ಸಾರಾಂಶ
ಶಾಸಕ ಡಾ.ಎಂ.ಚಂದ್ರಪ್ಪ ಹೇಳಿಕೆ । ನೂತನ ಚೆಕ್ ಡ್ಯಾಂ, ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಚುನಾವಣೆಗೆ ಇನ್ನೂ ಮೂರು ವರ್ಷಗಳ ಸಮಯವಿದೆ, ನಾನು ಮತ ಕೇಳಲು ಬಂದಿಲ್ಲ. ನೀವುಗಳು ನೀಡಿದ ಮತಕ್ಕೆ ಋಣ ತೀರಿಸಲು ಬಂದಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಹೊಳಲ್ಕೆರೆ ತಾಲೂಕಿನ ಕಲ್ಲವ್ವ ನಾಗತಿಹಳ್ಳಿ ಗ್ರಾಮದಲ್ಲಿ 3.50 ಕೋಟಿ ರು. ವೆಚ್ಚದಲ್ಲಿ ಎರಡು ನೂತನ ಚೆಕ್‍ಡ್ಯಾಂ ಹಾಗೂ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚೆಕ್ ಡ್ಯಾಂನಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ ಬೋರ್‌ವೆಲ್‍ಗಳಲ್ಲಿ ನೀರು ಚಿಮ್ಮುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಜಗಳೂರು ತಾಲೂಕಿನಿಂದ ತರೀಕೆರೆ ವರೆಗೂ ನನ್ನ ಕ್ಷೇತ್ರ ವ್ಯಾಪಿಸಿದೆ. 493 ಹಳ್ಳಿಗಳಲ್ಲಿ ಜನರಿಗೆ ಅನುಕೂಲವಾಗುತ್ತದೆ ಎಂಬ ಆಲೋಚನೆಯಿಟ್ಟುಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.ತಾಲೂಕಿನಾದ್ಯಂತ ಎಲ್ಲೆಡೆ ಗುಣಮಟ್ಟದ ಸಿಸಿ ರಸ್ತೆ, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು, ಚೆಕ್‍ಡ್ಯಾಂ ನಿರ್ಮಾಣ, ಬ್ರಿಟೀಷರ ಕಾಲದ ಶಾಲೆಗಳನ್ನು ಕೆಡವಿ ಅತ್ಯುತ್ತಮ ಕಟ್ಟಡಗಳನ್ನು ಕಟ್ಟಿಸಿದ್ದೇನೆ. ಪ್ರೌಢಶಾಲೆ, ಪಿಯು ಡಿಗ್ರಿ ಕಾಲೇಜು, ಐಟಿಐ, ಪಾಲಿಟೆಕ್ನಿಕ್ ಕಾಲೇಜು ವಸತಿ ಶಾಲೆಗಳ ನಿರ್ಮಾಣವಾಗಿದೆ. ಬಡವರಿಗೆ ಸುಲಭವಾಗಿ ಚಿಕಿತ್ಸೆ ಸಿಗಲಿ ಎನ್ನುವ ಉದ್ದೇಶದಿಂದ ಹೈಟೆಕ್ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. ತಾಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತರುವುದಕ್ಕಾಗಿ 367 ಕೋಟಿ ರು. ಖರ್ಚು ಮಾಡಿದ್ದೇನೆ. ರೈತರ ತೋಟಗಳು ಒಣಗಬಾರದೆಂದು 17 ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಿದ್ದೇನೆ. ಇಷ್ಟು ಸಾಲದೆಂಬಂತೆ ಚಿಕ್ಕಜಾಜೂರಿನ ಕೋಟೆಹಾಳ್ ಬಳಿ 13.5 ಎಕರೆ ಜಾಗದಲ್ಲಿ 500 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗಲಿದೆ. ಜೋಗ್‍ಫಾಲ್ಸ್ ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದ್ದು, ಇದರಿಂದ ರೈತರಿಗೆ ಇನ್ನು ನೂರು ವರ್ಷಗಳ ಕಾಲ ಕರೆಂಟ್‍ನ ಅಭಾವ ಇರುವುದಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗೀತ ಮಹಾದೇವಪ್ಪ, ಸದಸ್ಯರಾದ ದೇವರಾಜ್, ಪರಮೇಶ್ವರ್ ನಾಯ್ಕ, ಇಸಿಒ ಬಸವರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಕೆ.ರಾಜು ರುದ್ರೆಗೌಡ್ರು, ಸಿದ್ದಪ್ಪ, ಕುಮಾರಸ್ವಾಮಿ, ಮಹೇಶ್, ಶಿವಮೂರ್ತಿ, ಸತೀಶ್, ರಾಜು, ಸಣ್ಣ ನೀರಾವರಿ ಇಲಾಖೆ ಎಂಜಿನರ್‌ಗಳಾದ ಆನಂದಪ್ಪ, ನವೀನ್ ಹಾಗೂ ಗ್ರಾಮದ ಮುಖಂಡರು ಇದ್ದರು.