ಸಾರಾಂಶ
- ಇನ್‌ಸೈಟ್ಸ್ ಸಂಸ್ಥೆ ಜಿ.ಬಿ.ವಿನಯ್ ಕುಮಾರ ಹೇಳಿಕೆ । ಸ್ವಾಭಿಮಾನಿ ಬಳಗ ಉದ್ಘಾಟನೆ, ವೆಬ್ ಸೈಟ್ ಲೋಕಾರ್ಪಣೆ, ಸನ್ಮಾನ
- - - ಕನ್ನಡಪ್ರಭ ವಾರ್ತೆ ದಾವಣಗೆರೆಶೂನ್ಯದಿಂದ ಆರಂಭವಾಗಿ ಇಂದು ದೊಡ್ಡ ಮಟ್ಟದಲ್ಲಿ ಐಎಎಸ್, ಐಪಿಎಸ್ ಸಾಧನೆಗಳಿಗೆ ತರಬೇತಿ ನೀಡುವಂಥ ಇನ್‌ಸೈಟ್ಸ್ ಸಂಸ್ಥೆ ಕಟ್ಟಿ, ಬೆಳೆಸಲಾಗಿದೆ. ಅದೇ ಮಾದರಿಯಲ್ಲೇ ರಾಜ್ಯವ್ಯಾಪಿ ಸ್ವಾಭಿಮಾನಿ ಬಳಗವನ್ನು ಕಟ್ಟಲಾಗುವುದು ಎಂದು ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ ಹೇಳಿದರು.
ನಗರದ ಎಸ್.ಎಸ್. ಬಡಾವಣೆಯ ಎ ಬ್ಲಾಕ್‌ನಲ್ಲಿ ಸ್ವಾಭಿಮಾನಿ ಬಳಗ ಉದ್ಘಾಟನೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಬಳಗವು ರಾಜ್ಯದಲ್ಲಿ ಕ್ರಾಂತಿಯನ್ನೇ ಮಾಡಲಿದೆ. ಇದು ತಕ್ಷಣಕ್ಕೇ ಆಗುತ್ತದೆಂದು ಹೇಳುವುದಿಲ್ಲ. 4-5 ವರ್ಷದಲ್ಲೇ ರಾಜ್ಯಾದ್ಯಂತ ಬಳಗವು ದೊಡ್ಡ ಮಟ್ಟದಲ್ಲೇ ಬೆಳೆಯಲಿದೆ ಎಂದರು.ನಾಡಿನ ಮೂಲೆ ಮೂಲೆಗೆ ಹೋಗಿಬರುತ್ತಿದ್ದೇನೆ. ಪ್ರತಿಯೊಬ್ಬರೂ ತೋರುತ್ತಿರುವ ಪ್ರೀತಿ, ವಿಶ್ವಾಸ, ಗಮನ ಸೆಳೆದ ಪರಿ ಅನನ್ಯವಾದುದು. ನಮ್ಮ ಮೌಲ್ಯ ಹೆಚ್ಚಿಸಿಕೊಳ್ಳುವ ಜೊತೆಗೆ ಬೇರೆಯವರ ಮೌಲ್ಯವನ್ನೂ ಹೆಚ್ಚಿಸಬೇಕಿದೆ. ಶೈಕ್ಷಣಿಕ ಅಸಮಾನತೆ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದೇನೆ. ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ನೊಂದವರ ಪರ ಬಳಗವು ಕಾರ್ಯನಿರ್ವಹಿಸುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ತುಳಸಿ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ, ಕುಟುಂಬ ರಾಜಕಾರಣ ಕೊನೆಯಾಗುವುದು ಯಾವಾಗೆಂಬ ಪ್ರಶ್ನೆ ನಮ್ಮನ್ನೂ ಕಾಡುತ್ತಿದೆ. ಒಬ್ಬರಿಗೆ ಕೇವಲ 2 ಬಾರಿ ಮಾತ್ರ ಶಾಸಕ, ಸಂಸದ, ಮಂತ್ರಿ ಆಗಬೇಕೆಂಬ ಕಾನೂನು ಬರಬೇಕಾದ ಅಗತ್ಯವಿದೆ. ಕುಟುಂಬ ರಾಜಕಾರಣ ಬೆಳೆಯುತ್ತಲೇ ಇದೆ. ನಮ್ಮ ಮನೆತನವೇ ಅಧಿಕಾರದಲ್ಲಿ ಇರಬೇಕೆಂಬ ದುರಾಸೆ ಜಗತ್ತಿನ ಬಹುತೇಕ ಕಡೆ ಇದೆ. ನಮ್ಮ ದೇಶದಲ್ಲೂ ಕುಟುಂಬ ರಾಜಕಾರಣ ವಿಜೃಂಭಿಸುತ್ತಿದೆ ಎಂದು ವಿಷಾದಿಸಿದರು.ಬಳಗದ ರಾಜು ಮೌರ್ಯ ಬಳಗದ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ದೃಶ್ಯ ವಾಹಿನಿಯ ಹಿರಿಯ ವರದಿಗಾರ ಬಸವರಾಜ ದೊಡ್ಮನಿ ವೆಬ್ ಸೈಟ್ ಲೋಕಾರ್ಪಣೆ ಮಾಡಿದರು. ಮಹರ್ಷಿ ವಾಲ್ಮೀಕಿ, ವೀರ ವನಿತೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಭಕ್ತ ಕನಕ ದಾಸ ಜಯಂತಿಗಳನ್ನು ಸರಳವಾಗಿ ಆಚರಿಸಲಾಯಿತು.
ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ತಮಟೆ ವಾದ್ಯ ಕಲಾವಿದ ಎ.ಕೆ.ಹನುಮಂತಪ್ಪ, ಇಂಟರ್ ನ್ಯಾಷನಲ್ ಗಿನ್ನಿಸ್ ಬುಕ್ ರೆಕಾರ್ಡ್ ಸಾಧಕಿ ಕು.ಎಸ್.ಸ್ತುತಿ, ಶವ ಸಂಸ್ಕಾರ ಕಾಯಕ ಯೋಗಿ ಗೂಳಪ್ಪ ನೀಲಪ್ಪ ಮುಗದೂರ, ಪ್ರಗತಿ ಪರ ರೈತರಾದ ಕೆ.ಟಿ.ಚಂದ್ರಶೇಖರ, ಯೋಗಪಟು ಕು. ಕೆ.ವೈ.ಸೃಷ್ಟಿ, ಕರಾಟೆಪಟು ಬಿ.ಎ.ನಿಧಿ ಬೇತೂರು, ಕಟ್ಟಡ ಕಾರ್ಮಿಕ ಫೆಡರೇಷನ್ ಅಧ್ಯಕ್ಷ ವಿ.ಲಕ್ಷ್ಮಣ, ಅಂಗವಿಕಲರ ಆಶಾಕಿರಣ ಟ್ರಸ್ಟ್‌ನ ಸಿ.ಹನುಮೇಶರಿಗೆ ಬಳಗದಿಂದ ಗೌರವಿಸಲಾಯಿತು.ತಂಜೀಮ್ ಉಲೇಮಾ ಅಹಲೇ ಸುನ್ನತ್ ಅಧ್ಯಕ್ಷ ಮೌಲಾನಾ ಖಾಜಿ ಮಹಮ್ಮದ್ ಇಲಿಯಾಜ್ ಖಾದ್ರಿ, ಡಾನ್ ಬಾಸ್ಕೋದ ಫಾದರ್ ರೆಜಿ ಜೇಕಬ್, ಪುರಂದರ ಲೋಕಿಕೆರೆ, ಅಶೋಕ ಇತರರು ಇದ್ದರು.
- - -ಕೋಟ್ ಲೋಕಸಭೆ ಚುನಾವಣೆ ವೇಳೆ ನನ್ನ ವಿರುದ್ಧ ವದಂತಿ, ಅಪಪ್ರಚಾರ, ಸುಳ್ಳು ಸುದ್ದಿ ಹರಡಿದ್ದರು. ಲಕ್ಷಾಂತರ ಮಂದಿ ಹತ್ತು ತಿಂಗಳಲ್ಲಿ ಪರವಾಗಿ ಬಂದರು. ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೆ ಸರಿದರು. ಸ್ವಾಭಿಮಾನಿಗಳು, ಪ್ರಾಮಾಣಿಕತೆ ಇದ್ದವರು ಜೊತೆಯಲ್ಲೇ ಉಳಿದರು
- ಬಿ.ಬಿ.ವಿನಯಕುಮಾರ, ಸಂಸ್ಥಾಪಕ ರಾಜ್ಯಾಧ್ಯಕ್ಷ, ಸ್ವಾಭಿಮಾನಿ ಬಳಗ- - - -17ಕೆಡಿವಿಜಿ7:
ಸಮಾರಂಭವನ್ನು ಶ್ರೀ ಬಸವ ಪ್ರಭು ಸ್ವಾಮೀಜಿ ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಮೌಲಾನಾ ಖಾಜಿ ಮಹಮ್ಮದ್ ಇಲಿಯಾಜ್ ಖಾದ್ರಿ, ಫಾದರ್ ರೆಜಿ ಜೇಕಬ್, ಜಿ.ಬಿ.ವಿನಯಕುಮಾರ ಇತರರು ಇದ್ದರು.