ಸಿಗುತ್ತಿಲ್ಲ ಫಾರಂ ನಂ ಮೂರು, ಸಮಸ್ಯೆ ನೂರಾರು

| Published : Apr 07 2024, 01:50 AM IST

ಸಾರಾಂಶ

ಪಟ್ಟಣದ ಪಪಂನಿಂದ ಫಾರಂ ನಂ-3ರ ನಮೂನೆಗಳು ಜನರಿಗೆ ಸಿಗುತ್ತಿಲ್ಲ. ನಿತ್ಯ ಪಪಂಗೆ ಅಲೆದಾಡಿ ಜನರು ಬೇಸತ್ತಿದ್ದಾರೆ.

ಜನರ ಅಲೆದಾಟಕ್ಕಿಲ್ಲ ಪರಿಹಾರ । ಕುಕನೂರು ಪಪಂನಿಂದ ನಿರ್ಲಕ್ಷ್ಯ

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದ ಪಪಂನಿಂದ ಫಾರಂ ನಂ-3ರ ನಮೂನೆಗಳು ಜನರಿಗೆ ಸಿಗುತ್ತಿಲ್ಲ. ನಿತ್ಯ ಪಪಂಗೆ ಅಲೆದಾಡಿ ಜನರು ಬೇಸತ್ತಿದ್ದಾರೆ. ಸುಮಾರು ಒಂದು ವರ್ಷದಿಂದಲೇ ಕೆಲವರು ಫಾರಂ ನಂ-3ಕ್ಕೆ ಅಲೆದಾಡುತ್ತಿದ್ದಾರೆ. ಇದರಿಂದ ಜನರ ಅಲೆದಾಟಕ್ಕೆ ಪರಿಹಾರ ಇಲ್ಲದಂತಾಗಿದೆ.

ಮನೆಯ, ಆಸ್ತಿಯ ನೋಂದಣಿ, ವ್ಯಾಪಾರ, ಖರೀದಿ, ಮಾರಾಟ ಹಾಗೂ ಇತರೆ ಉದ್ದೇಶಕ್ಕಾಗಿ ಜನರು ಪಪಂಗೆ ಫಾರಂ 3 ನಮೂನೆ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯನ್ನು ಪಪಂ ಅಧಿಕಾರಿಗಳು ಸರಿಯಾಗಿ ವಿಲೇ ಮಾಡಿ ಅರ್ಜಿ ನೀಡಿದವರಿಗೆ ಅವರಿಗೆ ಫಾರಂ 3ದ ನಮೂನೆಯನ್ನು ಒದಗಿಸುತ್ತಿಲ್ಲ. ನಿತ್ಯ ಅರ್ಜಿ ನೀಡಿದವರು ತಮ್ಮ ಆಸ್ತಿಯ ನಮೂನೆ ಫಾರಂ ಪಡೆಯಲು ಪಪಂಗೆ ಅಲೆದಾಡುತ್ತಿದ್ದಾರೆ. ಆದರೂ ಸಹ ಪಪಂನ ಅಧಿಕಾರಿಗಳು ಜನರ ಅಲೆದಾಟಕ್ಕೆ ಕಣ್ಣು ತೆರೆಯುತ್ತಿಲ್ಲ ಎಂಬುದು ಬೇಸರದ ಸಂಗತಿ.

ವರ್ಷದ ಅರ್ಜಿಗಳೂ ಉಂಟು: ಇನ್ನೂ ತಿಂಗಳು, ಎರಡು ತಿಂಗಳೂ ಇರಲಿ ವರ್ಷದ ಹಿಂದೆಯೇ ನೀಡಿದ ಅರ್ಜಿಗಳಿಗೂ ಸಹ ಫಾರಂ ನಂ 3 ನೀಡಿಲ್ಲ. ಇದರಿಂದ ಜನರು ನಿತ್ಯ ಪಪಂಗೆ ಅಲೆಡಾಡುವ ಪರಿಸ್ಥಿತಿ ಇದೆ.

ನೂರಾರು ಅರ್ಜಿ:

ಒಂದಲ್ಲ ಎರಡಲ್ಲ, ಬರೋಬ್ಬರಿ ನೂರರ ಅಂಕಿದಾಟುವ ಅರ್ಜಿಗಳು ವಿಲೇ ಆಗದೆ ಹಾಗೆ ಪಪಂನಿಂದ ಉಳಿದಿವೆ. ಇದರಿಂದ ನೂರಾರು ಜನರ ಬದುಕು ಸಹ ನಿತ್ಯ ಅಲೆದಾಡಬೇಕಾಗಿದೆ.

ಅರ್ಜಿ ಫಾರಂ ಮೂರು ಸಿಗದ ಕಾರಣ ಜನರಿಗೆ ಸಮಸ್ಯೆ ನೂರಾರು ಆಗಿವೆ. ಸತ್ಕಾಲಕ್ಕೆ ಯಾವುದೇ ಕೆಲಸ ಆಗದೆ ತೊಂದರೆ ಪಡುತ್ತಿದ್ದಾರೆ. ಈ ಹಿಂದೆ ಫಾರಂ ನಂ 3 ನೀಡಲು ಹಣದ ಬೇಡಿಕೆ ಇಟ್ಟ ಕುಕನೂರು ಪಪಂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ. ಮಗಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಲೋನ್ ಪಡೆಯಲು ಆಸ್ತಿಯ ಫಾರಂ ನಂ ಮೂರು ಬೇಕಿತ್ತು. ಪಪಂ ಸಿಬ್ಬಂದಿ ಸತಾಯಿಸಿದ್ದಕ್ಕೆ ನೊಂದ ಪಾಲಕರೊಬ್ಬರು ಪಪಂನ ಸಿಬ್ಬಂದಿ ಆಟ ಬಯಲು ಮಾಡಿ ಲೋಕಾಯುಕ್ತ ಬಲೆಗೆ ಒಪ್ಪಿಸಿದ್ದ ಘಟನೆ ಇನ್ನೂ ಮಾಸಿಲ್ಲವಾದರೂ ಸಹ ಇನ್ನೂ ನೂರಾರು ಅರ್ಜಿ ವಿಲೇ ಆಗದೆ ಉಳಿದಿರುವುದು ಪಪಂನ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.