ರಾಮನಗರ: ಸಾರ್ವಜನಿಕ ಜೀವನದಲ್ಲಿ ಇದ್ದಷ್ಟು ದಿನವೂ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಬೇರೆಯವರು ಮಾಡದ ಸಾಧನೆಯನ್ನೇನೂ ನಾನು ಮಾಡಿಲ್ಲ. ಆದ್ದರಿಂದ ಪೌರ ಸನ್ಮಾನದೊಂದಿಗೆ ನೀಡಿರುವ ಸ್ಮರಣಿಕೆಯನ್ನು ನಗರಸಭೆಯಲ್ಲಿಯೇ ಇಟ್ಟುಕೊಳ್ಳುವಂತೆ ಹೇಳಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ವಾಪಸ್ ನೀಡಿದರು.

ರಾಮನಗರ: ಸಾರ್ವಜನಿಕ ಜೀವನದಲ್ಲಿ ಇದ್ದಷ್ಟು ದಿನವೂ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಬೇರೆಯವರು ಮಾಡದ ಸಾಧನೆಯನ್ನೇನೂ ನಾನು ಮಾಡಿಲ್ಲ. ಆದ್ದರಿಂದ ಪೌರ ಸನ್ಮಾನದೊಂದಿಗೆ ನೀಡಿರುವ ಸ್ಮರಣಿಕೆಯನ್ನು ನಗರಸಭೆಯಲ್ಲಿಯೇ ಇಟ್ಟುಕೊಳ್ಳುವಂತೆ ಹೇಳಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ವಾಪಸ್ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಮನಗರ ನಗರಸಭೆ ಆಯೋಜಿಸಿದ್ದ ರೇಷ್ಮೆನಾಡ ಕನ್ನಡ ಹಬ್ಬ ಸಮಾರಂಭದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಮಾನ್ಯರಲ್ಲಿ ಸಾಮಾನ್ಯನಾಗಿ ನಿರ್ವೇಚನೆಯಿಂದ ಸೇವೆ ಸಲ್ಲಿಸುವ ಕೆಲಸ ಮಾಡಿದ್ದೇನೆ. ಹಾಗಾಗಿ ಸನ್ಮಾನಕ್ಕೆ ಧ್ಯೋತಕವಾಗಿರುವ ಸ್ಮರಣಿಕೆಯನ್ನು ಹಿಂಪಡೆದು ನಗರಸಭೆಯಲ್ಲಿಯೇ ಇಟ್ಟುಕೊಳ್ಳಲಿ. ನನ್ನ ಮನಸ್ಸಿಗೂ ಸಮಾಧಾನ ಆಗುತ್ತದೆ ಎಂದರು.

ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ನಿವೇಶನ, ಸೂರು ಕಲ್ಪಿಸಿದೆ. 3 ಸಾವಿರ ಗೇಣಿದಾರರಿಗೆ ಗೇಣಿ ಒದಗಿಸಿಕೊಟ್ಟು ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ತೃಪ್ತಿಯಿದೆ. ನಾನೆಂದೂ ಗೌರವವನ್ನು ಮಾಡಿಸಿಕೊಂಡವನಲ್ಲ. ಅಭಿನಂದನೆಗೆ ಅರ್ಹವಾಗುವ ಕೆಲಸ ಮಾಡಿದ್ದರೆ ಅಭಿನಂದನೆ ಸ್ವೀಕರಿಸುತ್ತಿದ್ದೆ. ಕರ್ತವ್ಯ ಮಾಡಿದ್ದೇನೆ ಅಷ್ಟೆ. ಅಭಿನಂದನೆಗೆ ಅರ್ಹವಾಗುವ ಕೆಲಸ ಮಾಡಿಲ್ಲ ಎಂದು ಹೇಳಿದರು.

ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಜನಪರ ಕಾರ್ಯಗಳ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭವಿಷ್ಯದಲ್ಲಿ ಅವರಿಗೂ ಪೌರ ಸನ್ಮಾನ ಮಾಡುವ ದಿನಗಳು ಬರಲಿ ಎಂದು ಸಿ.ಎಂ.ಲಿಂಗಪ್ಪ ಆಶಿಸಿದರು.

ಸಿ.ಎಂ.ಲಿಂಗಪ್ಪ ನಿಜವಾದ ರಾಷ್ಟ್ರಕಾರಣಿ:

ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಹಿರಿಯ ಮುತ್ಸದ್ಧಿ ರಾಜಕಾರಣಿ ಸಿ.ಎಂ.ಲಿಂಗಪ್ಪ ಅವರಿಗೆ ಸಲ್ಲಿಸುತ್ತಿರುವ ನಾಗರಿಕ ಸನ್ಮಾನ ನನ್ನನ್ನು ಇಲ್ಲಿಗೆ ಕರೆತಂದಿತು. ಅವರು ಪ್ರಾಮಾಣಿಕ ಮತ್ತು ಆದರ್ಶ ರಾಜಕಾರಣಿ. ಅಷ್ಟೇ ಅಲ್ಲದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದವರು. ಸಿ.ಎಂ.ಲಿಂಗಪ್ಪ ರಾಜಕಾರಣಿ ಆಗಿರದೆ ರಾಷ್ಟ್ರಕಾರಣಿ ಆಗಿದ್ದವರು. ರಾಜಕಾರಣಿ ಮುಂದಿನ ಚುನಾವಣೆ ಹೇಗೆ ಗೆಲ್ಲಬೇಕೆಂದು ಕೆಲಸ ಮಾಡುವವರು. ಆದರೆ, ರಾಷ್ಟ್ರಕಾರಣಿ ಆದವರು ಮುಂದಿನ ಪೀಳಿಗೆಗೆ ಶಾಶ್ವತ ಕಾರ್ಯಕ್ರಮಗಳನ್ನು ನೀಡುವವರು. ಹೀಗಾಗಿ ಸಿ.ಎಂ.ಲಿಂಗಪ್ಪರವರು ನಿಜವಾದ ರಾಷ್ಟ್ರಕಾರಣಿ ಎಂದು ಬಣ್ಣಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ನಾನು ಮತ್ತು ಸಿ.ಎಂ.ಲಿಂಗಪ್ಪ ಸ್ನೇಹಿತರಷ್ಟೇ ಅಲ್ಲ ಸಹೋದರರಂತೆ ಇದ್ದೇವೆ. 75ರ ದಶಕದಲ್ಲಿ ನಾವು ಪಂಚ ಪಾಂಡವರಂತೆ ಜಿಲ್ಲೆಯಲ್ಲಿ ಕೆಲಸ ಮಾಡಿದವರು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಧರ್ಮರಾಯ, ನಾನು ಭೀಮ, ಡಿ.ಕೆ.ಶಿವಕುಮಾರ್ ಅರ್ಜುನ, ಮುನಿನರಸಿಂಹಯ್ಯ ನಕುಲರ ರೀತಿಯಲ್ಲಿ ಕೆಲಸ ಮಾಡಿದೆವು. ಲಿಂಗಪ್ಪಅವರು ಮಾಡಿರುವ ಕೆಲಸಕ್ಕೆ ಸಲ್ಲಿಸಿರುವ ಗೌರವ ಶ್ಲಾಘನೀಯ ಎಂದು ಹೇಳಿದರು.

ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ‍ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 17 ಮಂದಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ಆಯುಕ್ತರಾದ ಜಯಣ್ಣ, ಛಲವಾದಿ ಮಹಾಸಭಾ ಅಧ್ಯಕ್ಷೆ ವಾಣಿ ಶಿವರಾಂ, ಹಿಂದುಳಿದ ಸಮುದಾಯಗಳ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಸಾಗರ್ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಪೌರಸನ್ಮಾನಕ್ಕೆ ಪಾತ್ರರಾದ ಸಿ.ಎಂ.ಲಿಂಗಪ್ಪ ಅವರನ್ನು ನಗರದ ತಾಲೂಕು ಆಡಳಿತ ಸೌಧದ ಬಳಿಯಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಇದರಲ್ಲಿ ಮಡಿಕೇರಿ ಕನ್ನಡ ತಾಯಿ ಟ್ಯಾಬ್ಲೋ ಸಾಗಿ ಬಂದವು. ಜಾನಪದ ಕಲೆಗಳು ಪ್ರದರ್ಶನ ಮೆರವಣಿಗೆಗೆ ರಂಗು ತುಂಬಿತು. ಸಂಗೀತ ನಿರ್ದೇಶಕ ಗುರುಕಿರಣ್‌ ಮತ್ತು ತಂಡ ಸಂಗೀತದ ರಸದೌತಣ ಉಣ ಬಡಿಸಿದರು.

22ಕೆಆರ್ ಎಂಎನ್ .ಜೆಪಿಜಿ

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ರೇಷ್ಮೆನಾಡ ಕನ್ನಡ ಹಬ್ಬ ಸಮಾರಂಭದಲ್ಲಿ ಗಣ್ಯರು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ಪೌರಸನ್ಮಾನ ಮಾಡಿದರು.