ಪಕ್ಷ ನಿರ್ಧರಿಸಿದರೆ ಅರಸೀಕೆರೆಯಲ್ಲಿಯೇ ಸ್ಪರ್ಧಿಸುವ ಮೂಲಕ ಶಾಸಕ ಶಿವಲಿಂಗೇಗೌಡ ಹಾಕಿರುವ ಸವಾಲನ್ನು ಸ್ವೀಕರಿಸಲು ಸಿದ್ಧವಿರುವುದಾಗಿ ಮಾಜಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದರು.
ಕನ್ನಡಪ್ರಭವಾರ್ತೆ ಆಲೂರು
ಪಕ್ಷ ನಿರ್ಧರಿಸಿದರೆ ಅರಸೀಕೆರೆಯಲ್ಲಿಯೇ ಸ್ಪರ್ಧಿಸುವ ಮೂಲಕ ಶಾಸಕ ಶಿವಲಿಂಗೇಗೌಡ ಹಾಕಿರುವ ಸವಾಲನ್ನು ಸ್ವೀಕರಿಸಲು ಸಿದ್ಧವಿರುವುದಾಗಿ ಮಾಜಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದರು.ಇದೇ ತಿಂಗಳ 24 ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಬೃಹತ್ ಸಮಾವೇಶದ ಸಿದ್ಧತೆ ಕುರಿತಾಗಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಪಾಳ್ಯ ಗ್ರಾಮದ ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡರ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಜಿಲ್ಲೆಯಲ್ಲಿ ಎರಡು ಸಮಾವೇಶ ಮಾಡುವ ಮೂಲಕ ಜೆಡಿಎಸ್ ಪಕ್ಷದ ವರ್ಚಸ್ಸನ್ನು ಕುಂದಿಸುವ ಪ್ರಯತ್ನವನ್ನು ಮಾಡಲು ಹೊರಟಿದೆ. ಆದರೆ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಆಟ ನಡೆಯುವುದಿಲ್ಲ. ಮೊದಲು ಕಾಂಗ್ರೆಸ್ ಪಕ್ಷದ ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು ಸರ್ಕಾರ ಬಂದು ಕಳೆದ ಎರಡುವರೆ ವರ್ಷಗಳಲ್ಲಿ ಹಾಸನ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ನಮ್ಮ ಸರ್ಕಾರವಿದ್ದಾಗ ಹಾಗೂ ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಗೆ ತಂದಿರುವ ಅನುದಾನದಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿರುವುದಾಗಿ ಕಾಂಗ್ರೆಸ್ಸಿನವರು ಬಿಂಬಿಸಿಕೊಂಡು ಉದ್ಘಾಟನೆ ಮಾಡಿರುವುದು ಖಂಡನೀಯ. ಈ ಸರ್ಕಾರದ ಎರಡುವರೆ ವರ್ಷ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಯು ಸುಮಾರು ಹತ್ತು ವರ್ಷಗಳಷ್ಟು ಹಿಂದಕ್ಕೋಗಿದ್ದು ಬರೀ ರಸ್ತೆಗಳ ಗುಂಡಿಯನ್ನು ಮುಚ್ಚುವ ಕಾರ್ಯದಲ್ಲಿ ಮಾತ್ರ ತೊಡೆಗಿಕೊಂಡಿದ್ದು ಇದಕ್ಕೆ ರಾಜ್ಯದ ಜನತೆ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಾಂಗ್ರೆಸ್ ಪಕ್ಷಕ್ಕೆ ಕಲಿಸುತ್ತಾರೆ ಅಲ್ಲದೆ ನಮ್ಮ ಪಕ್ಷವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಅನ್ನು ಮಾಡಿಕೊಂಡಿದ್ದು ಹಾಸನ ವಿಧಾನಸಭಾ ಕ್ಷೇತ್ರ ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಮೈತ್ರಿ ನಾಯಕರು ತಮ್ಮ ಪಕ್ಷವನ್ನ ಬಿಟ್ಟು ಬೇರೆ ಪಕ್ಷದ ನಾಯಕರ ಜೊತೆ ರಾಜಕೀಯ ಲೆಕ್ಕಾಚಾರ ಆರಂಭಿಸಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಮ್ಮ ಪಕ್ಷ ಮತ್ತು ಬಿಜೆಪಿ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಒಟ್ಟಾರೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ನ ಶಕ್ತಿ ಏನು ಎಂಬುದನ್ನು 24 ರಂದು ನಡೆಯುವ ಸಮಾವೇಶದ ಮೂಲಕ ತಕ್ಕ ಉತ್ತರವನ್ನು ನೀಡಬೇಕೆಂದು ತಿಳಿಸಿದರು.
ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಇದೇ ತಿಂಗಳು 24 ನೇ ತಾರೀಕು ಹಾಸನದಲ್ಲಿ ನಡೆಯುವ ಜೆಡಿಎಸ್ ಬೃಹತ್ ಸಮಾವೇಶಕ್ಕೆ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸುತ್ತಿದ್ದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಬೂತುಗಳಿಂದ ಒಂದೊಂದು ಬಸ್ಸಿನಲ್ಲಿ ನಮ್ಮ ಪಕ್ಷದ ಮತದಾರರನ್ನು ಕರೆ ತರುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಆಲೂರು ತಾಲೂಕಿನಿಂದ 5000ಕ್ಕೂ ಹೆಚ್ಚು ಜನರನ್ನು ಈ ಸಮಾವೇಶಕ್ಕೆ ಬರುವಂತೆ ಎಲ್ಲಾ ವ್ಯವಸ್ಥೆ ಮಾಡಬೇಕು. ಕಳೆದ 2023ರ ಚುನಾವಣೆಯಲ್ಲಿ ನಮ್ಮ ಪಕ್ಷ ಕೆಲವೇ ಮತಗಳಿಂದ ಸೋಲನ್ನು ಅನುಭವಿಸಿದೆ ಆದರೆ ಈ ಬಗ್ಗೆ ಯಾವುದೇ ಕಾರ್ಯಕರ್ತರು ಎದೆಗುಂದುವ ಅವಶ್ಯಕತೆ ಇಲ್ಲ ಮುಂದಿನ 2028 ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಮರಳಿ ನಮ್ಮ ಪಕ್ಷವು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಕಾರ್ಯಕರ್ತರರಲ್ಲಿ ಭರವಸೆ ಮೂಡಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಜಿಪಂ ಮಾಜಿ ಸದಸ್ಯೆ ಸಂಚಲ ಕುಮಾರಸ್ವಾಮಿ, ಪಪಂ ಮಾಜಿ ಅಧ್ಯಕ್ಷ ಡಿಎಸ್ ಜಯಣ್ಣ, ಧರ್ಮರಾಜು, ಹಾ.ಹಾ.ಓ ನಿರ್ದೇಶಕ ಪಿ.ಎಲ್ ನಿಂಗರಾಜು, ತಾಪಂ ಮಾಜಿ ಸದಸ್ಯ ನಟರಾಜು ನಾಕಲಗೂಡು, ಸಿ.ವಿ ಲಿಂಗರಾಜು,ಹಿರಿಯ ಮುಖಂಡರಾದ ಬಿ.ಸಿ ಶಂಕರಾಚಾರ್, ಕದಾಳು ರಾಜಪ್ಪಗೌಡ,ಗಂಗಾಧರಪ್ಪ, ಗೇಕರವಳ್ಳಿ ಬಸವರಾಜು ಉಪಸ್ಥಿತರಿದ್ದರು.