ಪ್ರೇಮ ಕವಿ ಎನಿಸಿಕೊಳ್ಳಲು ಇಷ್ಟ: ಕವಿ ಬಿಆರ್‌ಎಲ್‌

| Published : Mar 24 2025, 12:32 AM IST

ಸಾರಾಂಶ

ಕನ್ನಡದ ಅನೇಕ ಸಾಹಿತಿಗಳು ನವೋದಯದಿಂದ ನವ್ಯಕ್ಕೆ ಹೊರಳಿದರೆ, ಬಿ.ಆರ್.ಲಕ್ಷ್ಮಣರಾವ್ ನವ್ಯದಿಂದ ನವೋದಯದತ್ತ ಹೊರಟು ಆನಂತರ ರಮ್ಯತೆಯನ್ನು ಬರವಣಿಗೆಯಲ್ಲಿ ಅಳವಡಿಸಿಕೊಂಡರು. ಲಕ್ಷಣರಾವ್‌ ವಿನೋದ ಹಾಗೂ ಕಾಮಿಕ್ ಶೈಲಿಯಲ್ಲಿ ಕವನಗಳನ್ನು ರಚಿಸಿದರೂ ಅವುಗಳಲ್ಲಿ ಜನಪರವಾದ ನಿಲುವು ಇರುತ್ತಿತ್ತು.

ಕನ್ನಡಪ್ರಭ ವಾರ್ತೆ ಕೋಲಾರ

ತಮ್ಮನ್ನು ತಾವು ಪ್ರೇಮ ಕವಿ ಎಂದು ಗುರುತಿಸಿಕೊಳ್ಳಲು ಇಚ್ಛಿಸುವುದಾಗಿ ಕವಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಓದುಗ ಕೇಳುಗ ನಮ್ಮ ನಡೆ ಬಳಗದಿಂದ ೪೭ನೇ ಕಾರ್ಯಕ್ರಮದಲ್ಲಿ ಬಿಆರ್‌ಎಲ್ ಅವರ ಬೆಸ್ಟ್ ಆಫ್ ಬಿಆರ್‌ಎಲ್ ಕೃತಿ ಕುರಿತು ವಿಚಾರ ಸಂಕಿರಣ ಹಾಗೂ ಓದುಗರ ಸಂವಾದದಲ್ಲಿ ಅವರು ಮಾತನಾಡಿದರು.ಕವಿಗಳನ್ನು ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಪ್ರಕಾರಗಳ ಮೂಲಕ ಗುರುತಿಸಲಾಗುತ್ತದೆ. ತಾವು ಈ ಪೈಕಿ ಯಾವ ಗುಂಪಿಗೆ ಸೇರಿದವರು ಎಂಬ ಓದುಗರ ಪ್ರಶ್ನೆಗೆ ಅವರು ತಮ್ಮನ್ನು ಪ್ರೇಮ ಕವಿ ಎಂದು ಕನ್ನಡಿಗರು ಗುರುತಿಸಿದ್ದಾರೆ. ಅದೇ ತಮಗೆ ಹೆಚ್ಚು ತೃಪ್ತಿದಾಯಕ ಎಂದರು.ಜನಮನ್ನಣೆಯ ದೊಡ್ಡ ಪ್ರಶಸ್ತಿಯಾವುದೇ ಕವಿ, ಸಾಹಿತಿಗೆ ಜನಮನ್ನಣೆ ಗಿಂತಲೂ ದೊಡ್ಡ ಪ್ರಶಸ್ತಿ ಮತ್ತೊಂದು ಇರಲು ಸಾಧ್ಯವಿಲ್ಲ, ಅದೇ ರೀತಿ ಕೋಲಾರದ ಸಾಹಿತ್ಯಾಸಕ್ತರು ತಮ್ಮ ಕೃತಿಯ ಕುರಿತು ಸಂವಾದ ನಡೆಸಿ ವಿಚಾರ ಸಂಕಿರಣ ನಡೆಸುತ್ತಿರುವುದೇ ದೊಡ್ಡ ಪ್ರಶಸ್ತಿ ಸಿಕ್ಕಂತಾಗಿದೆ. ತಾವು ಬರೆಯಲು ಆರಂಭಿಸಿದಾಗ ತಮ್ಮ ಕಾವ್ಯದ ಮೇಲೆ ಅಡಿಗರ ಪ್ರಭಾವ ಇತ್ತು, ಆನಂತರ ತಮ್ಮದೇ ಶೈಲಿಯನ್ನು ರೂಪಿಸಿಕೊಂಡೆ. ಇದರಿಂದಲೇ ಕನ್ನಡಿಗರು ತಮ್ಮನ್ನು ಇಷ್ಟ ಪಟ್ಟರು, ತಮ್ಮ ಕವನಗಳ ಮೇಲೆ ಪ್ರೇಮ, ಪ್ರೀತಿ, ಶೃಂಗಾರದ ಜೊತೆಗೆ ಚಿಂತಾಮಣಿಯಲ್ಲಿ ವಾಸವಾಗಿದ್ದರಿಂದ ತೆಲುಗು ಹಾಡುಗಳ ಪ್ರಭಾವ ಇತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿ ವಿಮರ್ಶಕ ಹಾಗೂ ಕನ್ನಡ ಅಧ್ಯಾಪಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಮಾತನಾಡಿ, ಕನ್ನಡದಲ್ಲಿ ಕೆಲವರು ಸಿದ್ಧಿಯನು ಕೆಲವರು ಪ್ರಸಿದ್ಧಿಯನ್ನು ಪಡೆದ ಕವಿಗಳಿದ್ದಾರೆ, ಆದರೆ, ಸಿದ್ಧಿ ಮತ್ತು ಪ್ರಸಿದ್ಧಿಯನ್ನು ಪಡೆದ ಕೆಲವೇ ಮಂದಿ ಕವಿಗಳ ಸಾಲಿಗೆ ಬಿ.ಆರ್.ಲಕ್ಷ್ಮಣರಾವ್ ಸೇರುತ್ತಾರೆಂದು ವಿವರಿಸಿದರು.

ನವ್ಯ-ನವೋದಯ- ರಮ್ಯತೆ

ಕನ್ನಡದ ಅನೇಕ ಸಾಹಿತಿಗಳು ನವೋದಯದಿಂದ ನವ್ಯಕ್ಕೆ ಹೊರಳಿದರೆ, ಬಿ.ಆರ್.ಲಕ್ಷ್ಮಣರಾವ್ ನವ್ಯದಿಂದ ನವೋದಯದತ್ತ ಹೊರಟು ಆನಂತರ ರಮ್ಯತೆಯನ್ನು ಬರವಣಿಗೆಯಲ್ಲಿ ಅಳವಡಿಸಿಕೊಂಡರೆಂದು ವಿವರಿಸಿದರು.ಕವಿ, ವಿಮರ್ಶಕ, ಪ್ರಾಧ್ಯಾಪಕ ಡಾ.ಟಿ.ಯಲ್ಲಪ್ಪ ಕಾರ್ಯಕ್ರಮದಲ್ಲಿ ಬಿ.ಆರ್.ಲಕ್ಷ್ಮಣರಾವ್ ಕಾವ್ಯ ಕುರಿತು ಮಾತನಾಡಿ, ಬಿ.ಆರ್.ಎಲ್ ವಿನೋದ ಹಾಗೂ ಕಾಮಿಕ್ ಶೈಲಿಯಲ್ಲಿ ಕವನಗಳನ್ನು ರಚಿಸಿದರೂ ಅವುಗಳಲ್ಲಿ ಜನಪರವಾದ ನಿಲುವು ಇರುತ್ತಿತ್ತು ಎಂದು ಹೇಳಿದರು.

ಸಾಹಿತಿಗಳಾದ ರವೀಂದ್ರ ಸಿಂಗ್, ಗೋವಿಂದಪ್ಪ, ಕೋಗಿಲಹಳ್ಳಿ ಕೃಷ್ಣಪ್ಪ, ಸಿ.ರಮೇಶ್ ಇದ್ದರು. ಮಂಜುಳ ಕೊಂಡರಾಜನಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿ, ಓದುಗ ಕೇಳುಗ ಬಳಗದ ಎಚ್.ಎ.ಪುರುಷೋತ್ತಮ್‌ರಾವ್ ಸ್ವಾಗತಿಸಿದರು.