ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ

| Published : Sep 30 2024, 01:16 AM IST

ಸಾರಾಂಶ

ತುಮಕೂರು: ಶಿಕ್ಷಕನಾಗಬೇಕೆಂದುಕೊಂಡಿದ್ದ ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.

ತುಮಕೂರು: ಶಿಕ್ಷಕನಾಗಬೇಕೆಂದುಕೊಂಡಿದ್ದ ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.ಭಾನುವಾರ ನಗರದ ಕನ್ನಡ ಭವನದಲ್ಲಿ ಆಟೋ ಚಾಲಕರು ಮತ್ತು ಇತರೇ ಅಸಂಘಟಿತ ಕಾರ್ಮಿಕರ ವೇದಿಕೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಲೋಕಸಭಾ ಮಾಜಿ ಸದಸ್ಯ ದಿ.ಎಸ್. ಮಲ್ಲಿಕಾರ್ಜುನಯ್ಯನವರು ಅಂದು ಹೇಳಿದ ಮಾತಿನಿಂದಾಗಿ ತಾವು ರಾಜಕೀಯ ಕ್ಷೇತ್ರ ಪ್ರವೇಶ ಮಾಡುವಂತಾಯಿತು. ಇಲ್ಲವಾಗಿದ್ದರೆ ಶಿಕ್ಷಕನಾಗಿ ಇಂದು ಸೇವೆಯಿಂದ ನಿವೃತ್ತನಾಗಿರುತ್ತಿದ್ದೆ ಎಂದರು.ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ತಾವು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದು ಐದು ಬಾರಿ ಲೋಕಸಭಾ ಸದಸ್ಯರಾಗಿ, 50 ವರ್ಷ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಉಳಿಯಲು ತುಮಕೂರು ಕ್ಷೇತ್ರದ ಜನರು ನೀಡಿದ ಸಹಕಾರವನ್ನು ಮರೆಯಲಾರೆ ಎಂದರು.ಪದವಿ ಶಿಕ್ಷಣ ಮುಗಿಸಿದ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ತಮ್ಮನ್ನು ಕರೆಸಿಕೊಂಡು ಕೋರಾದ ಶಾಲೆಯಲ್ಲಿ ಶಿಕ್ಷಕ ಹುದ್ದೆ ಖಾಲಿ ಇದೆ, ಕೆಲಸಕ್ಕೆ ಸೇರಿಕೊ ಎಂದು ಹೇಳಿದರು. ಏನು ಮಾಡುವುದೆಂದು ಗೊತ್ತಾಗದೆ. ಎಸ್.ಮಲ್ಲಿಕಾರ್ಜುನಯ್ಯನವರ ಆಫೀಸಿಗೆ ಹೋಗಿ ಶಿಕ್ಷಕ ಹುದ್ದೆಯ ಆದೇಶ ಪತ್ರ ತೋರಿಸಿದೆ. ಆ ಪತ್ರವನ್ನು ಹರಿದುಹಾಕಿದ ಮಲ್ಲಿಕಾರ್ಜುನಯ್ಯನವರು, ಶಿಕ್ಷಕ ಕೆಲಸ ಮಾಡಲು ನಿನಗಿಂಥಾ ಬುದ್ಧಿವಂತರಿದ್ದಾರೆ, ನೀನು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಕೋ ಎಂದು ಹೇಳಿದರು ಎಂದು ಹಳೆಯದನ್ನು ನೆನಪಿಸಿಕೊಂಡರು.ಆಗಿನ ಪ್ರಭಾವಿ ರಾಜಕೀಯ ನಾಯಕರಾದ ಕೆಂಪಹೊನ್ನಯ್ಯನವರು ನನ್ನ ರಾಜಕೀಯ ಗುರುಗಳು. ಆಗ ನಾನು ಎಪಿಎಂಸಿ ಸದಸ್ಯನಾಗಿದ್ದೆ, ನನ್ನನ್ನು ಕರೆಸಿಕೊಂಡ ಕೆಂಪಹೊನ್ನಯ್ಯನವರು ಎಪಿಎಂಸಿ ಅಧ್ಯಕ್ಷನಾಗು ಎಂದರು, ಅದರಂತೆ ಎರಡು ಅವಧಿಗೆ ಎಪಿಎಂಸಿ ಅದ್ಯಕ್ಷನಾಗುವ ಅವಕಾಶ ಸಿಕ್ಕಿತು ಎಂದು ಹೇಳಿದರು.ಇದಾದ ಮೇಲೆ ತಾಲೂಕು ಬೋರ್ಡ್‌ ಸದಸ್ಯನಾಗಿದ್ದೆ, ಇಪ್ಪತ್ತೊಂದೂವರೆ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಭಾರತದ ಇತಿಹಾಸದಲ್ಲೇ ಯಾರೊಬ್ಬರೂ ಇಷ್ಟು ಅವಧಿವರೆಗೆ ಅಧ್ಯಕ್ಷರಾಗಿರಲಿಲ್ಲ. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ಸಂಪರ್ಕ ದೊರೆಯಿತು. ಒಮ್ಮೆ ರಾಜೀವ್ ಗಾಂಧಿಯವರು ಕರೆದು, ತುಮಕೂರು ಕ್ಷೇತ್ರಕ್ಕೆ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ತಾಯಿ ಇಂದಿರಾ ಗಾಂಧಿಯವರು ನಿಮ್ಮ ಹೆಸರು ಬರೆದಿದ್ದಾರೆ, ನೀವು ಸ್ಪರ್ಧೆ ಮಾಡಿ ಎಂದು ಅವಕಾಶ ಮಾಡಿಕೊಟ್ಟರು. ಆಗ ಕೆ.ಲಕ್ಕಪ್ಪನವರು ಹಾಲಿ ಸಂಸದರಾಗಿದ್ದರು. 1984ರ ಡಿಸೆಂಬರ್ 26ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದೆ ಎಂದು ಜಿ.ಎಸ್.ಬಸವರಾಜು ನೆನಪಿಸಿಕೊಂಡರು.ಜಿಲ್ಲೆಯ ಅಭಿವೃದ್ಧಿಗೆ ತಾವು ಶ್ರಮವಹಿಸಿ ಹಲವಾರು ಯೋಜನೆಗಳನ್ನು ತರಲು ನೆರವಾಗಿದ್ದೇನೆ. ತಮಿಳುನಾಡಿನ ಹೊಸೂರಿಗೆ ಹೋಗಬೇಕಿದ್ದ ಕೈಗಾರಿಕಾ ಕಾರಿಡಾರ್ ಅನ್ನು ವಸಂತನರಸಾಪುರಕ್ಕೆ ತರುವ ಪ್ರಯತ್ನ ಯಶಸ್ವಿಯಾಯಿತು. ಎಚ್‌ಎಎಲ್, ನೀರಾವರಿ ಯೋಜನೆಗಳು, ಹೆದ್ದಾರಿಗಳ ಅಭಿವೃದ್ಧಿ ಸಾಧ್ಯವಾಯಿತು. ತುಮಕೂರು ಜಿಲ್ಲೆಗೆ ನೀರಾವರಿ ಯೋಜನೆಗಳ ಅಗತ್ಯವಿದೆ. ಸಮುದ್ರದ ಪಾಲಾಗುತ್ತಿರುವ ಶರಾವತಿ ನದಿ ನೀರನ್ನು ಈ ಭಾಗಕ್ಕೆ ತಂದರೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಇಂತಹ ಪ್ರಯತ್ನ ಆಗಬೇಕು ಎಂದರು.ಸಾಮಾನ್ಯ ಆಟೋ ಚಾಲಕನೂ ಸಮಾಜ ಸೇವಕನಾಗಿ ಹೇಗೆ ಗುರುತಿಸಿಕೊಳ್ಳಬಹುದು ಎಂಬುದಕ್ಕೆ ಆಟೋ ಯಡಿಯೂರಪ್ಪ ಎಂದೇ ಹೆಸರಾದ ಯಡಿಯೂರಪ್ಪನವರ ಅಭಿಮಾನಿ ಕೆ.ಎಂ.ಶಿವಕುಮಾರ್ ಸಾಕ್ಷಿಯಾಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕೆಲಸ ಮಾಡುತ್ತಿದ್ದಾರೆ ಇವರು ನಿಜವಾದ ಸೇವಾಕರ್ತ ಎಂದರುಬಿಜೆಪಿ ಮುಖಂಡ ಎಸ್.ಶಿವಪ್ರಸಾದ್ ಮಾತನಾಡಿ, ಸುದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿದ್ದು ಜನರ ಸೇವೆ ಮಾಡಿ ಈಗ ವಿಶ್ರಾಂತಿಯಲ್ಲಿರುವ ಜಿ.ಎಸ್.ಬಸವರಾಜು ಅವರು ಜಿಲ್ಲೆಗೆ ನೀಡಿದ ಕೊಡುಗೆ ಅಪಾರ. ಕುಡಿಯುವ ನೀರಿನ ಯೋಜನೆ, ರಾಷ್ಟ್ರೀಯ ಹೆದ್ದಾರಿ, ಕೈಗಾರಿಕೆಗಳ ಸ್ಥಾಪನೆಗೆ ನೆರವಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಮುನ್ನುಡಿಯಾಗಿದ್ದಾರೆ ಎಂದರು.ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್ವರ್ ಅವರು, ಮಾಜಿ ಸಂಸದ ಜಿ.ಎಸ್.ಬಸವರಾಜು ಅವರ ಸಾರ್ವಜನಿಕ ಸೇವಾಕಾರ್ಯವನ್ನು ಪ್ರಶಂಸಿಸಿದರು. ನಿವೃತ್ತ ಪ್ರಾಚಾರ್ಯ ಮರಿಬಸಪ್ಪ ಮಾತನಾಡಿ, ಜಿ.ಎಸ್.ಬಸವರಾಜು ಅವರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ, ನಾವು ಅವರಿಗೆ ಕೊಟ್ಟಿರುವುದು ಕಮ್ಮಿ, ಪ್ರಮುಖ ರಸ್ತೆ, ಉದ್ಯಾನವನ, ವೃತ್ತಗಳಿಗೆ ಇವರ ಹೆಸರು ಇಟ್ಟು ಇವರ ಸೇವೆಯನ್ನು ಚಿರಸ್ಥಾಯಿಗೊಳಿಸಬೇಕಾಗಿದೆ ಎಂದರು.ಆಟೋ ಚಾಲಕರ ಸಂಘದ ಅಧ್ಯಕ್ಷ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ), ಬಸವೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್, ಮುಖಂಡರಾದ ಸತ್ಯಮಂಗಲ ಜಗದೀಶ್, ನಿಸರ್ಗ ರಮೇಶ್, ವಿಶ್ವನಾಥ್ ಅಪ್ಪಾಜಪ್ಪ, ಪ್ರಕಾಶ್ ಭಾರದ್ವಾಜ್‌ , ಪ್ರೇಮಕುಮಾರ್, ಬಂಬೂ ಮೋಹನ್ ಮೊದಲಾದವರು ಭಾಗವಹಿಸಿದ್ದರು.ಈ ವೇಳೆ ಆಟೋ ಚಾಲಕರು ಹಾಗೂ ಅಸಂಘಟಿತ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ವಿತರಿಸಲಾಯಿತು.