ನನ್ನ ಮಾತಿಗೆ ಈಗಲೂ ಬದ್ಧ: ಇಕ್ಬಾಲ್ ಹುಸೇನ್

| Published : Jul 07 2025, 11:48 PM IST

ಸಾರಾಂಶ

ಭಗವಂತ ಎಲ್ಲರ ಮಾತನ್ನು ಕೇಳಲು ಸಾಧ್ಯವಿಲ್ಲ. ಅವರಿಗೆ ಹತ್ತಿರವಿರುವವರ ಪ್ರಾರ್ಥನೆ ಕೇಳುತ್ತಾನೆ. ಹಾಗಾಗಿ ಶ್ರೀಗಳ ನಾಲಿಗೆಯಲ್ಲಿ ಈ ಮಾತು ಬಂದಿದೆ. ನಾನು ಕೂಡ ಅದನ್ನೇ ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದಾನೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತ ರಾಮನಗರ

ರಂಭಾಪುರಿ ಶ್ರೀಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಕ್ತ ಸ್ಥಾನ ಸಿಗಲಿ ಎಂದು ಪವಿತ್ರವಾದ ನಾಲಿಗೆಯಲ್ಲಿ ಆರ್ಶೀವಾದ ನೀಡಿದ್ದಾರೆ. ಹಾಗಾಗಿ ಶ್ರೀಗಳ ಮಾತು ಫಲ ಕೊಡುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.

ನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ಎನ್‌ಎಸ್‌ಯುಐ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಶರಣರು ದಿನನಿತ್ಯ ಭಕ್ತಿಯಿಂದ ಧ್ಯಾನ ಮಾಡುವವರ ಬಾಯಲ್ಲಿ ಭಗವಂತನೇ ಇದನ್ನು ಹೇಳಿಸಿರಬಹುದು. ಕೋಟಿ ಜನರು ಹೇಳುವುದು ಒಂದೇ, ಶ್ರೀಗಳು ಹೇಳೊದು ಒಂದೇ ಎಂದರು.

ಭಗವಂತ ಎಲ್ಲರ ಮಾತನ್ನು ಕೇಳಲು ಸಾಧ್ಯವಿಲ್ಲ. ಅವರಿಗೆ ಹತ್ತಿರವಿರುವವರ ಪ್ರಾರ್ಥನೆ ಕೇಳುತ್ತಾನೆ. ಹಾಗಾಗಿ ಶ್ರೀಗಳ ನಾಲಿಗೆಯಲ್ಲಿ ಈ ಮಾತು ಬಂದಿದೆ. ನಾನು ಕೂಡ ಅದನ್ನೇ ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದಾನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ನಂತರ ಹಿಂದುಳಿದ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಇರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ಸಲಹಾ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದಿನಿಂದಲೂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರ ಧ್ವನಿಯಾಗಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದವರು. ಅಲ್ಪಸಂಖ್ಯಾತರು ಸೇರಿದಂತೆ ಸಣ್ಣಪುಟ್ಟ ಸಮುದಾಯಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಆಯಾಯ ಕಾಲಘಟ್ಟದಲ್ಲಿ ಹಿಂದುಳಿದ ಜನರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಶ್ರಮಿಸಿದ್ದಾರೆ. ಈ ಆಧಾರದಲ್ಲಿ ಅವರನ್ನು ಗುರುತಿಸಿ ಸಮಿತಿಯಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ಹಿಂದುಳಿದ ಸಮುದಾಯದ ಜನರಿಗೆ ನ್ಯಾಯ ತಂದುಕೊಡುವ ಮೂಲಕ ಆ ಸ್ಥಾನಕ್ಕೆ ನ್ಯಾಯ ದೊರಕಿಸಿ ಕೊಡುವ ವಿಶ್ವಾಸವಿದೆ ಎಂದು ತಿಳಿಸಿದರು.

ಅನುಭವಿ ರಾಜಕಾರಣಿ ಸಿದ್ದರಾಮಯ್ಯರವರು ರಾಜ್ಯದಲ್ಲಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಅವರಿಗಿದೆ. ಬಜೆಟ್‌ಗಳನ್ನು ಮಂಡಿಸಿದ ಸಮಯದಲ್ಲಿ ಎಲ್ಲ ವರ್ಗದ ಜನರಿಗೆ ಅನ್ಯಾಯವಾಗದಂತೆ ನ್ಯಾಯವನ್ನು ಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅವರ ಕೆಲಸಗಳನ್ನು ಗುರುತಿಸಿಯೇ ಎಐಸಿಸಿ ಅವರಿಗೆ ಉನ್ನತ ಸ್ಥಾನ ನೀಡಿದೆ ಎಂದು ಹೇಳಿದರು.

ಕರಗಕ್ಕೆ ಭರದ ಸಿದ್ಧತೆ:

ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಸಾಗುವ ರಸ್ತೆಗಳ ಸ್ವಚ್ಚತೆ, ಡಾಂಬರೀಕರಣ, ಕುಡಿಯುವ ನೀರು ಪೂರೈಕೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಿದ್ದತೆ ನಡೆಯುತ್ತಿವೆ. ನಗರದೆಲ್ಲೆಡೆ ರಸ್ತೆಗಳಿಗೆ ವಿದ್ಯುತ್ ದೀಪ ಅಲಂಕಾರಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಇದಕ್ಕಾಗಿ ಪೂರ್ವಭಾವಿ ಸಭೆ ಸಹ ನಡೆಸಿದ್ದು, ಸಮಿತಿಗಳನ್ನು ರಚಿಸಲಾಗಿದೆ. ಎಲ್ಲರೂ ಅವರದೇ ಆದ ಜವಬ್ದಾರಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಚುನಾಯಿತ ಪ್ರತಿನಿಧಿಗಳು, ಪ್ರಸಿದ್ಧ ಚಲನಚಿತ್ರ ನಟರಾದ ರವಿಚಂದ್ರನ್, ಸುದೀಪ್, ನಟಿ ರಚಿತರಾಮ್, ಸಂಗೀತ ರಘುದೀಕ್ಷಿತ್, ರಾಜೇಶ್ ಆಗಮಿಸಲಿದ್ದಾರೆ. ಮೂರು ವಿಭಾಗದಲ್ಲಿ ನೃತ್ಯ, ಹಾಡುಗಾರಿಕೆ, ಮನರಂಜನಾ ಕಾರ್ಯಕ್ರಮ ಕೊಡುವ ಉದ್ದೇಶವಿದೆ. ಒಟ್ಟಾರೆ ಕರಗ ಮಹೋತ್ಸವ ಯಶಸ್ವಿ ಆಚರಣೆ ಮಾಡಿ ನಗರಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ರಸದೌತಣ ನೀಡುವ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಎನ್‌ಎಸ್‌ಯುಐಗೆ ನೇಮಕ:

ಬೆಂಗಳೂರು ದಕ್ಷಿಣ ಜಿಲ್ಲೆ ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಡಿ. ಲಿಖಿತ್‌ಗೌಡ , ಸೂಫಿಯನ್ ಉಲ್ಲಖಾನ್, ಜಿಲ್ಲಾ ಕಾರ್ಯದರ್ಶಿಯಾಗಿ ಎಂ.ಕೆ.ಸುಪ್ರಿತ್‌ಗೌಡ ಅವರನ್ನು ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಆದೇಶದ ಮೇರೆಗೆ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕೆ.ಜೆ. ಅಮರ್ ನೇಮಕ ಮಾಡಿದ್ದಾರೆ.

ಈ ವೇಳೆ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು, ಮದರ್‌ಸಾಬರದೊಡ್ಡಿ ಎಂಪಿಸಿಎಸ್ ಅಧ್ಯಕ್ಷ ರವಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗುರುಪ್ರಸಾದ್, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ವಿನೋದ್‌ಕುಮಾರ್ , ಜಿಲ್ಲಾಧ್ಯಕ್ಷ ಕೆ.ಜೆ.ಅಮರ್ , ನಗರ ಘಟಕದ ಅಧ್ಯಕ್ಷ ಪುನೀತ್‌ ಕುಮಾರ್, ಉಪಾಧ್ಯಕ್ಷ ಮೋಹನ್, ಪದಾಧಿಕಾರಿಗಳಾದ ಅಪ್ಪಾಜಿ, ನಂದೀಶ್ ಮತ್ತಿತರರು ಹಾಜರಿದ್ದರು.7ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ಎನ್‌ಎಸ್‌ಯುಐ ಪದಾಧಿಕಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ನೇಮಕಾತಿ ಪತ್ರ ವಿತರಿಸಿದರು.