ಕನ್ನಡಪ್ರಭ ವಾರ್ತೆ, ತುಮಕೂರು
ಹೆತ್ತೇನಹಳ್ಳಿ ಮಾರಮ್ಮ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರ ಮತ್ತು ಸದಸ್ಯರ ಸಲಹೆಯಂತೆ, ದೇವಾಲಯದ ಗರ್ಭಗುಡಿ ಹಾಗೂ ಅದರ ಗೋಪುರ ಕಟ್ಟಿಸಿಕೊಡುವ ಜವಾಬ್ದಾರಿ ನನ್ನದಾಗಿದ್ದು, ಇದುವರೆಗೂ ಸುಮಾರು 31 ಲಕ್ಷ ರು. ಗಳನ್ನು ದೇವಾಲಯದ ಅಭಿವೃದ್ದಿಗೆ ನೀಡಿದ್ದೇನೆ ಎಂದು ಉದ್ಯಮಿ ಊರುಕೆರೆ ಜಗದೀಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೇವಾಲಯದ ಗುರ್ಭಗುಡಿ ಮತ್ತು ಗೋಪುರ ಕಟ್ಟಿಸಿಕೊಡುವಂತೆ ಕೋರಿ ಕೊಂಡ ಹಿನ್ನೆಲೆಯಲ್ಲಿ ಒಪ್ಪಿಕೊಂಡು,ಕಾಮಗಾರಿ ಕೈಗೆತ್ತಿಕೊಂಡಿದ್ದೇನೆ.ಶೇ90ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಹೆತ್ತೇನಹಳ್ಳಿ ಮಾರಮ್ಮನ ವರಿಗೆ 5.50 ಗ್ರಾಂ ನ ಹೊಸ ತಾಳಿ ಮಾಡಿಸಿ, ಗೌರಿಶಂಕರ್ ಅವರ ಮೂಲಕ ದೇವಿಯ ಆರ್ಚಕರಿಗೆ ನೀಡಿದ್ದೇ. ಈ ವೇಳೆ ನನ್ನ ಅಭಿವೃದ್ದಿ ಕಾರ್ಯಗಳನ್ನು ಮಾಜಿ ಶಾಸಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪ್ರಶಂಶೆ ವ್ಯಕ್ತಪಡಿಸಿದ್ದರು. ಈ ಘಟನೆ ನಂತರ ನನ್ನನ್ನು ಕೆಲವರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದು, ತಾಳಿಯೇ ಕಳೆದು ಹೋಗಿಲ್ಲ, ಜಗದೀಶ್ ನೀಡಿರುವುದು ಕೇವಲ 7.35 ಲಕ್ಷ ಮಾತ್ರ ಎಂದು ಹೇಳುತ್ತಿದ್ದಾರೆ. ನಾನು 24 ಲಕ್ಷ ರೂಗಳನ್ನು ನಗದು ರೂಪದಲ್ಲಿ ನೀಡಿರುವುದಕ್ಕೆ ನನ್ನ ಬಳಿ ದಾಖಲೆ ಇದೆ. ಅಲ್ಲದೆ ತಹಶೀಲ್ದಾರರಿಗೆ 2 ಲಕ್ಷ ರು ನೀಡಿದ್ದೇನೆ. ಮೂರು ಲಕ್ಷ ರುಗಳನ್ನು ಗೋಪುರದ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ನೀಡಿದ್ದೇನೆ. ಇದುವರೆಗೂ ಒಟ್ಟು 31 ಲಕ್ಷ ರುಗಳನ್ನು ನೀಡಿದ್ದೇನೆ ಎಂದು ದಾಖಲೆಗಳನ್ನು ಉದ್ಯಮಿ ಜಗದೀಶ್ ಪ್ರದರ್ಶಿಸಿದರು.ಹೆತ್ತೇನಹಳ್ಳಿ ಮಾರಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ ನಡೆದ ಮಾಹಿತಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಒಟ್ಟಾರೆ 46 ಗ್ರಾಂ ಚಿನ್ನದ ವಡವೆ ಕಳ್ಳತನವಾಗಿದೆ. ತದ ನಂತರ 14 ಗ್ರಾಂ ಸಿಕ್ಕಿದೆ ಎಂದು ಹೇಳಿದ್ದಾರೆ. ಅದು ಎಲ್ಲಿತ್ತು, ಹೇಗೆ ಅಲ್ಲಿಗೆ ಬಂತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರು.
ದೇವಾಲಯದ ಜೀರ್ಣೋದ್ಧಾರಕ್ಕೆ ಭಕ್ತಾದಿಗಳಿಂದ ಲಕ್ಷಾಂತರ ರೂ ದೇಣಿಗೆ ಹರಿದು ಬರುತ್ತಿದೆ.ಅದಕ್ಕೆ ಲೆಕ್ಕಪತ್ರ ಒಂದು ಸಹ ಇಲ್ಲ. ಕೆಲವರು ಸಮಿತಿ ಮಾಡಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಮುಜರಾಯಿ ಇಲಾಖೆಯ ದೇವಾಲಯಕ್ಕೆ ಸಮಿತಿ ಮಾಡಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಭಕ್ತರು ಕೊಟ್ಟ ದೇಣಿಗೆಗೆ ಲೆಕ್ಕಪತ್ರ ಇದೆಯೇ? ಇವುಗಳನ್ನು ಭಕ್ತರ ಮುಂದೆ ಇಡಬೇಕು. ನಾನು ಈ ವಿಚಾರದಲ್ಲಿ ಯಾರನ್ನು ದೂರುವುದಿಲ್ಲ. ಮಾರಮ್ಮ ದೇವಿಗೆ ಎಲ್ಲವನ್ನು ನೋಡಿಕೊಳ್ಳುವ ಶಕ್ತಿ ಇದೆ. ಆಕೆಯೇ ನೋಡಿಕೊಳ್ಳುತ್ತಾಳೆ ಎಂದು ಜಗದೀಶ್ ಮಾರ್ಮಿಕವಾಗಿ ನುಡಿದರು.
ನಾನು ಮತ್ತು ಭಕ್ತರು ಸೇರಿ ದೇವಾಲಯದ ರಾಜಗೋಪರ ನಿರ್ಮಾಣ ಮಾಡಬೇಕು ಎಂಬ ಆಸೆಯಿದೆ.ಆದರೆ ಶಾಸಕರು ಸರಕಾರದ ಅನುದಾನದಲ್ಲಿ ನಿರ್ಮಿಸುವುದಾಗಿ ತಿಳಿಸಿದ್ದಾರೆ.ಒಂದು ವೇಳೆ ಅವರು ನಿರ್ಮಾಣ ಮಾಡಿದರೆ ಸಂತೋಷ, ಅಗತ್ಯವೆನಿಸಿದರೆ ನಾವು ಕೈಜೋಡಿಸಲು ಸಿದ್ದ. ಒಟ್ಟಾರೆ ತಾಯಿಯ ಸೇವೆಗೆ ನಾನು ಮತ್ತು ನನ್ನ ಕುಟುಂಬ ಸದಾ ಸಿದ್ದವಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆತ್ತೇನಹಳ್ಳಿ ಮಂಜುನಾಥ್, ವಕೀಲರಾದ ಸ್ವಾಮಿಗೌಡ, ಮಂಜುನಾಥ್,ಗ್ರಾ.ಪಂ.ಸದಸ್ಯ ರಮೇಶ್, ಹರೀಶ್, ನರಸಿಂಹಮೂರ್ತಿ ಚಂದ್ರು, ಅಕ್ಷಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.