ಸಾರಾಂಶ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನ । ಒಟ್ಟಾಗಿ ಕಾರ್ಯನಿರ್ವಹಿಸಿದರೆ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ ಹಾಸನಜನಸ್ನೇಹಿ ಸಂಸದನಾಗಿರಬೇಕು ಎಂಬುದು ನನ್ನ ಆಸೆಯಾಗಿದ್ದು, ಜನರ ಸಂಕಷ್ಟಗಳಿಗೆ ಯಾವಾಗಲೂ ನಾನು ಸಿಗಬೇಕು. ಸಾಮಾನ್ಯ ಜನರಿಗೆ ಶೀಘ್ರ ಕೆಲಸ ಆಗಬೇಕು. ಹಾಸನ ಜಿಲ್ಲೆ ಭ್ರಷ್ಟಾಚಾರ ಮುಕ್ತ ಆಗಬೇಕು. ಜಿಲ್ಲಾ ಮಂತ್ರಿಗಳು, ಜಿಲ್ಲೆಯ ಎಲ್ಲಾ ಶಾಸಕರು, ಎಲ್ಲಾ ಇಲಾಖೆ ಅಧಿಕಾರಿಗಳು ಸೇರಿ ಒಗ್ಗಟ್ಟಾಗಿ ನಿರ್ವಹಿಸಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ನೂತನ ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್ ಅಧ್ಯಕ್ಷತೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಚುನಾವಣೆಯಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದ್ದು, ಯಾವುದಾದರೂ ತಪ್ಪು ನಡೆಯುತ್ತಿದ್ದರೆ ಆ ಲೋಪದೋಷವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದಿರುವುದಕ್ಕೆ ಒಂದು ಕಡೆ ಸಂತೋಷವಾದರೆ ಮತ್ತೊಂದು ಕಡೆ ಸವಾಲುಗಳು, ಜನರ ನಿರೀಕ್ಷೆಗಳು ಇರುವುದರಿಂದ ನಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಿವೆ. ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.‘ಜಿಲ್ಲೆಯ ಪ್ರಮುಖ ಸಮಸ್ಯೆ ಎಂದರೆ ಆನೆ ದಾಳಿ. ಕಾರಿಡಾರ್ ಬಗ್ಗೆ ಮನವಿ ಕೇಳಿ ಬಂದಿದ್ದು, ಸರ್ಕಾರದಿಂದ ೫೦ ಕೋಟಿ ರು.ಅನ್ನು ಬಿಡುಗಡೆ ಮಾಡಿಸಿಕೊಡುವಂತೆ ಬೇಡಿಕೆ ಇದ್ದು, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಆದರೆ ಇನ್ನೆರಡು ದಿನಗಳಲ್ಲಿ ಕೊಡುವ ಭರವಸೆ ನೀಡಿದ್ದಾರೆ. ಈ ವಿಚಾರವಾಗಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ಶಾಸಕರನ್ನು ಕರೆಯಲಾಗುವುದು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
‘ಇಲ್ಲಿ ಕೈಗಾರಿಕೆ ಇಲ್ಲ. ನಮ್ಮ ಜಿಲ್ಲೆಯವರು ಮಂಡ್ಯದಲ್ಲಿ ಸಂಸದರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಲ್ಲೂ ಮನವಿ ಮಾಡಿ ಜಿಲ್ಲೆಯ ಸರ್ವೋತಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕೈಗಾರಿಕೆಯನ್ನು ಪಕ್ಷಾತೀತವಾಗಿ ತರಬೇಕು. ಸ್ವ-ಸಹಯ ಕೈಗಾರಿಕೆಗಳ್ನು ಮಾಡಬೇಕು. ತಾಲೂಕು ಮಟ್ಟದ ಎಲ್ಲಾ ಕಚೇರಿಗಳಲ್ಲಿ ನಮಗೆ ಜನರ ಕೆಲಸ ಬೇಗ ಆಗಬೇಕು. ಅದಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಒಗ್ಗೂಡಿ ಸಾಮಾನ್ಯ ಜನರು ಇಲಾಖೆಗೆ ಬಂದರೆ ಶೀಘ್ರ ಕೆಲಸ ಆಗುವಂತೆ ಹಾಗೂ ಭ್ರಷ್ಟಾಚಾರ ಮುಕ್ತ ನಮ್ಮ ಜಿಲ್ಲೆ ಆಗಬೇಕು. ಹಲವು ಕಡೆ ನೀರಿನ ಸಮಸ್ಯೆ ಇದ್ದು, ಜನಸ್ನೇಹಿ ಸಂಸದನಾಗಿರಬೇಕು ಎಂಬುದು ನನ್ನ ಆಸೆ. ಜನರ ಸಂಕಷ್ಟಗಳಿಗೆ ಯಾವಾಗಲೂ ಸಿಗಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ’ ಎಂದು ತಿಳಿಸಿದರು.‘ನಾಫೆಡ್ ಮೂಲಕವೇ ಕೊಬ್ಬರಿಯನ್ನು ಖರೀದಿ ಮಾಡಲು ವರ್ಷವಿಡೀ ಅವಕಾಶ ಕೊಡುವಂತೆ ಮೊದಲ ಅಧಿವೇಶನದಲ್ಲೆ ಒತ್ತಾಯಿಸಲಾಗುವುದು. ಹಾಸನದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಸಂಸದರ ಕಚೇರಿಯಲ್ಲಿ ವಾರದಲ್ಲಿ ಎರಡು ದಿನ ಇದ್ದು ಜನರ ಅಹವಾಲು ಸ್ವೀಕರಿಸಲಾಗುವುದು. ಜನರ ಆಶೀರ್ವಾದದಂತೆ ನಗರ ಹಾಗೂ ಜಿಲ್ಲೆಯ ಸಮಸ್ಯೆ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗುವುದು’ ಎಂದರು.
ರಾಜ್ಯ ಪತ್ರಕರ್ತರ ಸಂಘದ ಕಾರ್‍ಯಕಾರಣಿ ಸದಸ್ಯ ಎಚ್.ಬಿ.ಮದನ್ ಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ರಾಜ್ಯ ಸಮಿತಿ ಸದಸ್ಯ ಎಚ್.ಬಿ. ಮದನ ಗೌಡ, ವಿಶೇಷ ಆಹ್ವಾನಿತರಾದ ರವಿನಾಕಲಗೂಡು, ಉಪಾಧ್ಯಕ್ಷ ಕೆ.ಎಂ. ಹರೀಶ್, ಕಾರ್ಯದರ್ಶಿ ಸಿ.ಬಿ.ಸಂತೋಷ್ ಇತರರು ಭಾಗವಹಿಸಿದ್ದರು.