ಏಕಾಂತಕ್ಕೆ ಮಲಮಗಳು ಅಡ್ಡಿಯಾಗಿದ್ದಕ್ಕೆಕೊಂದೆ: ಇನ್‌ಸ್ಟಾಗ್ರಾಂ ಗಂಡನ ಹೇಳಿಕೆ

| Published : Oct 29 2025, 01:15 AM IST

ಏಕಾಂತಕ್ಕೆ ಮಲಮಗಳು ಅಡ್ಡಿಯಾಗಿದ್ದಕ್ಕೆಕೊಂದೆ: ಇನ್‌ಸ್ಟಾಗ್ರಾಂ ಗಂಡನ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮಲ ಮಗಳನ್ನು ಕೊಂದು ಪರಾರಿಯಾಗಿದ್ದವನನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮಲ ಮಗಳನ್ನು ಕೊಂದು ಪರಾರಿಯಾಗಿದ್ದವನನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮಸಂದ್ರದ ಕನ್ನಿಕಾ ಬಡಾವಣೆ ನಿವಾಸಿ ದರ್ಶನ್ ಬಂಧಿತನಾಗಿದ್ದು, ಕೃತ್ಯ ಎಸಗಿ ಬಳಿಕ ನಗರ ತೊರೆದು ಹೊರ ಜಿಲ್ಲೆಯಲ್ಲಿ ಆತ ತಲೆಮರೆಸಿಕೊಂಡಿದ್ದ. ಕೌಟುಂಬಿಕ ಕಾರಣಕ್ಕೆ ತನ್ನ ಮಲ ಮಗಳು ಸಿರಿ (7) ಉಸಿರುಗಟ್ಟಿಸಿ ಕೊಂದು ಆರೋಪಿ ಓಡಿ ಹೋಗಿದ್ದ. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂ ಲವ್‌ ಸ್ಟೋರಿ: ಕೌಟುಂಬಿಕ ಮನಸ್ತಾಪಕ್ಕೆ ತನ್ನ ಮೊದಲ ಪತಿಯಿಂದ ಪ್ರತ್ಯೇಕವಾಗಿದ್ದ ಶಿಲ್ಪಾ, ಕನ್ನಿಕಾ ಬಡಾವಣೆಯಲ್ಲಿ ತನ್ನ ತಾಯಿ ಹಾಗೂ ಮಗಳ ಜತೆ ವಾಸವಾಗಿದ್ದಳು. ನಾಲ್ಕು ತಿಂಗಳ ಹಿಂದೆ ಆಕೆಗೆ ಇನ್‌ಸ್ಟಾಗ್ರಾಂನಲ್ಲಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದರ್ಶನ್ ಪರಿಚಯವಾಗಿದೆ. ಆನೇಕಲ್ ಸಮೀಪದ ದಿನಸಿ ಅಂಗಡಿಯಲ್ಲಿ ಆತ ಕೆಲಸ ಮಾಡುತ್ತಿದ್ದ. ಇನ್‌ಸ್ಟಾಗ್ರಾಂ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿದೆ. ಕೊನೆಗೆ ವಯಸ್ಸಿನಲ್ಲಿ ತನಗಿಂತ ಎಂಟು ವರ್ಷ ಕಿರಿಯನಾದ ದರ್ಶನ್ ಜತೆ ಶಿಲ್ಪಾ ಎರಡನೇ ವಿವಾಹವಾಗಿದ್ದಳು. ಮದುವೆ ನಂತರ ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಇತ್ತೀಚೆಗೆ ಅನಾರೋಗ್ಯದಿಂದ ಶಿಲ್ಪಾಳ ತಾಯಿ ಮೃತಪಟ್ಟ ಬಳಿಕ ಆತನ ವರಸೆ ಬದಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಪತ್ನಿ ಹಾಗೂ ಮಲ ಮಗಳ ಮೇಲೆ ದರ್ಶನ್ ಗಲಾಟೆ ಮಾಡುತ್ತಿದ್ದ. ಮಗುವಿನ ಮೇಲೆ ತನ್ನ ಕ್ರೌರ್ಯವನ್ನು ತೋರಿಸುತ್ತಿದ್ದ. ಕಳೆದ ಶುಕ್ರವಾರ ಸಂಜೆ ಮನೆಯಲ್ಲಿ ಸರಿಯಾಗಿ ಟ್ಯೂಷನ್‌ ಗೆ ಹೋಗುವುದಿಲ್ಲ ಎಂದು ಕಾರಣ ನೀಡಿ ಮಗಳ ಮೇಲೆ ದರ್ಶನ್ ಹಲ್ಲೆ ಮಾಡಿ ಆಕೆಯ ಉಸಿರುಗಟ್ಟಿಸಿ ಕೊಂದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಏಕಾಂತಕ್ಕೆ ಭಂಗ:

ತಮಗೆ ಏಕಾಂತ ಸಮಯ ಕಳೆಯಲು ಸಿರಿ ಅಡ್ಡಿಯಾಗಿದ್ದಳು. ಇದರಿಂದ ನನಗೆ ಆಕೆಯ ಮೇಲೆ ಕೋಪವಿತ್ತು. ಹಲವು ಬಾರಿ ಮನೆಯಿಂದ ಓಡಿಸಲು ಯತ್ನಿಸಿದೆ. ಆದರೆ ಸಿರಿ ಮನೆ ತೊರೆಯಲಿಲ್ಲ. ಕೊನೆಗೆ ಸಿರಿ ಹತ್ಯೆ ಮಾಡಿದೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.