ಹಲವು ವರ್ಷಗಳಿಂದ ಪಶು ಚಿಕಿತ್ಸಾಲಯದ ಕಟ್ಟಡ ಇಲ್ಲದ ಕಾರಣ ರೋಗದಿಂದ ಬಳಲುತ್ತಿದ್ದ ಮೂಕ ಪ್ರಾಣಿಗಳನ್ನು ದೂರದ ಗ್ರಾಮಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಬೇಕಾಗಿತ್ತು. ಈ ಸಂಬಂಧ ಗ್ರಾಮದ ಮುಖಂಡರು ಕಳೆದ 30 ವರ್ಷಗಳಿಂದ ಈ ಬೇಡಿಕೆ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ನೇರಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ ರಮೇಶ್‌ ಬಂಡಿಸಿದ್ದೇಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಗ್ರಾಮದಲ್ಲಿ ದಿನನಿತ್ಯ ಸುಮಾರು ಒಂದುವರೆಯಿಂದ ಎರಡು ಸಾವಿರ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಈ ಗ್ರಾಮಕ್ಕೆ ಪಶುವೈದ್ಯಕೀಯ ಚಿಕಿತ್ಸಾಲಯ ತರಬೇಕೆಂಬ ನನ್ನ ಆಸೆ ಮತ್ತು ಗ್ರಾಮಸ್ಥರು ಕೂಗನ್ನು ಈಡೇರಿಸಿದ್ದೇನೆ ಎಂದರು.

ಹಲವು ವರ್ಷಗಳಿಂದ ಪಶು ಚಿಕಿತ್ಸಾಲಯದ ಕಟ್ಟಡ ಇಲ್ಲದ ಕಾರಣ ರೋಗದಿಂದ ಬಳಲುತ್ತಿದ್ದ ಮೂಕ ಪ್ರಾಣಿಗಳನ್ನು ದೂರದ ಗ್ರಾಮಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಬೇಕಾಗಿತ್ತು. ಈ ಸಂಬಂಧ ಗ್ರಾಮದ ಮುಖಂಡರು ಕಳೆದ 30 ವರ್ಷಗಳಿಂದ ಈ ಬೇಡಿಕೆ ಸಲ್ಲಿಸಿದ್ದರು ಎಂದರು.

ಇದೀಗ ಪಶು ಚಿಕಿತ್ಸಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಸರ್ಕಾರ ಹಾಲಿನ ದರ 8 ರು. ಹೆಚ್ಚಳ ಮಾಡಿದೆ, ಇದರಿಂದ ರೈತರಿಗೆ 1 ಲೀಟರ್ ಹಾಲಿಗೆ ಕನಿಷ್ಠ 48 ರು. ಸಿಗಲಿದೆ. ಇನ್ನು ಮುಂದೆ ನಿಮ್ಮ ಗ್ರಾಮದಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ಕೊಡಲು ವೈದ್ಯಾಧಿಕಾರಿಗಳು ಯಾವಾಗಲೂ ಸಿದ್ಧರಿರುತ್ತಾರೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಮಳೆಯಾಶ್ರಿತ ಗ್ರಾಮವಾದ್ದರಿಂದ ಈವರೆಗೆ ಬೋರ್‌ವೆಲ್ ಮೂಲಕ ನೀರನ್ನು ಶುದ್ಧೀಕರಿಸಿ ನೀಡಲಾಗುತ್ತಿತ್ತು. ಕಾವೇರಿ ಶುದ್ಧ ಕುಡಿಯುವ ನೀರು ನೀಡಲು ಕಾವೇರಿ ಬೋರೇದೇವರ ದೇವಸ್ಥಾನದ ಬಳಿ ಜಮೀನನ್ನು ಖರೀದಿಸಲಾಗಿದೆ. ಅಲ್ಲಿಂದ ಮೋಟಾರುಗಳಿಂದ ನೀರನ್ನು ಶುದ್ಧೀಕರಿಸಿ ಪೈಪ್‌ಲೈನ್ ಮುಖಾಂತರ ಗ್ರಾಮಕ್ಕೆ ಶುದ್ಧ ನೀರು ಕೊಡಲು ಈಗಾಗಲೇ ಕೆಲಸ ಆರಂಭವಾಗಿದೆ. ಇನ್ನು ಐದು ತಿಂಗಳಲ್ಲಿ ಗ್ರಾಮಕ್ಕೆ ಕಾವೇರಿ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ರಾಮಚಂದ್ರ, ಸಹಾಯಕ ನಿರ್ದೇಶಕ ಡಾ.ಪ್ರವೀಣ್, ಗ್ರಾಮದ ಮುಖಂಡರಾದ ಪಟೇಲ್ ಸುರೇಶ್, ರಮೇಶ್, ಮಹೇಶ್, ಹರಿಪ್ರಸಾದ್, ನಾಗೇಶ್, ಚಂದ್ರು, ಎಂ.ಪಿ.ಸುರೇಶ್, ನಿಂಗೇಗೌಡ, ಪಶುವೈದ್ಯಾಧಿಕಾರಿಗಳಾದ ಡಾ.ರಾಘವೇಂದ್ರ, ಡಾ.ದರ್ಶನ್, ಡಾ.ಪ್ರದೀಪ್ ಸೇರಿದಂತೆ ಇತರರು ಇದ್ದರು.