ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷದಲ್ಲಿ ₹1ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿರುವೆ

ಕೂಡ್ಲಿಗಿ: ಕ್ಷೇತ್ರದಲ್ಲಿ ಈ ವರ್ಷ ಬರ ಆವರಿಸಿದ್ದರೂ ಉತ್ಸವ ಮಾಡಬೇಕಾದ ಅಗತ್ಯತೆ ಇತ್ತೇ ಎಂದು ಕೆಲವರು ಟೀಕಿಸಿದ್ದಾರೆ, ಆದರೆ ನಾನು ನಿರಂತರ ಕ್ಷೇತ್ರದಲ್ಲಿದ್ದುಕೊಂಡು ಸಾವಿರ ಕೋಟಿ ಅನುದಾನ ತಂದು ಜನತೆಯ ಸೇವೆ ಮಾಡುತ್ತಿದ್ದೇನೆ, ಶಾಸಕನಾದಾಗಿನಿಂದ ಕ್ಷೇತ್ರ ಬಿಟ್ಟು ಎಲ್ಲೂ ಹೋಗಿಲ್ಲ, ಜನತೆಯ ಕಷ್ಠ ಮತ್ತು ಸುಖ ಎರಡರಲ್ಲೂ ಪಾಲು ಹಂಚಿಕೊಂಡಿದ್ದೇನೆ. ಹೀಗಾಗಿ ನಾನು ನಮ್ಮ ಕ್ಷೇತ್ರದ ಉತ್ಸವ ನನ್ನ ತಂದೆಯ ಹೆಸರಿನಲ್ಲಿ ವ್ಯಯಕ್ತಿಕವಾಗಿ ಮಾಡುತ್ತಿದ್ದೇನೆ, ನಮ್ಮ ಕ್ಷೇತ್ರದ ಮೂಲೆ ಮೂಲೆಯ ಜನತೆಗೆ ಅನುಕೂಲವಾಗುವಂತೆ ಮೂರು ಕಡೆ ಉತ್ಸವ ಮಾಡುವುದರ ಮೂಲಕ ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿನಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿದ್ದೇನೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಟೀಕೆಗಳನ್ನು ಸಮರ್ಥಿಸಿಕೊಂಡರು

ಅವರು ತಾಲೂಕಿನ ಕಾನಾಹೊಸಹಳ್ಳಿಯಲ್ಲಿ ಮೂರು ದಿನಗಳ ಹುಣಸೆ ನಾಡು ಉತ್ಸವ, ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣನವರ ಸ್ಮರಣೋತ್ಸವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷದಲ್ಲಿ ₹1ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿರುವೆ. ಗಡಿಭಾಗ ಸೇರಿದಂತೆ ಯಾವುದೇ ಭಾಗ ನಿರ್ಲಕ್ಷಿಸದೇ ಅಭಿವೃದ್ಧಿ ಕೆಲಸ ಮಾಡಲಾಗಿದೆ.50 ವರ್ಷಗಳಿಂದಲೂ ಈಡೇರದ ಕಾತ್ರಿಕೆಹಟ್ಟಿ ಬಳಿಯ ಚಿನ್ನಹಗರಿ ಹಳ್ಳಕ್ಕೆ ₹8 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ.ಅದೇ ರೀತಿ ಉಜ್ಜಯಿನಿ,ಗುಡೇಕೋಟೆ, ಕಾನಹೊಸಹಳ್ಳಿ ಭಾಗದ ಎಲ್ಲ ಹಳ್ಳಿಗಳಲ್ಲಿ ಸಾಕಷ್ಟು ಅಭಿವೃದ್ಧಿಯ ಜತೆಗೆ ಆರೋಗ್ಯ, ಶಿಕ್ಷಣದ ಅಭಿವೃದ್ಧಿ ಸೇರಿ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದರು.

ನನ್ನ ತಂದೆ ಮಾಜಿ ಶಾಸಕ ದಿ.ಎನ್.ಟಿ.ಬೊಮ್ಮಣ್ಣನವರ ಒಡನಾಡಿಗಳು ಹಾಗೂ ಅಭಿಮಾನಿಗಳನ್ನು ಇಲ್ಲಿ ನೋಡಿದಾಗ ಭಾವನಾತ್ಮಕ ನೆನಪುಗಳು ಮರುಕಳಿಸುತ್ತವೆ. ರಂಗಭೂಮಿಯ ತವರೂರಾದ ತಾಲೂಕಿನಲ್ಲಿ ಹುಣಸೆನಾಡು ಉತ್ಸವ ಅಭೂತಪೂರ್ವ ಯಶಸ್ವಿ ಕಾಣುವಂತಾಗಿರುವುದು ಜನರ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಕೊಟ್ಟೂರಿನ ಭೂತಬುಜಂಗ ಹಿರೇಮಠದ ಡಾ. ಯೋಗಿರಾಜೇಂದ್ರ ಶಿವಾಚಾರ್ಯರು, ಕಾನಮಡುಗು ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಎನ್.ಟಿ. ತಮ್ಮಣ್ಣ, ಲತಾ ತಮ್ಮಣ್ಣ, ತುಮಕೂರು ಅಕ್ಷರಾ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್.ಪುಷ್ಪಾ, ಶಾಸಕರ ಕುಟುಂಬದ ಎನ್.ಟಿ.ಸುವರ್ಣಾ, ಎನ್.ಟಿ.ಗಂಗಮ್ಮ, ಎನ್.ಟಿ. ಸುಜಾತಾ, ಐಎಫ್ ಎಸ್ ಅಧಿಕಾರಿ ಚಂದ್ರಶೇಖರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ, ಇಓ ನರಸಪ್ಪ, ಡಿ.ವೈಎಸ್ ಪಿ.ಮಲ್ಲೇಶ್ ದೊಡ್ಡಮನಿ, ಸಿಪಿಐ ಪ್ರಹ್ಲಾದ್ ಚನ್ನಗಿರಿ, ಕೂಡ್ಲಿಗಿ ಪಿ.ಎಸ್.ಐ. ಪ್ರಕಾಶ್, ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರ, ಕಾಂಗ್ರೆಸ್ ಮುಖಂಡ ಬಣವಿಕಲ್ಲು ಯರ್ರಿಸ್ವಾಮಿ, ನಿವೃತ್ತ ಅಡಿಷನಲ್ ಎಸ್ಪಿ ಜಿ. ಮಂಜುನಾಥ್, ಕೆ.ಜಿ. ಕುಮಾರಗೌಡ, ಎಂ.ಒ. ಮಂಜುನಾಥ, ಎ. ಚನ್ನಬಸಪ್ಪ, ಜಿ.ಓಬಣ್ಣ, ಡಾ.ಟಿ. ಓಂಕಾರಪ್ಪ, ಎನ್.ವಿ. ತಮ್ಮಣ್ಣ, ನಿವೃತ್ತ ಇಓ ಬಸಣ್ಣ ಮಹಮ್ಮದ್ ಜಿಲಾನ್ ಇದ್ದರು.

ಸಾಧಕರಿಗೆ ಸನ್ಮಾನ: ಉತ್ಸವದಲ್ಲಿ ಆರೋಗ್ಯ ಕ್ಷೇತ್ರದ ವೈದ್ಯರು,ಸಿಬ್ಬಂದಿ, ವಸತಿ ನಿಲಯಗಳ ಅಡುಗೆಯವರು,ಸಿಬ್ಬಂದಿ, ಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ದಿ.ಎನ್.ಟಿ.ಬೊಮ್ಮಣ್ಣನವರ ಒಡನಾಡಿಗಳು, ನಾನಾ ಕ್ಷೇತ್ರದ ಸಾಧಕರು, ಶ್ರಮಿಕರು ಹಾಗೂ ಇತರರನ್ನು ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಕುಟುಂಬದವರು ಸನ್ಮಾನಿಸಿ ಗೌರವಿಸಿದರು.

ಸಾಂಸ್ಕೃತಿಕ ಕಲಾ ಅನಾವರಣ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಹುಣಸೆನಾಡು ಉತ್ಸವದಲ್ಲಿ ಮೂಡುಬಿದರೆಯ ಆಳ್ವಾಸ್ ಸಾಂಸ್ಕೃತಿಕ ಕಲಾ ತಂಡದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ದೇಶದ ನಾನಾ ರಾಜ್ಯಗಳ ಕಲೆ ಗರ್ಬಾ ನೃತ್ಯ, ಕಥಕ್ ನೃತ್ಯ, ರೂಪಕ, ಮಣಿಪುರಿ ನೃತ್ಯ, ಕನ್ನಡಶಾಲೆಯ ಮಕ್ಕಳ ಮಲ್ಲಕಂಬ ಸಾಹಸ ಪ್ರದರ್ಶನ ಸ್ಥಳೀಯ ಪ್ರೇಕ್ಷಕರಿಗೆ ಹೊಸದೊಂದು ಸಾಂಸ್ಕೃತಿಕ ಲೋಕ ಪರಿಚಯಿಸಿದವು. ಚಳಿ ಕಡಿಮೆ ಇದ್ದುದರಿಂದ ಪ್ರೇಕ್ಷಕರು 12 ಗಂಟೆಯಾದರೂ ಸಮಯ ಲೆಕ್ಕಿಸದೆ ಮಂಜುನಾಥ ಕುಕನೂರ ಜಾನಪದ ಗೀತೆ ಮೈಮರೆತು ಕೇಳುತ್ತಿದ್ದರು. ಯುವಕರಂತೂ ಮಂಜುನಾಥ ಕುಕನೂರು ಜತೆ ತಾವು ವೇದಿಕೆಯಲ್ಲಿಯೇ ಕುಣಿದರು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹಾಗೂ ಶಾಸಕರ ಸಹೋದರ ಎನ್.ಟಿ.ತಮ್ಮಣ್ಣ ಕಾರ್ಯಕರ್ತರು, ಮುಖಂಡರ ಒತ್ತಾಯದ ಮೇರೆಗೆ ತಾವೂ ಹೆಜ್ಜೆ ಹಾಕಿ ಗಮನ ಸೆಳೆದರು.