ಸಾರಾಂಶ
ಸಿರಿಗೆರೆ : ಐದು ಬಾರಿ ಕ್ಷೇತ್ರದ ಶಾಸಕನನ್ನಾಗಿ ಆಯ್ಕೆ ಮಾಡಿರುವ ಮತದಾರರ ಋಣ ನನ್ನ ಮೇಲಿದ್ದು, ಅದನ್ನು ತೀರಿಸಬೇಕಾಗಿರುವುದರಿಂದ ಪ್ರತಿನಿತ್ಯ ಕೋಟ್ಯಂತರ ರು.ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಸಿರಿಗೆರೆ ಸಮೀಪದ ಬ್ಯಾಲಹಾಳ್ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನೀರು ಕರೆಂಟ್ ಸಿಕ್ಕರೆ ರೈತರು ಬದುಕಿಕೊಳ್ಳುತ್ತಾರೆನ್ನುವುದನ್ನು ಗಮನದಲ್ಲಿಟ್ಟುಕೊಂಡು ತಾಲೂಕಿನಾದ್ಯಂತ 17 ಕಡೆ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಿದ್ದೇನೆ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 500 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಜೋಗ್‍ಫಾಲ್ಸ್‌ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದ್ದು, ಇನ್ನು 50 ವರ್ಷಗಳ ಕಾಲ ದಿನಕ್ಕೆ 10 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗಲಿದೆ ಎಂದರು.
ಒಂದು ಬಾರಿ ಗೆದ್ದವರು ಎರಡನೆ ಬಾರಿಗೆ ಭರಮಸಾಗರದಿಂದ ಗೆಲ್ಲುವುದಿಲ್ಲ ಎನ್ನುವ ನಂಬಿಕೆಯಿತ್ತು. ಮೊದಲ ಬಾರಿ ಸ್ಪರ್ಧಿಸಿದ್ದಾಗ ಓಡಾಡಲು ರಸ್ತೆಗಳಿರಲಿಲ್ಲ. ಎಲ್ಲಾ ಹಳ್ಳಿಗಳಲ್ಲೂ ರಸ್ತೆ ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ ಯುವಕರು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ ಎರಡನೆ ಬಾರಿ ಚುನಾವಣೆಯಲ್ಲಿಯೂ ನನ್ನನ್ನು ಗೆಲ್ಲಿಸಿದರು. ಭರಮಸಾಗರ ಹೋಬಳಿಯಲ್ಲಿ ವಿದ್ಯುತ್ ಪವರ್ ಸ್ಟೇಷನ್‍ಗಳನ್ನು ಕಟ್ಟಿಸಿದ್ದೇನೆ. ಕೋಡಿಹಳ್ಳಿ ಬಳಿ 23 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗಿದೆ. ಎಲ್ಲಾ ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗಬಾರದೆಂದು ದೊಡ್ಡ ದೊಡ್ಡ ಚೆಕ್ ಡ್ಯಾಂಗಳನ್ನು ಕಟ್ಟಿಸಿದ್ದೇನೆ ಎಂದು ತಿಳಿಸಿದರು.
ಅಧಿಕಾರ ಬಹಳಷ್ಟು ದಿನ ಇರುವುದಿಲ್ಲ. ಇದ್ದಷ್ಟು ಕಾಲ ಜನರಿಗೆ ಒಳ್ಳೆಯದು ಮಾಡಬೇಕೆಂಬ ಆಲೋಚನೆಯಿಟ್ಟುಕೊಂಡಿದ್ದೇನೆ. ಬ್ಯಾಲಹಾಳ್, ಯಳಗೋಡು, ಕೋಗುಂಡೆ, ಕಾಲ್ಗರೆ ಪಂಚಾಯಿತಿ ಸೇರಿದಂತೆ ಎಲ್ಲಾ ಗ್ರಾಮಗಳಿಗೆ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಮನೆ ಮನೆಗೆ ತಲುಪಿಸುತ್ತೇನೆ. ಕ್ಷೇತ್ರದಲ್ಲಿ ಎಲ್ಲಿಯೂ ಗದ್ದಲ ಗಲಾಟೆಗೆ ಅವಕಾಶ ಕೊಟ್ಟಿಲ್ಲ. ಎಲ್ಲಾ ಜಾತಿ ಜನಾಂಗದವರನ್ನು ಗೌರವದಿಂದ ಕಾಣುತ್ತಿದ್ದೇನೆಂದರು.
ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ವಿರೋಧ ಪಕ್ಷದ ಶಾಸಕರಾಗಿರುವ ಡಾ.ಎಂ.ಚಂದ್ರಪ್ಪನವರು ಹೇಗೆ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದಾರೆನ್ನುವುದು ಸೋಜಿಗ. ಪ್ರತಿ ಗ್ರಾಮದಲ್ಲಿಯೂ ಗುಣಮಟ್ಟದ ಸಿ.ಸಿ.ರಸ್ತೆಯಾಗಿದೆ. ಶಾಲಾ ಕಾಲೇಜು, ಕೆರೆ ಕಟ್ಟೆಗಳ ಅಭಿವೃದ್ಧಿ, ಚೆಕ್‍ಡ್ಯಾಂ ನಿರ್ಮಾಣ, ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ. ಭರಮಸಾಗರ ಹೋಬಳಿ ಹಾಗೂ ಹೊಳಲ್ಕೆರೆಯಲ್ಲಿ ಪ್ರತಿನಿತ್ಯವೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುತ್ತವೆ. ಸರ್ಕಾರಿ ಶಾಲೆಗಳಿಗೆ ಸ್ವಂತ ಹಣದಿಂದ ಬಸ್‍ಗಳನ್ನು ಬಿಟ್ಟು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿರುವ ರಾಜ್ಯದಲ್ಲಿಯೆ ಪ್ರಥಮ ಶಾಸಕ ಯಾರಾದರೂ ಇದ್ದರೆ ಅದು ನಮ್ಮ ಚಂದ್ರಣ್ಣನವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಶರಣ್‍ಕುಮಾರ್ ಮಾತನಾಡಿದರು, ಗ್ರಾಪಂ ಅಧ್ಯಕ್ಷ ಸುಜಾತ ಬಸವರಾಜ್, ಸದಸ್ಯರಾದ ಈಶ್ವರ, ನೀಲಕಂಠಪ್ಪ, ಜಯಣ್ಣ, ಪರಶಿವಪ್ಪ, ತಿಪ್ಪೇಸ್ವಾಮಿ, ಹಿರೇಬೆನ್ನೂರು ನಾಗರಾಜ್, ಶಿವಣ್ಣ, ರಾಮಣ್ಣ, ಕೆ.ಆರ್.ಐ.ಡಿ.ಎಲ್. ಎಂಜಿನಿಯರ್ ಸಚಿನ್ ಕೀರ್ತಿ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))