ನಾನು ಯಾವತ್ತಿಗೂ ಜಾತೀಯತೆ ಮಾಡಿಲ್ಲ : ರಮೇಶ್ ಜಿಗಜಿಣಗಿ

| Published : Apr 03 2024, 01:42 AM IST / Updated: Apr 03 2024, 08:21 AM IST

ಸಾರಾಂಶ

ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಜಾತೀಯತೆ, ಪಾರ್ಟಿಗಳ ಭೇದ-ಭಾವ ಮಾಡಿಲ್ಲ. ನನ್ನ ಮನೆ ಬಾಗಿಲಿಗೆ ಬಂದ ಬೇರೆ ಪಾರ್ಟಿಗಳ ಜನರನ್ನು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ನಾನು ಪರಿಗಣಿಸಿ ನನ್ನ ಕೈಲಾದ ಕೆಲಸ, ಸಹಾಯ ಮಾಡಿ ಕೊಟ್ಟಿದ್ದೇನೆ  ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

 ವಿಜಯಪುರ: ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಜಾತೀಯತೆ, ಪಾರ್ಟಿಗಳ ಭೇದ-ಭಾವ ಮಾಡಿಲ್ಲ. ನನ್ನ ಮನೆ ಬಾಗಿಲಿಗೆ ಬಂದ ಬೇರೆ ಪಾರ್ಟಿಗಳ ಜನರನ್ನು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ನಾನು ಪರಿಗಣಿಸಿ ನನ್ನ ಕೈಲಾದ ಕೆಲಸ, ಸಹಾಯ ಮಾಡಿ ಕೊಟ್ಟಿದ್ದೇನೆ. ಇದೀಗ ನನಗೆ ಮಾತೃ ಪಕ್ಷದ ಬೆಂಬಲ ಸಿಕ್ಕಿದ್ದು, ಈ ಸಲವೂ ಗೆಲುವು ನನ್ನದೇ ಆಗುತ್ತದೆ ಎಂದು ಸಂಸದ, ಹಾಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ನಗರದ ಖಾಸಗಿ ಟೋಟೆಲ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಯಾವಾಗಲೂ ನಾನು ಅಭಿವೃದ್ಧಿ ಕೆಲಸಗಳನ್ನೇ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ ₹1 ಲಕ್ಷ ಕೋಟಿಗೂ ಅಧಿಕ ಅನುದಾನ ತೆಗೆದುಕೊಂಡು ಬಂದು ವಿಜಯಪುರದ ಹೈವೆ, ರೈಲು ನಿಲ್ದಾಣ, ಗೂಡ್‌ ಶೆಡ್‌ ಸೇರಿದಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಬಿಜೆಪಿ ಹೈಕಮಾಂಡ್‌ ನನ್ನ ಮೇಲೆ ನಂಬಿಕೆ ಇಟ್ಟು ಮತ್ತೆ ಟಿಕೆಟ್ ನೀಡಿದೆ. ಈ ಬಾರಿ ನಾನು ಜೆಡಿಎಸ್ ಪಕ್ಷದ ಬೆಂಬಲ ಪಡೆದುಕೊಂಡಿದ್ದು, ನನಗೆ ಹೊಸ ಮನೆಯಿಂದ ಹಳೆ ಮನೆಗೆ ಬಂದಂತಾಗಿದ್ದು, ಬಹಳಷ್ಟು ಖುಷಿಯಾಗಿದೆ ಎಂದರು.

ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದವರು ಬಂದರೂ ಅಭಿವೃದ್ಧಿಗೆ ನಾನು ಬೆಂಬಲ ನೀಡಿ ಅವರ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಕಾರ್ಯಕರ್ತರನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೇನೆ. ಈ ಚುನಾವಣೆಯಲ್ಲಿ ಗೆಲುವು ನನ್ನದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನದಂತೆ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇವೆ. ಎಲ್ಲಿ ಜೆಡಿಎಸ್ ಅಭ್ಯರ್ಥಿ ಇದ್ದಾರೋ ಅಲ್ಲಿ ಬಿಜೆಪಿ ಕಾರ್ಯಕರ್ತರು, ಹಾಗೂ ಎಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೋ ಅಲ್ಲಿ ಜೆಡಿಎಸ್ ಕಾರ್ಯಕರ್ತರು ಒಬ್ಬರಿಗೊಬ್ಬರು ಬೆಂಬಲಿಸಲಿದ್ದಾರೆ. ಈ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 3 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದ್ದು ಎನ್‌ಡಿಎ ಎಲ್ಲ 28 ಕ್ಷೇತ್ರದಲ್ಲೂ ಗೆಲುವು ಸಾಧಿಸಲಿದೆ ಎಂದರು.

ನಾವು ಹಿಂದಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಕಾಂಗ್ರೆಸ್ ಪಕ್ಷವನ್ನು ಆಡಳಿತದಿಂದ ದೂರ ಇಡಲು ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಎಲ್ಲ ಕಾರ್ಯಕರ್ತರು ಒಕ್ಕಟ್ಟಿನಿಂದ ಕೆಲಸ ಮಾಡಲಿದ್ದಾರೆ. ಆಗಾಗ ಸಮನ್ವಯ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಜೆಡಿಎಸ್‌ನಲ್ಲಿ ಇದ್ದಂತಹ ಸಾಕಷ್ಟು ಜನ ಇಂದು ಬಿಜೆಪಿಯಲ್ಲಿದ್ದಾರೆ. ಜಿಗಜಿಣಗಿ ಇಂದು ತವರು ಮನೆಗೆ ಸೇರಿದ್ದಾರೆ. ಎಲ್ಲ ಕಾರ್ಯಕರ್ತರು ಒಟ್ಟಾಗಿ ಅವರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.

ದೇವರ ಹಿಪ್ಪರಗಿ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ, ಬಸವರಾಜ ಹೊನವಾಡ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ರಾಜಶೇಖರ ಶೀಲವಂತ, ಅಪ್ಪುಗೌಡ ಪಾಟೀಲ (ಮನಗೂಳಿ), ಬಿ.ಡಿ.ಪಾಟೀಲ, ಕಾಸುಗೌಡ ಬಿರಾದಾರ, ಬಿ.ಜಿ.ಪಾಟೀಲ, ಚಂದ್ರಶೇಖರ ಕವಟಗಿ, ಸಂಜು ಐಹೊಳೆ, ಎಸ್.ವಿ.ಪಾಟೀಲ, ಅಪ್ಸರಾಬೇಗಂ ಚಪ್ಪರಬಂದ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜೆಡಿಎಸ್‌ ಕಚೇರಿಗೆ ಭೇಟಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಗರದಲ್ಲಿರುವ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ ನೀಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ, ಜಿಲ್ಲಾ ಜೆಡಿಎಸ್ ಘಟಕದ ಪದಾಧಿಕಾರಿಗಳು, ಮುಖಂಡರು ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಶಾಲು ಹಾಕಿ ಸನ್ಮಾನಿಸಿ ಸ್ವಾಗತ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ ಹಾಗೂ ಇತರರು ಸಾಥ್ ನೀಡಿದರು.