ಜನರ ಆಶೀರ್ವಾದದಿಂದ ಕಾಶ್ಮೀರದಿಂದ ಸುರಕ್ಷಿತವಾಗಿ ವಾಪಸ್ ಬಂದಿದ್ದೇನೆ: ಶಾಸಕ ಶ್ರೀನಿವಾಸ ಮಾನೆ

| Published : Apr 28 2025, 12:47 AM IST

ಜನರ ಆಶೀರ್ವಾದದಿಂದ ಕಾಶ್ಮೀರದಿಂದ ಸುರಕ್ಷಿತವಾಗಿ ವಾಪಸ್ ಬಂದಿದ್ದೇನೆ: ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳ ಪೈಶಾಚಿಕ ಕೃತ್ಯಕ್ಕೆ ಕೇವಲ ಎರಡು ದಿನ ಮೊದಲು ದಾಳಿ ನಡೆದ ಅದೇ ಸ್ಥಳದಲ್ಲಿ ಪತ್ನಿಯ ಜತೆಗೆ ಕೆಲವು ಗಂಟೆ ಕಾಲ ಕಳೆದಿದ್ದೇನೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಜನತೆಯ ಪ್ರೀತಿ, ಆಶೀರ್ವಾದ, ಶುಭ ಹಾರೈಕೆಗಳಿಂದ ಜಮ್ಮು ಮತ್ತು ಕಾಶ್ಮೀರದಿಂದ ಸುರಕ್ಷಿತವಾಗಿ ವಾಪಸ್ ಬಂದಿದ್ದೇನೆ ಎಂದು ಶಾಸಕ ಶ್ರೀನಿವಾಸ ಮಾನೆ ಭಾವುಕರಾಗಿ ನುಡಿದರು.ತಾಲೂಕಿನ ಅಕ್ಕಿಆಲೂರಿನಲ್ಲಿ ಭಾನುವಾರ ನಡೆದ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳ ಪೈಶಾಚಿಕ ಕೃತ್ಯಕ್ಕೆ ಕೇವಲ ಎರಡು ದಿನ ಮೊದಲು ದಾಳಿ ನಡೆದ ಅದೇ ಸ್ಥಳದಲ್ಲಿ ಪತ್ನಿಯ ಜತೆಗೆ ಕೆಲವು ಗಂಟೆ ಕಾಲ ಕಳೆದಿದ್ದೇನೆ. ಜಮ್ಮು ಮತ್ತು ಕಾಶ್ಮೀರ ಪ್ರವಾಸ ಮುಗಿಸಿಕೊಂಡು ವಾಪಸ್ ಬಂದ ಬಳಿಕ ನಾವು ತೆರಳಿದ್ದ ಪಹಲ್ಗಾಮ್‌ನ ಅದೇ ಪ್ರದೇಶದಲ್ಲಿ ಉಗ್ರರ ದಾಳಿಗೆ 26 ಜನ ಪ್ರವಾಸಿಗರು ಮೃತಪಟ್ಟ ಸಂಗತಿ ಮನಸ್ಸನ್ನು ಬಹಳ ಕಾಡಿದೆ. ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಬೇಕಿದೆ ಎಂದ ಅವರು, ನಮ್ಮ ಸರ್ಕಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿ ಅಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆಯಿಸಿಕೊಂಡಿತು. ಆದರೆ ಈ ಕೆಲಸವನ್ನು ಮಹರಾಷ್ಟ್ರ ಸರ್ಕಾರ ಮಾಡಲಿಲ್ಲ ಎಂದು ದಾಳಿಯ ಸಂದರ್ಭದಲ್ಲಿದ್ದ ಆ ರಾಜ್ಯದ ಮಹಿಳೆಯೊಬ್ಬರು ಮಾಧ್ಯಮಗಳ ಎದುರು ಬೇಸರ ವ್ಯಕ್ತಪಡಿಸಿದ್ದು ಬಹಳ ಕಾಡಿತು ಎಂದು ಶ್ರೀನಿವಾಸ ಮಾನೆ ಹೇಳಿದರು.ಪಕ್ಷಕ್ಕೆ ಶಕ್ತಿ ತುಂಬಬೇಕಾದ ಕಾರ್ಯಕರ್ತರು ಶಕ್ತಿ ಕುಂದಿಸಬಾರದು. ಇಲ್ಲದಿದ್ದರೆ ವಿರೋಧಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಪಕ್ಷ ಅಧಿಕಾರದಲ್ಲಿ ಇದ್ದಾಗ ವ್ಯತ್ಯಾಸ, ಭಿನ್ನಾಭಿಪ್ರಾಯ ಸಹಜ. ಆದರೆ ತಪ್ಪು ತಿಳಿವಳಿಕೆ ಮೂಡಬಾರದು. ಏನೇ ಇದ್ದರೂ ಮಾತನಾಡಿದರೆ, ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಂಡರೆ ಎಲ್ಲವೂ ಬಗೆಹರಿಯಲಿದೆ. ಕೇಂದ್ರದ ಅಸಹಕಾರದ ಮಧ್ಯೆ ಸರ್ಕಾರ ನಡೆಸುವ ಜವಾಬ್ದಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮೇಲಿದೆ. ಕಾಂಗ್ರೆಸ್‌ಗೆ ಕಾರ್ಯಕರ್ತರು, ಕಾರ್ಯಕ್ರಮಗಳೇ ಮೂಲಾಧಾರ. ಸಾಮರಸ್ಯ, ಸೌಹಾರ್ದತೆ, ಸಹಬಾಳ್ವೆಯಿಂದ ಎಲ್ಲರೂ ಒಂದಾಗಿ ಸಾಗಬೇಕೆನ್ನುವುದು ಕಾಂಗ್ರೆಸ್‌ನ ಆಶಯ ಎಂದರು.ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬೂತ್ ಸಮಿತಿಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗುಡುಗು ಸಿಡಿಲು ಮಿಶ್ರಿತ ಮಳೆ

ರಾಣಿಬೆನ್ನೂರು: ಕಳೆದ ಕೆಲವು ದಿನಗಳಿಂದ ಬಿಸಿಲಿನ ಪ್ರಖರತೆಯಿಂದ ಹೈರಾಣಾಗಿದ್ದ ನಗರದ ಜನತೆಗೆ ಭಾನುವಾರ ಸಂಜೆ 4.45ರ ಸುಮಾರು ಗುಡುಗು, ಸಿಡಿಲಿನಿಂದ ಕೂಡಿದ ಮಳೆ ತಂಪಿನ ವಾತಾವರಣ ಮೂಡಿಸಿತು. ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಯಿಂದಾಗಿ ಕಸದಿಂದ ತುಂಬಿದ್ದ ಚರಂಡಿಗಳು ಸ್ವಚ್ಛಗೊಂಡವು. ಇಂದು ಸಂತೆಯ ದಿನವಾಗಿದ್ದರಿಂದ ಗ್ರಾಮೀಣ ಭಾಗದಿಂದ ವಸ್ತುಗಳ ಮಾರಾಟ ಮತ್ತು ಖರೀದಿ ಸಲುವಾಗಿ ಬಂದಿದ್ದ ಜನತೆ ಪರದಾಡುವಂತಾಯಿತು. ಎರಡ್ಮೂರು ಸಲ ಭಾರಿ ಪ್ರಮಾಣದಲ್ಲಿ ಸಿಡಿಲು ಉಂಟಾದರೂ ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.