ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಇಡೀ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಯಾವುದಾದರೂ ಗ್ರಾಮದ ಜನರು ನನಗೆ ಮನವಿ ಸಲ್ಲಿಸಿದ್ದೀರಾ? ಹೇಳಿ, ಯಾರಾದರೂ ಮನವಿ ಮಾಡಿದ್ದೀರಾ? ಎಂಬ ಪ್ರಶ್ನೆ ಮಾಡಿದ ಶಾಸಕ ಡಾ.ಎಂ.ಚಂದ್ರಪ್ಪ, ನಾನು ಯಾರಿಂದಲೂ ಯಾವ ಅರ್ಜಿಯನ್ನಾಗಲೀ, ಮನವಿಯನ್ನಾಗಲೀ ನಿರೀಕ್ಷೆ ಮಾಡಿಲ್ಲ. ಎಲ್ಲರ ಅಭಿವೃದ್ಧಿಯೇ ನನ್ನ ಗುರಿ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.ತಾಲೂಕಿನ ಮಲ್ಲಾಡಿಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಐದು ಕೋಟಿ ರು. ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ೪೮೪ ಹಳ್ಳಿಗಳಿವೆ. ಅವುಗಳಿಗೆಲ್ಲಾ ಸಮಾನ ಆದ್ಯತೆ ನೀಡಿದ್ದೇನೆ. ಯಾವ ಊರಿನಲ್ಲಿ ಯಾವ ಕೆಲಸ ಆಗಬೇಕು, ಅಲ್ಲಿನ ಅಗತ್ಯಗಳೇನು ಎಂದು ಯೋಚನೆ ಮಾಡುತ್ತಲೇ ಯೋಜನೆಗಳನ್ನು ರೂಪಿಸುತ್ತೇನೆ. ಇದು ನನ್ನ ವಿಶೇಷ ಎಂದರು.೩೧ ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಶಾಸಕನಾದಾಗಿನಿಂದ ಇಲ್ಲಿಯವರೆಗೆ ಆಗಿರುವ ಕೆಲಸಗಳ ಬಗ್ಗೆ ಜನರು ಅವಲೋಕನ ಮಾಡಬೇಕು. ನಾನು ಮಾತುಗಳಲ್ಲಿ ಕಳೆದು ಹೋಗುವ ಶಾಸಕನಲ್ಲ. ಜನರಿಗೆ ಬೇಕಾದ್ದನ್ನು, ಗ್ರಾಮಕ್ಕೆ ಬೇಕಾದ್ದನ್ನು ಕೊಡುವ ಶಾಸಕ. ಜನರು ಕೊಟ್ಟಿರುವ ಅಧಿಕಾರವನ್ನು ಅವರ ಏಳಿಗೆಗೆ ಬಳಸಬೇಕು ಎಂಬ ಆಶಯವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.
ಮಳೆಗಾಲದಲ್ಲಿ ಜಮೀನುಗಳಲ್ಲಿ, ಹಳ್ಳಗಳಲ್ಲಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅಮೂಲ್ಯ ಸಂಪತ್ತಾದ ನೀರನ್ನು ಸಂರಕ್ಷಿಸುವ ಸಲುವಾಗಿ ಕ್ಷೇತ್ರದ ಹಲವು ಕಡೆಗಳಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸುತ್ತಿದ್ದೇನೆ. ಅಂತಹುದೇ ಕೆಲಸವನ್ನು ಮಲ್ಲಾಡಿಹಳ್ಳಿ ಗ್ರಾಮದಲ್ಲಿ ಈಗ ಮಾಡುತ್ತಿದ್ದೇನೆ. ಇದಕ್ಕೆ ೫ ಕೋಟಿ ರು. ಅನುದಾನ ನೀಡಿದ್ದೇನೆ ಎಂದರು.ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸಿಕೊಡುವುದು ನನ್ನ ಕನಸಾಗಿದ್ದು ಕಿರು ಅಣೆಕಟ್ಟೆ, ಕೆರೆ ಕಟ್ಟೆಗಳಿಗೆ ಆದ್ಯತೆ ಮೇಲೆ ಅನುದಾನ ಒದಗಿಸಿದ್ದೇನೆ. ಇದರಿಂದ ಕ್ಷೇತ್ರದ ಬಹುಭಾಗದಲ್ಲಿ ಅಂತರಜಲಮಟ್ಟ ಸುಧಾರಿಸಿದೆ. ಹದಿನೇಳು ಕಡೆ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗಿದೆ. ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಹದಿಮೂರುವರೆ ಎಕರೆ ಪ್ರದೇಶದಲ್ಲಿ ಐದು ನೂರು ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ದಿನಕ್ಕೆ ಹತ್ತು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದರು.
ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರು. ಖರ್ಚು ಮಾಡಿದ್ದೇನೆ. ಸ್ಕೂಲ್, ಕಾಲೇಜು, ಸ್ಟೇಡಿಯಂ, ಈಜುಕೊಳ, ಒಳಾಂಗಣ ಕ್ರೀಡಾಂಗಣ, ಹೈಟೆಕ್ ಆಸ್ಪತ್ರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಕಸ್ತೂರಬಾ ಶಾಲೆಗಳನ್ನು ಕಟ್ಟಿಸಿದ್ದೇನೆ. ತಾಲೂಕಿನಾದ್ಯಂತ 493 ಹಳ್ಳಿಗಳಲ್ಲಿ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದರು.ನ್ಯಾಯವಾದಿ ಸತ್ಯನಾರಾಯಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ನಾಗಪ್ಪ, ಸದಸ್ಯರಾದ ಲತಾ, ರಮೇಶ್, ಅಜ್ಜಯ್ಯ, ಉಮೇಶ್, ನಾಗಪ್ಪ, ರೂಪ ಸುರೇಶ್, ಮರುಳುಸಿದ್ದಪ್ಪ, ಗುತ್ತಿಗೆದಾರ ಜಗದೀಶ್, ಗ್ರಾಮದ ಮುಖಂಡರು ಹಾಜರಿದ್ದರು.
ನಾನು ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಜನರು ಕೊಟ್ಟಿರುವ ಅಧಿಕಾರವನ್ನು ಜನರ ಅಭಿವೃದ್ಧಿಗೆ ಬಳಸುತ್ತಿದ್ದೇನೆ. ಕ್ಷೇತ್ರದ ಎಲ್ಲ ಸಮುದಾಯಗಳ ಹಿತ ಕಾಪಾಡುವುದು ನನ್ನ ಅಪೇಕ್ಷೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ.ಡಾ. ಎಂ. ಚಂದ್ರಪ್ಪ, ಶಾಸಕ