ಸಾರಾಂಶ
ನಾನು ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಭಾರತದ ಬರಹಗಾರ: ಕಾದಂಬರಿಕಾರ ಎಸ್.ಎಲ್.ಭೈರಪ್ಪ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಾನು ಕನ್ನಡದ ಲೇಖಕ ಮಾತ್ರವಲ್ಲ. ಭಾರತದ ಲೇಖಕ. ನಾನು ಕನ್ನಡದಲ್ಲಿ ಬರೆಯುತ್ತಿರುವ ಭಾರತದ ಬರಹಗಾರ ಎಂದು ಹಿರಿಯ ಸಾಹಿತಿ, ಪದ್ಮಭೂಷಣ ಎಸ್.ಎಲ್.ಭೈರಪ್ಪ ಹೇಳಿದರು.ಸೋಮವಾರ ಬಬ್ಬೂರುಕಮ್ಮೆ ಸೇವಾ ಸಮಿತಿಯ 2023ರ ಸಾಲಿನ ‘ಆಚಾರ್ಯ ಬಿ.ಎಂ.ಶ್ರೀ ಪ್ರಶಸ್ತಿ’ಯನ್ನು ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ಅವರಿಂದ ಸ್ವೀಕರಿಸಿ ಮಾತನಾಡಿದರು.
ಮಹಾರಾಷ್ಟ್ರದ ಮರಾಠಿ ಜನರು ನನ್ನನ್ನು ಕನ್ನಡದಲ್ಲಿ ಬರೆಯುವ ಮರಾಠಿ ಬರಹಗಾರ ಎಂದು ಭಾವಿಸುತ್ತಾರೆ. ಅದೇ ರೀತಿಯಲ್ಲಿ ಬೇರೆ ಭಾಷೆಗಳ ಜನತೆಯಲ್ಲಿಯೂ ಇಂತಹ ಭಾವನೆಯಿದೆ. ಈಗಿನ ಹಲವು ಲೇಖಕರು ನಾವು ಕನ್ನಡದವರು, ನಮ್ಮದೆ ಬೇರೆ, ಭಾರತವೇ ಬೇರೆ ಅಂದುಕೊಳ್ಳುತ್ತಾರೆ. ಆದರೆ, ನಾನು ಖಂಡಿತವಾಗಿ ಬರೀ ಕನ್ನಡದವನು ಎಂದುಕೊಳ್ಳುವುದಿಲ್ಲ. ಬರಣಿಗೆಯಲ್ಲಿ ಇರುವ ಶಕ್ತಿ ಇದಕ್ಕೆ ಕಾರಣ ಎಂದು ಹೇಳಿದರು.ಭಾರತದಲ್ಲಿ ಪ್ರದೇಶಕ್ಕೆ ಅನುಸಾರ ಆಚರಣೆಯ ವಿಧಾನಗಳಲ್ಲಿ ವಿಭಿನ್ನತೆ ಇದ್ದರೂ ಮೂಲಸಂಸ್ಕೃತಿ, ತತ್ವ ಒಂದೇ ಆಗಿದೆ. ವೃತ್ತಿ, ಬರವಣಿಗೆಗಾಗಿ ದೇಶಾದ್ಯಂತ ಸಂಚರಿಸಿದಾಗ ಒಂದು ಪ್ರದೇಶಕ್ಕೂ ಇನ್ನೊಂದು ಪ್ರದೇಶಕ್ಕೂ ಆಚರಣೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಆದರೆ, ಅಲ್ಲಿನ ಶ್ರೀಸಾಮಾನ್ಯರ ಜೀವನಕ್ರಮ, ಅದರದಲ್ಲಿನ ವಿಶೇಷಣಗಳು, ಅವರ ಆಚರಣಾ ಪದ್ಧತಿ ಗಮನಿಸಿದಾಗ ಭಾರತದ ಮೂಲಸಂಸ್ಕೃತಿ ಒಂದೇ ಎಂಬುದು ಅನುಭವಕ್ಕೆ ಬಂದಿದೆ ಎಂದರು.
ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ಮಾತನಾಡಿದರು.ಸೇವಾ ಸಮಿತಿಯ ಅಧ್ಯಕ್ಷ ಡಾ. ಎ. ವಿ. ಪ್ರಸನ್ನ ಮಾತನಾಡಿ, ಭೈರಪ್ಪರಂತಹ ಮೇರು ಸಾಹಿತಿಗೆ ಪ್ರಶಸ್ತಿ ನೀಡುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಬ್ಬೂರುಕಮ್ಮೆ ಸಮುದಾಯದ ವಿವಿಧ ಕ್ಷೇತ್ರದ 12 ಸಾಧಕರಿಗೆ ಸಾಧಕರತ್ನ ಪ್ರಶಸ್ತಿ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪ್ರದಾನ ಮಾಡಲಾಯಿತು.