ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ನಡೆಸಿದ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಅಂಗಡಿ ಮುಗ್ಗಟ್ಟಿನವರಿಗೆ ಯಾವುದೇ ನೋಟಿಸ್ ನೀಡಿಲ್ಲ, ಕೇವಲ ಪತ್ರಿಕೆ ಪ್ರಕಟಣೆ ನೀಡಿ ತೆರವು ಕಾರ್ಯಚರಣೆ ನಡೆಸಿದ್ದಲ್ಲದೇ ತಾಳಿಕೋಟೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ದಲಿತರ ಅಂಗಡಿಗಳನ್ನು ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಶಾಸಕ ನಾಡಗೌಡರ ಮಾತನ್ನು ಆಲಿಸಿ ತೆರವುಗೊಳಿಸಿದ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಆಗ್ರಹಿಸಿದರು.ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ೨೩ ಅಂಗಡಿಗಳ ಮಾಲೀಕರು (ಹರಳಯ್ಯ) ಸಮಾಜದವರು ತಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಬೀದಿಪಾಲಾಗಿವೆ ಎಂದು ಅದೇ ಸ್ಥಳದಲ್ಲಿಯೇ ಯಥಾಸ್ಥಿತಿ ಅಂಗಡಿಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಿಮ್ಮ ಅಂಗಡಿಗಳನ್ನು ತೆರವುಗೊಂಡಿದ್ದರೂ ಪುನಃ ನಿಮಗೆ ನ್ಯಾಯಕೊಡಿಸಲು ನಿಮ್ಮೊಂದಿಗೆ ಇದ್ದೇನೆ. ಇನ್ನೂ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ನಾನು ಸಂಬಂಧಿತ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಈ ಕಾರ್ಯಾಚರಣೆ ನಿಲ್ಲಿಸಿದ್ದಾರೆ. ಎರಡೂವರೇ ವರ್ಷ ಕಳೆದರೂ ಶಾಸಕ ನಾಡಗೌಡ ಅವರು ತಾಳಿಕೋಟೆಗೆ ಭೇಟಿ ನೀಡಿಲ್ಲ. ದಲಿತರಿಗೆ ಹಾಗೂ ಇನ್ನೂಳಿದ ಜನತೆಗೆ ಅನ್ಯಾಯವಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಕುರಿತು ನನ್ನಲ್ಲಿ ವಿಡಿಯೋ ರೆಕಾರ್ಡ್ ಇದೆ ಎಂದು ಗುಡುಗಿದರು.ಮಸೀದಿ ಮಂದಿರಗಳ ಮುಂದಿನ ಸ್ಟೇಪ್‌ಗಳನ್ನು ತೆರವುಗೊಳಿಸಿದ್ದಾರೆ. ವಿಠ್ಠಲ ಮಂದಿರಕ್ಕೆ ಮುಂದಾದಾಗ ತಡೆಹಿಡಿಯುವ ಕಾರ್ಯಕ್ಕೆ ಸೂಚನೆ ನೀಡಿದಾಗ ನಿಂತಿದೆ. ಹಿಂದೂ, ಮುಸ್ಲಿಂ ಬಾಂಧವರಿಗೆ ಜಗಳ ಹಚ್ಚುವ ಕಾರ್ಯ ನಡೆದಿದೆ. ಮಂದಿರದ ಮುಂದಿನ ತಗಡುಗಳನ್ನು ಸಹಿತ ತೆರವಿಗೆ ಸೂಚಿಸಿದ್ದಾರೆ. ಈ ತಗಡುಗಳು ಶಾಸಕ ನಾಡಗೌಡರ ತಲೆಗೆ ಬಡಿಯುತ್ತಿದ್ದವೇನು ಎಂದು ಪ್ರಶ್ನಿಸಿದರು. ಪೊಲೀಸ್‌ರಿಗೆ ಹಚ್ಚಿ ಬೆದರಿಸುವ ಕಾರ್ಯ ನಡೆದಿದೆ. ಬುಧವಾರ ಬೆಳಗ್ಗೆ ೮ ಗಂಟೆಗೆ ದಲಿತರ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ತೆರವುಗೊಳಿಸಿರುವುದು ನ್ಯಾಯ ಸಮ್ಮತವಲ್ಲ. ತೆರವು ಕಾರ್ಯಾಚರಣೆ ನಡೆಸಿದಾಗ ಪುರಸಭೆ ಅಧಿಕಾರಿಯ ಅಂಗಡಿ ಮುಗ್ಗಟ್ಟು ಸಂಬಂಧಿತ ಮಹಿಳೆಯರು ಕೈ ಕಾಲು ಬಿದ್ದು ರೋಧಿಸಿದರೂ ತೆರವು ಕಾರ್ಯಚರಣೆ ನಿಲ್ಲಲಿಲ್ಲ. ಈ ಕುರಿತು ಸಂಸದ ಕಾರಜೋಳ ಅವರು ಡಿಸಿಯವರಿಗೆ ಫೋನಾಯಿಸಿ ತಿಳಿಸಲಾಗಿದೆ ಹಾಗೂ ಪುರಸಭೆ ಅಧಿಕಾರಿಗೆ ಪೋನಾಯಿಸಿದರೂ ಅದಕ್ಕೆ ಉತ್ತರ ದೊರೆಯಲಿಲ್ಲ. ೧೧.೧೫ ಗಂಟೆಗೆ ತಡೆಯಾಜ್ಞೆ ಬಂದಿದೆ. ಈ ಕುರಿತು ಪುರಸಭೆ ಅಧಿಕಾರಿಗೆ ಹೇಳಿದರೂ ಅಧಿಕೃತ ಕಾಪಿ ಕೇಳಿದ್ದಾರೆ. ಮುಂದೆ ೧೨.೪೦ ರಿಂದ ೧ ಗಂಟೆಯ ಸುಮಾರಿಗೆ ಅಂಗಡಿಗಳನ್ನು ಒಡೆದು ಹಾಕಿದ್ದಾರೆ. ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ನೀಡಿಲ್ಲ. ನಂತರ ಕಾರಜೋಳ ಅವರ ಪುತ್ರ ಎಸ್ಪಿ ಅವರಿಗೆ ಫೋನಾಯಿಸಿ ತಿಳಿಸಿದಾಗ ಕಾರ್ಯಾಚರಣೆ ನಿಂತರೂ ಎಲ್ಲ ಅಂಗಡಿಗಳು ನೆಲ ಸಮವಾಗಿದ್ದವು ಎಂದು ದೂರಿದರು.ನಾನು ಯಾವ ಜನರಿಗೂ ಅನ್ಯಾಯ ಮಾಡಿಲ್ಲ. ಕೈಲಾದಷ್ಟು ಸಹಾಯ ಮಾಡಿದ್ದೇನೆ. ಮುಸ್ಲಿಂ ಯುವಕನೊಬ್ಬ ಡೋಣಿ ನದಿಯಲ್ಲಿ ಬಿದ್ದು ಮೃತಪಟ್ಟಾಗ ಸರ್ಕಾರದಿಂದ ₹೫ ಲಕ್ಷ ಪರಿಹಾರ ಕೊಡಿಸಿದ್ದೇನೆ. ಈ ಕಾರ್ಯದಲ್ಲಿ ನಾನು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದೇನೆಂದು ಈಗೀನ ಶಾಸಕ ಆರೋಪ ಮಾಡಿದ್ದರು ಎಂದು ಆರೋಪಿಸಿದರು.ಯಾವುದೇ ತೆರವು ಕಾರ್ಯಕ್ಕೆ ಮೊದಲು ನೋಟಿಸ್ ನೀಡಬೇಕು ಅಥವಾ ಸಾರ್ವಜನಿಕರ ದೂರಾಗಿರಬೇಕು. ಈ ಕಾರ್ಯದಿಂದ ಯಾವ ತೊಂದರೆಯಾಗಲಿದೆ ಎಂಬುವುದನ್ನು ಗಮನಿಸಬೇಕು. ಠರಾವು ಕೂಡಾ ಮಾಡಿಲ್ಲ, ಪತ್ರಿಕೆಗಳಲ್ಲ ಸ್ಟೆಟಮೆಂಟ್ ನೀಡಿ ಈ ಕಾರ್ಯಾಚರಣೆ ನಡೆಸಿರುವುದು ಸರಿ ಏನು ಎಂದು ಪ್ರಶ್ನಿಸಿದರು.ಒತ್ತು ಗಾಡಿಯಲ್ಲಿ ವ್ಯಾಪಾರ ಮತ್ತು ಫುಟ್‌ಪಾತ್ ವ್ಯಾಪಾರಸ್ಥರಿಗಾಗಿ ಕೇಂದ್ರ ಸರ್ಕಾರ ₹೧೦ ಸಾವಿರ ಸಹಾಯಧನ ನೀಡುತ್ತದೆ. ವಿಶ್ವಾಸದಿಂದ ಅರ್ಧ ಬಡ್ಡಿದರಲ್ಲಿ ನೀಡುತ್ತಿದೆ. ₹೬೦ ಲಕ್ಷದವರೆಗೂ ವ್ಯಾಪಾರ ವೈಹಿವಾಟು ನಡೆಸಲು ಸಹಾಯ ಹಸ್ತಕಲ್ಪಿಸಲು ಮುಂದಾಗಿದೆ ಎಂದು ತಿಳಿಸಿದರು.ನಮ್ಮ ಬೇಡಿಕೆ ೬೫ ವರ್ಷಗಳ ಹಿಂದೆ ಇದ್ದಂತಹ ಅಂಗಡಿಗಳನ್ನು ಈಗ ತೆರವುಗೊಳಿಸಿರುವ ಅಂಗಡಿಗಳನ್ನು ಕಟ್ಟಿಕೊಡಿ. ಒಡೆದ ಅಂಗಡಿಗಳ ಮಾಲು ಮಸಲುಗಳ ಲುಕ್ಸಾನು ಕೊಡಬೇಕು. ಶಾಸಕನ ಮಾತು ಕೇಳಿ ತೆರವು ಕಾರ್ಯಚರಣೆ ನಡೆಸಿದ ಪುರಸಭೆ ಅಧಿಕಾರಿಯ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಿಶೇಷವಾಗಿ ದಲಿತ ಸಮೂದಾಯಕ್ಕೆ ವಿಶೇಷ ಕಾನೂನು ಜಾರಿಯಾಗಿದ್ದರ ಕುರಿತು ತಿಳಿಸಿದರು.ಮುದ್ದೇಬಿಹಾಳದ ಇಂದಿರಾ ನಗರದಲ್ಲಿಯೂ ದಲಿತರ ೩೦ ಮನೆಗಳನ್ನು ಕೆಡವಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಗೆ ಅಪಮಾನವಾಗಿದೆ. ಸುಮಾರು ೧೫೦ ಅಂಗಡಿಗಳನ್ನು ನಾಶ ಮಾಡಿದ್ದಾರೆ. ಇಷ್ಟೆಲ್ಲದರಲ್ಲಿಯೂ ನೀವು ಆಯ್ಕೆ ಮಾಡಿದ ಶಾಸಕನ ಆಟವಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ನಿಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಈಗ ದಲಿತ ಸಮೂದಾಯದವರಿಗೆ ಅನ್ಯಾಯವಾಗಿರುವುದು ಗೊತ್ತಾಗಿದೆ. ಎ.ಎಸ್.ಪಾಟೀಲರು ಹೇಳಿದಂತೆ ಈ ಅನ್ಯಾಯ ಕುರಿತು ಪ್ರಾಮಾಣಿಕವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಹರಳಯ್ಯ ಸಮಾಜದವರ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿದ್ದಾರೆ. ಹೀಗಾಗಿ ಅವರ ಕುಟುಂಬವು ಬೀದಿಪಾಲಾಗಿವೆ ಎಂದು ದೂರಿದರು.ದಲಿತ ಮುಖಂಡರುಗಳಾದ ನ್ಯಾಯವಾದಿ ಕೆ.ಬಿ.ದೊಡಮನಿ, ಬಸ್ಸು ಸಿದ್ದಾಪೂರ, ರಾಘವೇಂದ್ರ ವಿಜಾಪೂರ ಮಾತನಾಡಿದರು. ಈ ಸಮಯದಲ್ಲಿ ದಲಿತ ಮುಖಂಡರುಗಳಾದ ಡಿ.ಬಿ.ಮುದೂರ, ಹರೀಶ ನಾಟೀಕಾರ, ಮುಖಂಡರುಗಳಾದ ರಾಜುಗೌಡ ಗುಂಡಕನಾಳ, ಬಸನಗೌಡ ವಣಕ್ಯಾಳ, ಸೋಮನಗೌಡ ಕವಡಿಮಟ್ಟಿ, ರಾಜುಗೌಡ ಕೊಳೂರ, ಜಗದೀಶ ಪಂಪಣ್ಣವರ, ಭಗವಂತ ಕಬಾಡೆ, ಹಣಮಂತ ಕುಂದರಗಿ, ಆನಂದ ದೇವೂರ, ಪುರಸಭಾ ಸದಸ್ಯರುಗಳಾದ ವಾಸುದೇವ ಹೆಬಸೂರ, ಜೈಸಿಂಗ್ ಮೂಲಿಮನಿ, ಮುದಕಪ್ಪ ಬಡಿಗೇರ, ನಿಂಗಪ್ಪ ಕುಂಟೋಜಿ, ಮೈಹಿಬೂಬ್ ಲಾಹೋರಿ, ಧರಣಿ ನಿರತರಾದ ಹರಳಯ್ಯ ಸಮಾಜದ ಮುಖಂಡರುಗಳಾದ ಲಕ್ಷ್ಮಣ ವಿಜಾಪೂರ, ಕೃಷ್ಣಾ ಮಬ್ರುಮಕರ, ಚಂದ್ರಶೇಖರ ವಿಜಾಪೂರ, ರಾಜು ವಿಜಾಪೂರ, ಕಾಶಿನಾಥ ಮಬ್ರುಮಕರ, ಜಗದೀಶ ವಿಜಾಪೂರ, ಪರಶುರಾಮ ವಿಜಾಪೂರ, ರಾಮಕೃಷ್ಣ ವಿಜಾಪೂರ, ಬಸವರಾಜ ವಿಜಾಪೂರ, ಗೋಪಾಲ ವಿಜಾಪೂರ, ನಾಗರಾಜ ವಿಜಾಪೂರ, ಮದರೆಮ್ಮ ಫೀರಪ್ಪ ವಿಜಾಪೂರ, ಸೌಮ್ಯಾ ವಿಜಾಪೂರ, ಸುನಂದಾ ವಿಜಾಪೂರ, ಪ್ರೀಯಾ ಮಬ್ರುಮಕರ, ನಾಗಮ್ಮ ವಿಜಾಪೂರ, ಯಮನವ್ವ ವಿಜಾಪೂರ, ನೀಲಮ್ಮ ದುತ್ತರಗಿ, ಮಂಜುಳಾ ಬೆನಕನಹಳ್ಳಿ ಮತ್ತು ಶೌಕತ್ ಲಾಹೋರಿ, ಫವನ ಅಗರವಾಲಾ, ಅಬ್ದುಲ್ ರಮೇಮಾನ ಹುಣಶ್ಯಾಳ, ಮೊದಲಾದವರು ಇದ್ದರು.ಯಾರು ಹಿತವರೆಂಬುವುದನ್ನು ಅರಿಯದೇ ಮತದಾರರು ಆಶೀರ್ವಾದ ಮಾಡಿದ ಫಲದಿಂದಲೇ ಈ ಸ್ಥಿತಿ ಬಂದೊದಗಿದೆ. ಈಗೀನ ಶಾಸಕ ನಾಡಗೌಡರು ಬದುಕು ಕಟ್ಟುವಂತ ಕೆಲಸ ಮಾಡಿಲ್ಲ. ಅನ್ಯಾಯಕ್ಕೆ ತಕ್ಕ ಪಾಠ ಕಲಿಸುವ ಕಾರ್ಯ ಮಾಡಿರಿ. ತಾಳಿಕೋಟೆ ಭಾಗದ ಪ್ರತಿಯೊಂದು ಬಡಾವಣೆಗೆ ನಾನು ಬಂದಿದ್ದೇನೆ, ಕೆಲಸ ಮಾಡಿದ್ದೇನೆ. ಆ ಪುಣ್ಯಾತ್ಮನನ್ನು ಆಯ್ಕೆ ಮಾಡಿರುವುದು ನಿಮ್ಮ ತಪ್ಪು ಆಗಿದೆ. ಈಗ ನಡೆದ ವಿಷಯ ಕುರಿತು ನ್ಯಾಯಾಲಯದಲ್ಲಿಯೂ ನನ್ನ ಜೊತೆ ಶಾಸಕ ರಾಜುಗೌಡರು ಪಾಲ್ಗೊಳ್ಳಲಿದ್ದಾರೆ. ವಿಧಾನ ಸೌಧದಲ್ಲಿಯೂ ಧ್ವನಿ ಎತ್ತಿ ಹೋರಾಟ ಮಾಡಲಿದ್ದಾರೆ.-ಎ.ಎಸ್.ಪಾಟೀಲ(ನಡಹಳ್ಳಿ),
ಮಾಜಿ ಶಾಸಕರು.ಈಗಾಗಲೇ ತಾಳಿಕೋಟೆ, ಮುದ್ದೇಬಿಹಾಳದಲ್ಲಿ ನಡೆದ ಘಟನೆ ಕುರಿತು ನಡಹಳ್ಳಿ ಅವರು ವಿವರಿಸಿದ್ದಾರೆ. ತೊಂದರೆಗೆ ಒಳಗಾಗಿದ್ದ ದಲಿತ ಸಮೂದಾಯದವರೂ ಸಹ ತಮಗಾದ ಅನ್ಯಾಯ ಕುರಿತು ಹೇಳಿದ್ದಾರೆ. ನಾನು ಮತ್ತು ನಡಹಳ್ಳಿ ಅವರು ನಿಮ್ಮ ಜೊತೆಯಲ್ಲಿದ್ದೇವೆ.-ರಾಜುಗೌಡ ಪಾಟೀಲ,
ಶಾಸಕ ದೇವರಹಿಪ್ಪರಗಿ ಮತಕ್ಷೇತ್ರ.ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಇವರು ೧೯೬೫ ಸಾಲಿನಿಂದ ಇದೇ ಅಂಗಡಿಗಳ ಮೇಲೆ ಉಪಜೀವನ ನಡೆಸುತ್ತಿದ್ದರು. ಆದರೆ, ಈ ಅಂಗಡಿಕಾರರಿಗೆ ತೆರವು ಕಾರ್ಯ ಕುರಿತು ನೋಟಿಸ್ ನೀಡದೇ ಒಮ್ಮಿಂದೊಮ್ಮಲೇ ಕಾರ್ಯಾಚರಣೆ ನಡೆಸಿ ಒಮ್ಮಿಂದೊಮ್ಮಲೇ ತೆರವು ಕಾರ್ಯಚರಣೆ ನಡೆಸಿರುವುದು ಖಂಡನೀಯವಾಗಿದೆ. ನಾನೂ ಕೂಡಾ ನಿಮ್ಮ ಜೊತೆಗಿದ್ದೇನೆ.- ಉಮೇಶ ಕಾರಜೋಳ,
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ.