ
ಶಿಗ್ಗಾಂವಿ: ಲೋಕಸಭಾ ಚುನಾವಣೆ ಮುಗಿದ ತಕ್ಷಣವೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನ, ಮುಖ್ಯಮಂತ್ರಿಯಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅಧಿಕಾರ, ಅಧಿಕಾರದ ಮೊದಲ ದಿನವೇ ಭಯೋತ್ಪಾದಕರು ಹಾಗೂ ಮತಾಂಧ ಸಂಘಟನೆಯವರ ಮನೆಗಳನ್ನು ಕೆಡವಲು ೨೦ ಸಾವಿರ ಬುಲ್ಡೋಜರ್ ಖರೀದಿಸಲಿದ್ದೇವೆ. ಇದು ನಮ್ಮ ಬಿಜೆಪಿ ಗ್ಯಾರಂಟಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಯಂ ಘೋಷಿಸಿಕೊಂಡರು.
ಮಂಗಳವಾರ ಸಂಜೆ ಇಲ್ಲಿ ನಡೆದ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಎಷ್ಟು ಸತ್ಯವೋ, ಲೋಕಸಭಾ ಚುನಾವಣೆ ಮುಗಿದ ಬಳಿಕ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ ಎಂದರು.ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನವೇ ೨೦ ಸಾವಿರ ಬುಲ್ಡೋಜರ್ ಖರೀದಿಸುತ್ತೇವೆ, ಭಯೋತ್ಪಾದಕರು, ಮತಾಂಧ ಸಂಘಟನೆಯವರ ಮನೆಗಳನ್ನು ನಿರ್ನಾಮ ಮಾಡಿ, ಕರ್ನಾಟಕದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವುದೇ ನಮ್ಮ ಮೊದಲ ಕೆಲಸ ಎಂದು ಗುಡುಗಿದ ಯತ್ನಾಳ್, ತಾವು ಹಾಕುವ ಒಂದು ಮತವೂ ಒಬ್ಬ ಭಯೋತ್ಪಾದಕನನ್ನು ಸಂಹಾರ ಮಾಡಲಿದೆ ಎಂದು ಹೇಳಿದರು.
ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆ: ಗ್ಯಾರಂಟಿ ಕೊಡುವ ನೆಪದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರಲ್ಲದೇ, ಸ್ಟಾಂಪ್ ಡ್ಯೂಟಿ, ಪಹಣಿ ಉತಾರ ಬೆಲೆ, ಮದ್ಯದ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ಹೀಗಿರುವಾಗ ದೇಶವನ್ನು ಆಳಲು ಕಾಂಗ್ರೆಸ್ಸಿನವರಿಗೆ ಬಿಟ್ಟರೆ ಜನಸಾಮಾನ್ಯರ ಜೀವನವನ್ನು ಮೂರಾಬಟ್ಟೆ ಮಾಡುವುದು ಗ್ಯಾರಂಟಿ ಎಂದರು.ಅಪಪ್ರಚಾರ ಸರಿಯಲ್ಲ: ನಮ್ಮ ಪಂಚಮಸಾಲಿ ಸಮಾಜದ ಹೋರಾಟ ಕೇವಲ ಮೀಸಲಾತಿ ಪಡೆಯುವುದಕ್ಕೋಸ್ಕರ ಮಾತ್ರ. ನಮ್ಮ ಸಮಾಜದ ಕೆಲವೊಂದು ದುಷ್ಟಶಕ್ತಿಗಳು ಪ್ರಹ್ಲಾದ ಜೋಶಿ ಅವರ ಕುರಿತು ಇಲ್ಲಸಲ್ಲದ ಅಪವಾದಗಳನ್ನು ಸೃಷ್ಟಿ ಮಾಡಿ ಸಮಾಜದ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಅಧಿಕಾರಕ್ಕೋಸ್ಕರ ಒಬ್ಬ ವ್ಯಕ್ತಿಯ, ಒಂದು ಪಕ್ಷದ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ. ಅಪಪ್ರಚಾರ ಮಾಡುವವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಎಸ್.ಕೆ. ಬೆಳ್ಳುಬ್ಬಿ, ಮಾಳವಿಕಾ ಅವಿನಾಶ್ ಮಾತನಾಡಿದರು.ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಈರಣ್ಣ ನವಲಗುಂದ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಸಂಗಮೇಶ ಕಂಬಾಳಿಮಠ, ತಿಪ್ಪಣ್ಣ ಸಾತಣ್ಣನವರ, ಶ್ರೀಕಾಂತ ಬುಳ್ಳಕ್ಕನವರ, ಗಂಗಣ್ಣ ಸಾತಣ್ಣನವರ, ಸುಭಾಸ ಚೌಹಾಣ, ನರಹರಿ ಕಟ್ಟಿ, ಮಂಜುನಾಥ ಬ್ಯಾಹಟ್ಟಿ, ರಮೇಶ ವನಹಳ್ಳಿ, ದಯಾನಂದ ಅಕ್ಕಿ, ಚಂದ್ರಣ್ಣ ಆಚೆಬಣದ, ರುದ್ರಗೌಡ ಪಾಟೀಲ, ಸಂಜೀವ ಮನ್ನಣ್ಣನವರ ಉಪಸ್ಥಿತರಿದ್ದರು.