ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಕುರಿತ ಚರ್ಚೆಗಳ ಬಗ್ಗೆ ಯಾವುದೇ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಯಾವ ಪ್ರವಾಸಕ್ಕೆ ಹೋಗಿದ್ದಾರೆ ಎಂಬುವುದರ ಬಗ್ಗೆ ಕಿಂಚಿತ್ತು ಮಾಹಿತಿಯೂ ಇಲ್ಲ. ನಾನು ನಿರಂತರವಾಗಿ ಕೆಲಸದಲ್ಲೇ ತೊಡಗಿಸಿಕೊಂಡಿದ್ದೇನೆ. ಬರೀ ಕೆಲಸ, ಕೆಲಸ ಮಾತ್ರ ಮಾಡುತ್ತಿದ್ದೇನೆ ಎಂದರು.ಸಿಎಂ ಬದಲಾವಣೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಚರ್ಚೆಗಳು ನಡೆದರೂ ಅದು ದೆಹಲಿಯಲ್ಲಿ ನಡೆಯಬೇಕು. ರಾಜ್ಯದಲ್ಲಿ ಇಂತಹ ಚರ್ಚೆಗಳು ನಡೆದರೆ ಅದು ಅಕ್ಷಮ್ಯ ಅಪರಾಧ. ದೆಹಲಿ ಹೈಕಮಾಂಡ್ ಏನು ಹೇಳುತ್ತದೆ ಎಂಬುವುದನ್ನು ನಾವು ಪಾಲಿಸಬೇಕಾಗುತ್ತದೆ ಎಂದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಚನ್ನರಾಜ್ ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳು ಮಾತ್ರ ಎಂದರು.ಇನ್ನು ಬೆಳಗಾವಿ ಜಿಲ್ಲೆಯಲ್ಲಿ ವರ್ಷದ 9 ತಿಂಗಳು ಮಳೆಯಾದರೂ ಬೇಸಿಗೆ ವೇಳೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದೇ ಇರುತ್ತದೆ. ಈ ಬಾರಿ ಅಂತಹ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಹಿರೇ ಬಾಗೇವಾಡಿ ಗ್ರಾಮದಲ್ಲಿ ಬಸ್ ನಿಲ್ದಾಣದ ಅವಶ್ಯಕತೆ ಇದೆ. ಈಗಾಗಲೇ ಪ್ರಸ್ತಾವನೆಯೂ ಸಿದ್ಧಗೊಂಡಿದೆ. ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ್ದು, ಬಸ್ ನಿಲ್ದಾಣಕ್ಕೆ ಸೂಕ್ತ ಜಾಗದ ಕೊರತೆ ಕಾಡುತ್ತಿದೆ. ಶೀಘ್ರವೇ ಇದಕ್ಕೆ ಪರಿಹಾರ ಸಿಗಲಿದೆ. ಅಲ್ಲದೆ, ಬೆಳಗಾವಿ ಗ್ರಾಮೀಣ ತಾಲೂಕು ರಚನೆ ಬಗ್ಗೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
