ಸಾರಾಂಶ
ಮದ್ದೂರು : ಮಾಜಿ ಸಂಸದೆ ಸುಮಲತಾ ಅವರ ಕಾರು ಹತ್ತಲ್ಲ ಎಂದು ನಾನು ಹೇಳಿಲ್ಲ. ಈ ವಿಚಾರದಲ್ಲಿ ಚಿಲ್ಲರೆ ರೀತಿ ರಾಜಕೀಯ ಬೆರೆಸುವ ಅವಶ್ಯಕತೆ ನನಗಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವರ ಕಾರು ಹತ್ತಲ್ಲ, ಇವರ ಕಾರು ಹತ್ತಲ್ಲ ಎಂದು ಹೇಳಿಲ್ಲ. ಚಲುವರಾಯಸ್ವಾಮಿಗೆ ಈ ವಿಷಯ ಹೇಗೆ ಹೋಗಿದೆಯೋ ಗೊತ್ತಿಲ್ಲ. ಸುಮಲತಾ ಅವರು ಬಳಸಿದ ಕಾರು ತಗೊಳಲ್ಲ ಎಂದು ನಾನು ಪತ್ರ ಬರೆದಿದ್ದೇನಾ ಎಂದು ಪ್ರಶ್ನಿಸಿದರು.
ಸಿಎಂ ಆಗಿದ್ದಾಗ ಸರ್ಕಾರಿ ಕಾರು, ಡ್ರೈವರ್, ಸಂಬಳ ತಗೊಂಡಿಲ್ಲ: ಸರ್ಕಾರಿ ಕಾರು ಅದೇನು ನಮ್ಮಪ್ಪನ ಆಸ್ತಿನಾ. ನಾನು ಸಿಎಂ ಆಗಿದ್ದಾಗ ಸರ್ಕಾರಿ ಕಾರು, ಡ್ರೈವರ್, ಸಂಬಳ ತಗೊಂಡಿಲ್ಲ. ನಾನು ಅಧಿಕಾರದಲ್ಲಿ ಇರುವವರೆಗೆ ಒಂದು ಶಾಶ್ವತ ಕಾರು ಕೊಡಿ ಎಂದು ಕೇಳಿರುವೆ. ಅವರು ಯಾರೋ ಬಳಸಿದ್ದಾರೆ, ನನಗೆ ಬೇಡವೆಂದು ನಾನು ಹೇಳಿಲ್ಲ. ಇಂತಹ ಸಣ್ಣ ವಿಚಾರವನ್ನು ಚರ್ಚೆ ಮಾಡುವ ಸಂಸ್ಕೃತಿಯನ್ನು ಚಲುವರಾಯಸ್ವಾಮಿ ಬಿಡುವುದು ಒಳ್ಳೆಯದು ಎಂದು ಟೀಕಿಸಿದರು.
ಈ ಬಗ್ಗೆ ಏನೋ ಮಾತಾಡಿಕೊಂಡಿದ್ದಾರೆ ಮಾತಾಡಲಿ. ಇದಕ್ಕೆಲ್ಲಾ ನಾನು ಉತ್ತರ ಯಾಕೆ ಕೊಡಬೇಕು. ನನ್ನ ಆತ್ಮ ತೃಪ್ತಿಗೆ ಕೆಲಸ ಮಾಡಿದರೆ ಅಷ್ಟೇ ಸಾಕು. ಯಾರನ್ನೋ ಮೆಚ್ಚಿಸಲು ಕೆಲಸ ಮಾಡುವುದಕ್ಕೆ ಆಗಲ್ಲ ಎಂದು ತಿರುಗೇಟು ನೀಡಿದರು.
ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂಬ ಮಾಜಿ ಸಚಿವ ನಾರಾಯಣಗೌಡ ಹೇಳಿಕೆಗೆ ಉತ್ತರಿಸಿದ ಎಚ್ಡಿಕೆ, ಈ ಕುರಿತು ಸಾರ್ವಜನಿಕವಾಗಿ ಮಾತನಾಡಿದ್ದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಾ? ಬಂದು ಕೂತರೆ ಎದುರುಗಡೆ ನಾಲ್ಕು ಗೋಡೆ ಮಧ್ಯ ಮಾತನಾಡಬಹುದು. ಇವೆಲ್ಲಾ ಹೊರಗಡೆ ಚರ್ಚೆ ಮಾಡುವುದಕ್ಕೆ ಆಗಲ್ಲ. ನನ್ನ ಬಳಿ ಏನು ಸಮಸ್ಯೆ ಎಂದು ಹೇಳಿದರೆ ಸರಿಪಡಿಸಬಹುದು ಎಂದರು.
ಕ್ಯಾಬಿನೆಟ್, ಸಿಎಂ ಇರೋದು ಏಕೆ?: ಔತಣಕೂಟ ಮಾಡಿಕೊಂಡು ವಾಲ್ಮೀಕಿ ನಿಗಮದಲ್ಲಿ ಹೊಡೆದಿರೋ ದುಡ್ಡು ಬಂದಿಲ್ಲ, ಭೋವಿ ನಿಗಮದ ದುಡ್ಡಿನ ಶೇರ್ ಬಂದಿಲ್ಲ ಎಂದು ಚರ್ಚೆ ಮಾಡ್ತೀರಾ?. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಬಗ್ಗೆ ಮಾತಾಡುತ್ತೇವೆ ಎಂದಿದ್ದಾರೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಬೇಕಾದ ವಿಚಾರವನ್ನು ಔತಣಕೂಟದಲ್ಲಿ ಏನು ಚರ್ಚೆ ಮಾಡ್ತೀರಾ. ಕ್ಯಾಬಿನೆಟ್, ಸಿಎಂ ಇರೋದು ಏಕೆ. ಅಹಿಂದ ಮಹಾನ್ ನಾಯಕರು ಅಲ್ವಾ ಇವರು ಎಂದು ಪ್ರಶ್ನೆ ಮಾಡಿದರು.