‘2028ರಲ್ಲಿ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವುದು ರಾಜ್ಯದ ಬಹುತೇಕ ಜನರ ಆಸೆ. ನನಗೆ ಸಿಎಂ ಆಗಬೇಕೆನ್ನುವ ಆಸೆ ಇಲ್ಲ. ಆದರೆ, ನಾನು ನನ್ನ ತಂದೆ ಎಚ್‌.ಡಿ.ದೇವೇಗೌಡರ ಆಸೆಗಳನ್ನು ಈಡೇರಿಸಲಿಕ್ಕಾಗಿ ಸಿಎಂ ಆಗಬೇಕು’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

‘2028ರಲ್ಲಿ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವುದು ರಾಜ್ಯದ ಬಹುತೇಕ ಜನರ ಆಸೆ. ನನಗೆ ಸಿಎಂ ಆಗಬೇಕೆನ್ನುವ ಆಸೆ ಇಲ್ಲ. ಆದರೆ, ನಾನು ನನ್ನ ತಂದೆ ಎಚ್‌.ಡಿ.ದೇವೇಗೌಡರ ಆಸೆಗಳನ್ನು ಈಡೇರಿಸಲಿಕ್ಕಾಗಿ ಸಿಎಂ ಆಗಬೇಕು’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ಪಕ್ಷಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಶನಿವಾರ ನಡೆದ ಜೆಡಿಎಸ್‌ ಜನತಾ ಸಮಾವೇಶದಲ್ಲಿ ಅವರು ಮಾತನಾಡಿದರು. ದೇವೇಗೌಡರು 1962ರಿಂದ ರಾಜಕೀಯ ಪ್ರಯಾಣ ಆರಂಭಿಸಿದರು. ಆದರೆ, ಅವರು ಅಧಿಕಾರ ಅನುಭವಿಸಿರುವುದು ಬಹಳ ಕಡಿಮೆ ಅವಧಿ. ಅದರಲ್ಲೂ ಕಾಂಗ್ರೆಸ್ಸಿಗರ ಕುತಂತ್ರದಿಂದ ಅಧಿಕಾರ ಕಳೆದುಕೊಂಡರು. ಹಾಗಾಗಿ, ಅವರ ಆಸೆಗಳನ್ನು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಆಗಿಲ್ಲ. ಹೀಗಾಗಿ, ಅವರ ಆಸೆಗಳನ್ನು ಈಡೇರಿಸಲಿಕ್ಕಾಗಿ ನಾನು ಮತ್ತೊಮ್ಮೆ ಸಿಎಂ ಆಗಬೇಕು ಎಂದರು.

ಇದೇ ವೇಳೆ, ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದ ಎಚ್ಡಿಕೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದಲೇ ಕಾಂಗ್ರೆಸ್‌ನ ನಿರ್ನಾಮ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಇರುವುದು ಬ್ರೋಕರ್‌ಗಳ ಹಾಗೂ ಲೂಟಿಕೋರರ ಸರ್ಕಾರ. ಇವರಿಗೆ ಜನರ ಸಮಸ್ಯೆಗಳ ಬಗ್ಗೆ ಗಮನ ಇಲ್ಲ. ಕೇವಲ ಕುರ್ಚಿಗಾಗಿ ಕಿತ್ತಾಡಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅಂಥಾದ್ದರಲ್ಲಿ ಅಧಿಕಾರಿಗಳು ಇವರ ಮಾತು ಕೇಳಿ ಮಾಡಬಾರದ ಅವಾಂತರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಶಿಕ್ಷೆಯನ್ನು ಇವರೇ ಅನುಭವಿಸಬೇಕಾಗುತ್ತದೆ. ಎಚ್ಚರಿವಿರಲಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಶಿಕ್ಷೆ ಅನುಭವಿಸುವವರು ಅಧಿಕಾರಿಗಳೇ ಎನ್ನುವುದು ಅವರಿಗೆ ಗೊತ್ತಿಲ್ಲ. ಇದೀಗ ತನ್ನ ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಸಲೀಲೆ ಪ್ರಕರಣದಲ್ಲಿ ಅಮಾನತುಗೊಂಡಿರುವ ರಾಮಚಂದ್ರರಾವ್‌ ಈ ಹಿಂದೆ ಮೈಸೂರಿನಲ್ಲಿದ್ದಾಗ ಇಲವಾಲ ಬಳಿ ಚಿನ್ನದ ವ್ಯಾಪಾರಿಯೊಬ್ಬನನ್ನು ಅಡ್ಡಗಟ್ಟಿ ₹8 ಕೋಟಿ ಸುಲಿದಿದ್ದರು. ಆಗಲೇ ಸಿದ್ಧರಾಮಯ್ಯ ಅವರಿಗೆ ಇವನ ಬಗ್ಗೆ ಎಚ್ಚರದಿಂದ ಇರುವಂತೆ ಹೇಳಿದ್ದೆ. ಇದೀಗ ಸರ್ಕಾರವೇ ತಲೆತಗ್ಗಿಸುವಂತೆ ಮಾಡಿದ್ದಾನೆ ಎಂದು ಉದಾಹರಣೆ ನೀಡಿದರು.

ರೈತರ ಬಗ್ಗೆ ಗಮನವೇ ಇಲ್ಲ:

ಈ ಸರ್ಕಾರದಲ್ಲಿ ಕೇವಲ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿರುವುದನ್ನು ಬಿಟ್ಟರೆ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನ ಇಲ್ಲ. ಸಿಎಂ ಸಿದ್ಧರಾಮಯ್ಯನವರು ಅಹಿಂದ ಮುಂದಿಟ್ಟುಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಅದರಲ್ಲೂ ಜೋಳ, ತೊಗರಿ, ಕಡಲೆ ಬೆಳೆದ ರೈತರು ಕನಿಷ್ಟ ಬೆಲೆ ಸಿಗದೆ ಬೆಂಬಲ ಬೆಲೆಗಾಗಿ ಹೋರಾಡುತ್ತಿದ್ದಾರೆ. ಅದರ ಬಗ್ಗೆ ಗಮನ ನೀಡದೆ ಬೇಕಾದಾಗ ಖರೀದಿ ಕೇಂದ್ರ ತೆರೆಯದೆ ಯಾವಾಗಲೋ ತೆರೆಯುತ್ತಾರೆ. ಆ ಖರೀದಿ ಕೇಂದ್ರದಲ್ಲೂ ನಿಜವಾದ ರೈತರಿಂದ ಧಾನ್ಯ ಖರೀದಿಸದೆ ಸರ್ಕಾರದ ಕಡೆಯ ಬ್ರೋಕರ್‌ಗಳನ್ನೇ ಮುಂದಿಟ್ಟುಕೊಂಡು ಖರೀದಿಸಿ, ಅದರಲ್ಲೂ ಕಮೀಷನ್‌ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.ಬಳ್ಳಾರಿ ಗಲಭೆಗೆ ಸರ್ಕಾರದ ದೌರ್ಬಲ್ಯವೇ ಕಾರಣ:

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಿಂದ ಆರಂಭವಾಗಿ ಮಾಡೆಲ್ ಹೌಸ್‌ಗೆ ಬೆಂಕಿ ಹಾಕಿದ್ದಾರೆ. ಈ ಸರ್ಕಾರ ಸರಿಯಾದ ರೀತಿ ಕಠಿಣ ನಿರ್ಧಾರಗಳನ್ನು ಮಾಡದೇ ಇರುವ ಕಾರಣಕ್ಕೆ ಅವರ ಪಕ್ಷದ ಬೆಂಬಲಿಗರು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇವರು ಪ್ರೇರೇಪಣೆ ಕೊಟ್ಟರೆ ಬಳ್ಳಾರಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಆಗಬಹುದು. ಹೀಗಾಗಿ, ಅಶಾಂತಿಗೆ ಅವಕಾಶ ಕೊಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.