ಮನ್‌ಮುಲ್ ಕಲಬೆರಕೆ ಹಾಲಿನ ಪುಡಿ ಹಗರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಎಫ್‌ಜಿಎಸ್ ಶಾಖೆಯ ಮುಖ್ಯಸ್ಥ ಪ್ರದೀಪ್‌ಕುಮಾರ್ ಜಾಧವ್ ಹಾಗೂ ನಿರ್ದೇಶಕ ಡಾಲು ರವಿ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೋ ಬಹಿರಂಗಗೊಂಡಿರುವುದು ಹೊಸ ಸಂಚಲನವನ್ನು ಸೃಷ್ಟಿಸಿದೆ.

- ಮನ್‌ಮುಲ್ ಅಧಿಕಾರಿ ಜಾಧವ್- ನಿರ್ದೇಶಕ ಡಾಲು ರವಿ ನಡುವಿನ ಆಡಿಯೋ ಬಹಿರಂಗ

- ಹೆಂಡತಿ-ಮಕ್ಕಳೊಂದಿಗೆ ಗೋಳಾಡುತ್ತಾ ಮಾತುಕತೆ, ಶಿವಪ್ಪನನ್ನು ಸುಮ್ಮನೆ ಬಿಡುವುದಿಲ್ಲ

- ಡೈರಿದೆಲ್ಲಾ ಪೂರ್ತಿ ತೆಗೆಯುತ್ತೇನೆ. ನಾನು ಯಾರನ್ನೂ ಬಿಡುವುದಿಲ್ಲವೆಂದು ಆವೇಶದ ಮಾತುಕನ್ನಡಪ್ರಭ ವಾರ್ತೆ ಮಂಡ್ಯ

ಮನ್‌ಮುಲ್ ಕಲಬೆರಕೆ ಹಾಲಿನ ಪುಡಿ ಹಗರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಎಫ್‌ಜಿಎಸ್ ಶಾಖೆಯ ಮುಖ್ಯಸ್ಥ ಪ್ರದೀಪ್‌ಕುಮಾರ್ ಜಾಧವ್ ಹಾಗೂ ನಿರ್ದೇಶಕ ಡಾಲು ರವಿ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೋ ಬಹಿರಂಗಗೊಂಡಿರುವುದು ಹೊಸ ಸಂಚಲನವನ್ನು ಸೃಷ್ಟಿಸಿದೆ.

ಸುಮಾರು ಐದು ತಿಂಗಳ ಹಿಂದೆ ಪ್ರದೀಪ್‌ಕುಮಾರ್ ಜಾಧವ್ ಬಂಧನಕ್ಕೂ ಮುನ್ನ ಒಕ್ಕೂಟದ ನಿರ್ದೇಶಕ ಡಾಲು ರವಿ ಅವರಿಗೆ ಮೊಬೈಲ್ ಕರೆ ಮಾಡಿ ಹೆಂಡತಿ-ಮಕ್ಕಳೊಂದಿಗೆ ಗೋಳಾಡುತ್ತಿರುವ, ಬೇರೆಯವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ.

ನಾನೇನೂ ತಪ್ಪು ಮಾಡಿಲ್ಲ. ಆದರೆ, ನಾನು ಶಿವಪ್ಪನನ್ನು ಸುಮ್ಮನೆ ಬಿಡುವುದಿಲ್ಲ. ಅವನು ನನ್ನ ಕುಟುಂಬವನ್ನು ಹಾಳು ಮಾಡಿದ್ದಾನೆ. ನಾಳೆ ಬೆಳಗ್ಗೆಯೇ ಡೈರಿದೆಲ್ಲಾ ಪೂರ್ತಿ ತೆಗೆಯುತ್ತೇನೆ. ನಾನು ಯಾರನ್ನೂ ಬಿಡುವುದಿಲ್ಲ ಎಂದು ಅಳುತ್ತಲೇ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ನಾನು ಸಸ್ಪೆಂಡ್ ಆಗಿ ಐದು ತಿಂಗಳಾಗಿದೆ. ನಾನು ಹೇಗೆ ಜೀವನ ಮಾಡಲಿ. ನನಗೆ ಈ ಕೆಲಸವೂ ಬೇಡ, ಏನೂ ಬೇಡ. ನಮ್ಮ ಊರಿಗೆ ನಾವು ಹೊರಟುಹೋಗುತ್ತೇವೆ ಎಂದು ಗೋಳಿಡುವಾಗ, ಅತ್ತ ನಿರ್ದೇಶಕರು, ಶಿವಪ್ಪನಿಗೂ ನಿನಗೂ ಏನೋ? ಎಂದು ಕೇಳಿದಾಗ ನಾನು ಬೆಳಗ್ಗೆ ಬಂದು ಎಲ್ಲಾ ಓಪನ್ ಸ್ಟೇಟ್‌ಮೆಂಟ್ ಕೊಡುತ್ತೇನೆ. ಎಲ್ಲರದ್ದೂ ತೆಗೆಯುತ್ತೇನೆ ಎಂದು ಹೇಳುತ್ತಾರೆ.

ನೋಡು ಜಾಧವ್, ನಾವು ಇಷ್ಟು ವರ್ಷದಲ್ಲಿ ಡೈರಿಯಲ್ಲಿ ಒಂದು ರುಪಾಯಿ ತಿಂದಿಲ್ಲ. ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ ಎಂದು ಡಾಲು ರವಿ ಹೇಳಿದಾಗ, ಅವರದ್ದೇ ತೆಗೆಯುತ್ತೇನೆ ಎಂದು ಜಾಧವ್ ಹೇಳುತ್ತಾರೆ. ಇದರ ಹಿಂದೆ ಯಾರ್ಯಾರು ಇದ್ದಾರೆ ಹೇಳು, ನಮಗೆ ತಿಳಿಸಿದರೆ ನಾನು ನಿನ್ನ ಪರವಾಗಿ ನಿಲ್ಲುತ್ತೇನೆ ಎಂದು ಡಾಲು ರವಿ ಭರವಸೆ ನೀಡುವರು.

ಶಿವಪ್ಪ ಏನು ಮಾಡಿದ, ಶಿವಪ್ಪನ ಜೊತೆ ಇನ್ನೂ ಯಾರ್ಯಾರಿದ್ದಾರೆ ಎಂದು ಕೇಳಿದಾಗ, ಹಳೇ ಎಂಡಿನ ನನ್ನ ಫೋನ್ ರಿಸೀವ್ ಮಾಡಲು ಹೇಳಿ. ಎಷ್ಟು ಹೆಣ್ಮಕ್ಕಳನ್ನು, ಎಷ್ಟು ಡೈರಿ ಹಾಳು ಮಾಡಿದ್ದಾನೆ. ಅವನನ್ನು ನಾವು ಬಿಟ್ಟು ಬಿಡುತ್ತೇವಾ ಎಂದು ರೋಷದಿಂದಲೇ ಜಾಧವ್ ಹೇಳುತ್ತಾರೆ. ಬೇರೆ ಡೈರೆಕ್ಟರ್‌ಗಳು ಯಾರಾದರೂ ಇದ್ದಾರಾ ಎಂದು ಜಾಧವ್‌ರನ್ನು ಕೇಳಿದಾಗ, ಎಲ್ಲರೂ ಇದ್ದಾರೆ. ಅದಕ್ಕೆ ಸಾಕ್ಷಿ ಕೊಡುತ್ತೇನೆ ನಾನು ಎಂದು ಹೇಳಿದ್ದಾರೆ. ಶ್ರೀನಿವಾಸಮೂರ್ತಿ ಹೋದ, ರಾಮಕೃಷ್ಣ ಮಾಡಿದ. ನನಗೆ ೧೨೩ ಟನ್ ಕೊಡಬೇಕು. ಇಬ್ಬರನ್ನೂ ಕರೆದುಕೊಂಡು ಬನ್ನಿ ಸಾಕ್ಷಿ ಕೊಡುತ್ತೇನೆ ಎಂದು ಹೇಳಿದ್ದಾರೆ.

ನಾನು ನನ್ನ ಹೆಂಡತಿಗೆ ಡೈರಿ ವಿಷಯಕ್ಕೆ ಏಕೆ ಬರ್ತೀಯಾ ಎಂದು ಕಿವಿಯಲ್ಲಿ ರಕ್ತ ಬರುವ ಹಾಗೆ ಹೊಡೆದಿದ್ದೇನೆ. ನನ್ನ ಮೇಲೆ ಅನಂತ ಎಂಬುವನು ದೂರು ಕೊಟ್ಟಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಬಳಿ ಪ್ರತಿಯೊಂದಕ್ಕೂ ಸಾಕ್ಷಿ ಇದೆ ಎಂದಾಗ, ಸಾಕ್ಷಿ ಇದೆ ಎಂದ ಮೇಲೆ ನೀನು ಹೆದರಬೇಡ ಬಾ. ನಾವು ನಿನ್ನ ಜೊತೆ ನಿಲ್ತೇವೆ. ತಪ್ಪು ಮಾಡಿದವನು ಅನುಭವಿಸುತ್ತಾನೆ. ಕಟ್ತಾನೆ ಎಂದು ನಿರ್ದೇಶಕ ಡಾಲು ರವಿ ಹೇಳಿದ್ದಾರೆ.ಮೊಬೈಲ್‌ನಲ್ಲಿ ಮಾತನಾಡಿರುವುದು ನಾನೇ. ಐದು ತಿಂಗಳ ಹಿಂದೆ ಎಂದೂ ನನಗೆ ಫೋನ್ ಮಾಡದವರು ಅಂದು ಮಾಡಿದಾಗ ರಿಸೀವ್ ಮಾಡಿದೆ. ಓಪನ್ ಸ್ಪೀಕರ್ ಆನ್ ಮಾಡಿ ನನ್ನ ಚಾಲಕನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದೆ. ನಾನು ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು, ಒಕ್ಕೂಟದ ಎಂಡಿ ರಘು, ನಿರ್ದೇಶಕರಾದ ಬೋರೇಗೌಡ, ಎಂ.ಬಿ.ಹರೀಶ್ ಅವರಿಗೆ ನೀಡಿದ್ದೆ. ಬೇರೆ ಯಾರಿಗೂ ಕೊಟ್ಟಿಲ್ಲ. ಜಾಧವ್ ಕೊಟ್ಟಿದ್ದರೆ ನನಗೆ ಗೊತ್ತಿಲ್ಲ.

- ಡಾಲು ರವಿ, ನಿರ್ದೇಶಕರು, ಮನ್‌ಮುಲ್

ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್‌ಗೆ ಬಂಧನ ಭೀತಿ

ಕನ್ನಡಪ್ರಭ ವಾರ್ತೆ ಮಂಡ್ಯ

ಕಲಬೆರಕೆ ಹಾಲಿನ ಪುಡಿ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಒಕ್ಕೂಟದ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಜಾಧವ್ ಮತ್ತು ಡಾಲು ರವಿ ಆಡಿಯೋ ಸಂಭಾಷಣೆ ಬಹಿರಂಗಗೊಂಡಿರುವ ಬೆನ್ನ ಹಿಂದೆಯೇ ಕಲಬೆರಕೆ ಹಾಲಿನ ಪುಡಿ ಪ್ರಕರಣದಲ್ಲಿ ಮಾಜಿ ಅಧ್ಯಕ್ಷರ ಪಾತ್ರವಿರುವುದನ್ನು ಪುಷ್ಠೀಕರಿಸಿದೆ. ಕಲಬೆರಕೆ ಹಾಲಿನ ಪುಡಿ ಪ್ರಕರಣದಲ್ಲಿ ಬಂಧಿತರಾಗಿರುವ ಐವರಿಗೆ ಇದುವರೆಗೂ ಜಾಮೀನು ದೊರಕಿಲ್ಲ. ಯು.ಸಿ.ಶಿವಕುಮಾರ್ ಕೂಡ ನಿರೀಕ್ಷಣಾ ಜಾಮೀನು ಪಡೆಯುವುದಕ್ಕೆ ತೀವ್ರ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಜಾಧವ್ ಪ್ರಕರಣದಿಂದ ಪಾರಾಗುವುದಕ್ಕೆ ಎಲ್ಲವನ್ನೂ ಪೊಲೀಸರೆದುರು ಬಹಿರಂಗಪಡಿಸುವ ಸಾಧ್ಯತೆಗಳು ಹೆಚ್ಚಾಗಿರುವುದಾಗಿ ಹೇಳಲಾಗುತ್ತಿದೆ.