ಸಾರಾಂಶ
ಕುಕನೂರ: ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಡಬೇಕು ಎಂದು ಮೊದಲು ಸೂಚಿಸಿದ್ದೇ ಮಾಜಿ ಸಚಿವ ಕೆ.ಎಚ್. ಪಾಟೀಲ್ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಮಾಜಿ ಸಚಿವ ಕೆ.ಎಚ್. ಪಾಟೀಲ್ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು.ಕೆ.ಎಚ್. ಪಾಟೀಲ್ ರಾಜ್ಯ ರಾಜಕಾರಣದ ಜನಸಮುದಾಯದ ನೆನಪಿನಲ್ಲಿ ಉಳಿಯುವ ವ್ಯಕ್ತಿ. ಜೀವನದ ಸಂಘರ್ಷ ಹಾಗೂ ಸಂಯಮ ಹಾದಿಯಲ್ಲಿ ಕೆ.ಎಚ್. ಪಾಟೀಲ್ ಹೋರಾಟದ ಹಾದಿಯವರಾಗಿದ್ದರು. ಸಹಕಾರಿ ಕ್ಷೇತ್ರ, ಸಾರ್ವಜನಿಕ ಬದುಕು, ರಾಜಕೀಯ ಹೋರಾಟ ಮಾಡಿದರು. ರಾಜಕೀಯ ಸಂಘರ್ಷದಿಂದ ಮುಖ್ಯಮಂತ್ರಿ ಆಗಲಿಲ್ಲ ಎಂದರು.
ರಾಜ್ಯಕ್ಕೆ ಕರ್ನಾಟಕ ಎಂದು ಅವರಿಂದ ಹೆಸರು ಬಂತು. ಅವರು ಕಂದಾಯ ಸಚಿವರಿದ್ದಾಗಲೇ ಪೋಡಿ, ಸರ್ವೆ ಕಾರ್ಯಕ್ಕೆ ಆದ್ಯತೆ ನೀಡಿದ್ದರು. ಇಲ್ಲಿನ ಪುನರ್ವಸತಿ ಗ್ರಾಮಗಳಿಗೆ ಇದುವರೆಗೂ ₹240 ಕೋಟಿ ಖರ್ಚಾಗಿ ಅಭಿವೃದ್ಧಿ ಆಗಿದೆ ಎಂದರು.ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ರಾಜ್ಯದ ಜನಪರ ಪ್ರಗತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಒಪ್ಪುತ್ತಾರೆ. ಬಡತನ ಸಂಪೂರ್ಣ ನೀಗಿಸಿದ್ದೇವೆ. ಭಿಕ್ಷಾಟನೆ ಶೂನ್ಯಕ್ಕೆ ಇಳಿದಿದೆ. ವರ್ಷಕ್ಕೆ ರಾಜ್ಯಕ್ಕೆ ₹58 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಹಣ ಸೀಮಿತವಾಗಿದೆ. ಶೇ. 27 ಇದ್ದ ಬಡತನ ದೇಶದಲ್ಲಿ ಶೇ. 6 ಆಗಿದೆ ಎಂದರು.
ತಂದೆಯವರಾದ ಕೆ.ಎಚ್. ಪಾಟೀಲ್ ಗದಗದಲ್ಲಿ ಹತ್ತಿ ಬೆಳೆಯನ್ನು ಸ್ವತಃ ನಿಂತು ಲೀಲಾವು ಮಾಡುತ್ತಿದ್ದರು. ಅವರು ರೈತರಿಗಾಗಿ ಬದುಕಿದರು. ರೈತ ತನ್ನ ಬೆಳೆಗೆ ತಾನೇ ಬೆಲೆ ಕಟ್ಟುವ ಮಾರಾಟ ವ್ಯವಸ್ಥೆ ಬರಬೇಕು. ಇದು ಕೆ.ಎಚ್. ಪಾಟೀಲ್ ಉದ್ದೇಶ ಆಗಿತ್ತು. ರೈತರ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಆಲೋಚನೆ ಆಗಬೇಕು ಎಂದರು.ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಕೆ.ಎಚ್. ಪಾಟೀಲ್ ಒಳ್ಳೆಯ ಆಡಳಿತಗಾರರು, ಪ್ರಾಮಾಣಿಕ, ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿದರು. ಕಾಂಗ್ರೆಸ್‌ಗೆ ಶಕ್ತಿ ತರುವ ಕೆಲಸ ಕೆ.ಎಚ್ .ಪಾಟೀಲ್ ಅವರಿಂದ ಆಗಿದೆ ಎಂದರು.
ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ಕೆ.ಎಚ್. ಪಾಟೀಲ್ ಮೂರ್ತಿ ಅನಾವರಣದಿಂದ ಅವರ ಆದರ್ಶಗಳು ಯುವ ಪೀಳಿಗೆಗೆ ಲಭಿಸಲಿವೆ ಎಂದರು.ವಿಪ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹುಸೇನಸಾಬ್ ದೋಟಿಹಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಡಿಸಿ ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಮುಂಡರಗಿ ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ ಎಂಜಿನಿಯರ್ ಐ. ಪ್ರಕಾಶ, ಎಸಿ ಮಹೇಶ ಮಾಲಗಿತ್ತಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ತಹಸೀಲ್ದಾರ್ ಎಚ್. ಪ್ರಾಣೇಶ, ಹನುಮಂತಗೌಡ ಚಂಡೂರು, ನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ ಕಡೆಮನಿ, ಎಸ್. ದಾನ ರೆಡ್ಡಿ, ಕೆರಿಬಸಪ್ಪ ನಿಡಗುಂದಿ, ಅಶೋಕ ತೋಟದ, ಗವಿಸಿದ್ದಪ್ಪ ಜಂತ್ಲಿ, ಚಂದ್ರಶೇಖರಯ್ಯ ಹಿರೇಮಠ, ಹಂಪಯ್ಯಸ್ಶಾಮಿ ಇತರರಿದ್ದರು.
ರಾಯರೆಡ್ಡಿ ನೋಡಿದರೆ ಹೊಟ್ಟೆ ಉರಿ:ಎಂಜಿನಿಯರಿಂಗ್ ಕಾಲೇಜು ಮಾಡಲು ರಾಯರೆಡ್ಡಿ ಪ್ರಸ್ತಾವನೆ ಮಾಡಿದಾಗ ಹಳ್ಳಿಯಲ್ಲಿ ಕಟ್ಟಲು ಈತನಿಗೆ ಬುದ್ಧಿ ಇಲ್ಲವಾ ಎಂದಿದ್ದೆ. ಆದರೆ ಸದ್ಯ ತಳಕಲ್ ಎಂಜಿನಿಯರಿಂಗ್ ಕಾಲೇಜು ಮಾದರಿ ಆಗಿದೆ. ರಾಯರಡ್ಡಿ ಅಭಿವೃದ್ಧಿ ಕಾರ್ಯ ನೋಡಿ ನಮಗೆ ಹೊಟ್ಟೆ ಉರಿ ಬೀಳುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ರಾಜ್ಯದ ಆರ್ಥಿಕ ಸ್ಥಿತಿ ಭದ್ರ: ₹3 ಲಕ್ಷ 40 ಸಾವಿರ ಕೋಟಿ ಇದ್ದ ರಾಜ್ಯ ಬಜೆಟ್ ₹4 ಲಕ್ಷ 25 ಸಾವಿರ ಕೋಟಿ ಆಗಿದೆ. ಇದು ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು. ದೆಹಲಿಯಿಂದ ಕರ್ನಾಟಕ ದಿವಾಳಿ ಎಂಬ ಹೇಳಿಕೆ ಬಂತು. ಆದರೆ ರಾಜ್ಯ ಗಟ್ಟಿಯಾಗಿದೆ. ಟೀಕೆ ಮಾಡಿದವರು ನಮ್ಮ ಗ್ಯಾರಂಟಿ ಕಾಪಿ ಮಾಡಿದರು. ನಮಗೆ ಬರಬೇಕಾದ ಪಾಲನ್ನು ನೀಡುತ್ತಿಲ್ಲ. ರಾಜ್ಯ ಆರ್ಥಿಕ ಸದೃಢ ಆಗಿದೆ, ದಿವಾಳಿತನ ಇಲ್ಲ. ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನ, ಜಿಡಿಪಿಯಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆರ್ಥಿಕ ಭದ್ರತೆ ಇದೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.