ಸಾರಾಂಶ
- ಸಂಪುಟ ಪುನಾರಚನೆಯಲ್ಲಿ 15 ಜನ ಹೊಸಬರಿಗೆ ಅವಕಾಶ ನೀಡಬೇಕೆಂಬ ಬಗ್ಗೆಯೂ ನನಗೆ ಗೊತ್ತಿಲ್ಲ: ಜಗಳೂರು ಶಾಸಕ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಖ್ಯಮಂತ್ರಿ ಬದಲಾವಣೆಯಂತಹದ್ದೇನೂ ಇಲ್ಲ. ನಮ್ಮ ಹೈಕಮಾಂಡ್ ಯಾರಿಗೆ ಮುಖ್ಯಮಂತ್ರಿ ಅಂದಿದೆಯೋ ಅವರನ್ನು ಒಪ್ಪಿದ್ದೇವೆ. ನಾಳೆ ನಿಮ್ಮನ್ನೇ (ಮಾಧ್ಯಮ) ಮುಖ್ಯಮಂತ್ರಿಯೆಂದರೂ ನಮ್ಮ ಸಿಎಲ್‌ಪಿ ನಾಯಕರೆಂದು ಒಪ್ಪುತ್ತೇವೆ ಎಂದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ವೈಯಕ್ತಿಕ ಅಭಿಪ್ರಾಯ ಎಂಬುದಿರುತ್ತದೆ. ಆದರೆ, ನಮ್ಮ ವರಿಷ್ಠರ ತೀರ್ಮಾನವೇ ನಮಗೆ ಅಂತಿಮ. ಯಾರದ್ದಾದರೂ ಹೆಸರು ಸೂಚಿಸುವಂತೆ ಹೈಕಮಾಂಡ್ ಕೇಳಿದರೆ ಖಂಡಿತಾ ನಾನು ಹೆಸರು ಹೇಳುತ್ತೇನೆ. ನಾಳೆ ಬೆಂಗಳೂರಿನಲ್ಲಿ ಸಂಪುಟ ಸಭೆ ಇದೆ. ನಾನಿರುವ ಸಮಿತಿ ಸಭೆಯೂ ಇದೆ. ಸಿಎಂ ಬದಲಾವಣೆ ವಿಚಾರ ಸೇರಿದಂತೆ ಮಾಧ್ಯಮಗಳ ಮುಂದೆ ಮಾತನಾಡುವಂತಹ ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ದೇವೇಂದ್ರಪ್ಪ ಹೇಳಿದರು.
ಸಂಪುಟ ಪುನಾರಚನೆಯಲ್ಲಿ 15 ಜನ ಹೊಸಬರಿಗೆ ಅವಕಾಶ ನೀಡಬೇಕೆಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಹಿಂದೆ ಪರಿಶಿಷ್ಟ ಪಂಗಡದ ಮೂವರು ಸಚಿವರಿದ್ದರು. ಈ ಪೈಕಿ ಇಬ್ಬರು ಕಾರಣಾಂತರದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಅವೆರಡೂ ಸ್ಥಾನಗಳನ್ನು ತುಂಬಿಕೊಳ್ಳುವ ಸಾಧ್ಯತೆ, ಅವಕಾಶಗಳೂ ಹೆಚ್ಚಾಗಿವೆ. ಅದನ್ನು ಸರ್ಕಾರ ಮಾಡಬಹುದೆಂಬ ವಿಚಾರ ಮಾಧ್ಯಮಗಳಿಂದಲೇ ನಾನು ಗಮನಿಸಿದ್ದೇನಷ್ಟೇ. ಅದನ್ನು ಹೊರತುಪಡಿಸಿದರೆ ಸಂಪುಟ ಪುನಾರಚನೆ, ಸಿಎಂ ಬದಲಾವಣೆ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ನನ್ನಲ್ಲಿ ಇಲ್ಲ ಎಂದರು.ಕೇವಲ ದಾವಣಗೆರೆಗಷ್ಟೇ ಅಲ್ಲ, ಒಂದೊಂದು ಜಿಲ್ಲೆಯಲ್ಲಿ 6, 7, 8, 10 ಶಾಸಕರಿದ್ದಾರೆ. ಎಲ್ಲ ಕಡೆಯಿಂದಲೂ ಸಚಿವ ಸ್ಥಾನ ಕೇಳುತ್ತಿದ್ದಾರೆ. ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಎಷ್ಟು ಜಿಲ್ಲೆಗಳಿವೆ, ಸಂಪುಟದಲ್ಲಿ ಎಷ್ಟು ಸ್ಥಾನಗಳಿವೆ ಎಂಬುದನ್ನೂ ಗಮನಿಸಿ, ಸಚಿವ ಸ್ಥಾನ ನೀಡಬೇಕಾಗುತ್ತದೆ. ಜಾತಿವಾರು, ಜಿಲ್ಲಾವಾರು ಮಾನದಂಡ ಆಧರಿಸಿ, ಸಚಿವ ಸ್ಥಾನ ನೀಡಲಾಗುತ್ತದೆ. ಕೇಳಿದಷ್ಟು ಸಚಿವ ಸ್ಥಾನವನ್ನು ಕೊಡುವುದಕ್ಕೆ ಆಗಬೇಕಲ್ಲ? ಹೀಗೆ ಕೇಳಿದಷ್ಟು ಸಚಿವ ಸ್ಥಾನ ಕೊಡುವುದಕ್ಕೆ ಅವಕಾಶವಾದರೂ ಇರಬೇಕಲ್ಲ ಎಂದು ಹೇಳಿದರು.
ನವೆಂಬರ್ ಕ್ರಾಂತಿ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಂದ್ರಪ್ಪ, ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಇದೆ. ಅರ್ಹರಿಗೆ, ಮಾತಿನಂತೆ ನಡೆದುಕೊಂಡ ಸಂದರ್ಭ ಅವಕಾಶ ಕಲ್ಪಿಸುವುದು ಸಹಜ. ಅದನ್ನೆಲ್ಲಾ ಕ್ರಾಂತಿ ಎನ್ನುವುದು ಎಷ್ಟರಮಟ್ಟಿಗೆ ಸರಿ? ಕೆಲವರು ತಮ್ಮ ಪ್ರಕಾರ ನವೆಂಬರ್ ಕ್ರಾಂತಿ ಅಂದೆಲ್ಲಾ ವ್ಯಾಖ್ಯಾನ ಮಾಡಿದ್ದಾರೆ. ಯಾರದ್ದೋ ವ್ಯಾಖ್ಯಾನಕ್ಕೆ ನಾನು ಯಾಕೆ ಪ್ರತಿಕ್ರಿಯಿಸಲಿ ಎಂದರು.ಪವರ್ ಶೇರಿಂಗ್ ಅನ್ನೋದನ್ನೂ ವರಿಷ್ಠರು ಮಾಡಬೇಕು. ಅದಾಗಿದ್ದರೆ ವರಿಷ್ಠರ ಹಂತದಲ್ಲೇ ಮಾಡಿಕೊಳ್ಳುತ್ತಾರೆ. ನನಗೂ ಸಚಿವನಾಗುವ ಆಸೆ ಇದೆ. ಜೇಷ್ಠತೆ, ಸೀನಿಯರ್‌ಗಳೂ ಇದ್ದಾರೆ. ಅರ್ಹತೆ, ವಯಸ್ಸಿಗೆ ಸಚಿವ ಸ್ಥಾನವನ್ನು ನೀಡಬೇಕಾಗುತ್ತದೆ. ಜೇಷ್ಠತೆ, ಅರ್ಹತೆ ಬಿಟ್ಟರೆ ಮಂತ್ರಿಯಾಗುವ ಎಲ್ಲ ಅರ್ಹತೆ ನನಗೂ ಇವೆ. ನಾವೂ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಬೇಕಾಗುತ್ತದೆ ಎನ್ನುವ ಮೂಲಕ ಪರಿಶಿಷ್ಟ ಪಂಗಡದ ಕೋಟಾದಲ್ಲಿ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಎಸ್‌ಟಿ ಮೀಸಲು ಕ್ಷೇತ್ರದ ಶಾಸಕ ಜಗಳೂರಿನ ಬಿ.ದೇವೇಂದ್ರಪ್ಪ ತಾವೂ ಆಕಾಂಕ್ಷಿ ಎಂಬ ಇಂಗಿತ ವ್ಯಕ್ತಪಡಿಸಿದರು.
- - -(ಬಾಕ್ಸ್) * ರಾಜನಹಳ್ಳಿಗೆ ಹೆಲಿಕಾಪ್ಟರಲ್ಲಿ ಬಂದಿದ್ದು ಆಕಸ್ಮಿಕ ಪ್ರತಿ ಶುಕ್ರವಾರ ಸಮಿತಿ ಸಭೆ ಮುಗಿಸಿಕೊಂಡು ಬರುವಾಗ ಪಿಡಬ್ಲ್ಯುಡಿ ಸಚಿವ ಸತೀಶ ಜಾರಕಿಹೊಳಿ ಸಾಹೇಬರ ಜೊತೆಗೆ ನಾನು, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೆಲಿಕಾಪ್ಟರ್‌ನಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಬಂದಿಳಿದಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಜಗಳೂರು ಕ್ಷೇತ್ರದಲ್ಲಿ 1950ರ ಕಾಲದ ಸೇತುವೆಗಳಿವೆ. ಸಂಪೂರ್ಣ ಶಿಥಿಲಗೊಂಡಿವೆ. ರಾಜನಹಳ್ಳಿಯಲ್ಲಿ 2 ಕಡೆ ಭೂಮಿಪೂಜೆಗೆ ಹೋಗುತ್ತೇನೆಂದು ಸಚಿವರ ಬಳಿ ಹೇಳಿದಾಗ ಒಟ್ಟಿಗೆ ಹೆಲಿಕಾಪ್ಟರಲ್ಲೇ ಹೋಗೋಣ ಅಂದರು. ಆಗ ನಾವುಗಳೂ ಜೊತೆಗೆ ಬಂದೆವು. ಒಂದು ಕಡೆ ಊಟ ಮಾಡಿದೆವು. ಭೂಮಿಪೂಜೆಗೆ ಕೈ ಜೋಡಿಸಿದೆವು ಅಷ್ಟೇ. ಸತೀಶ ಜಾರಕಿಹೊಳಿ ಸಾಹೇಬರ ವ್ಯಕ್ತಿತ್ವ, ಭಾವನೆ, ಕೆಲಸದ ಕಾರ್ಯವೈಖರಿ ಅತ್ಯುತ್ತಮವಾದುದು. ತುಂಬಾ ಜನ ಆಡಿಯೂ ಮಾಡುವುದಿಲ್ಲ. ಆದರೆ, ಸತೀಶ ಜಾರಕಿಹೊಳಿ ಆಡದೇ ಮಾಡುವವರು ಎಂದು ದೇವೇಂದ್ರಪ್ಪ ಸತೀಶ್ ಜಾರಕಿಹೊಳಿ ಗುಣಗಾನ ಮಾಡಿದರು.- - -
(ಸಾಂದರ್ಭಿಕ ಚಿತ್ರ);Resize=(128,128))
;Resize=(128,128))
;Resize=(128,128))
;Resize=(128,128))