ಕನ್ನಡಪ್ರಭವಾರ್ತೆ ತುರುವೇಕೆರೆ

ನನ್ನ ಹಣೇಲಿ ನಾನು ಮಂತ್ರಿ ಆಗ್ತೀನಿ ಅಂತ ಬರೆದಿದ್ರೆ ನಾನು ಮಂತ್ರಿ ಆಗ್ತೀನಿ. ಇಲ್ಲಾಂದ್ರೆ ಇಲ್ಲ. ಎಲ್ಲಾ ದೈವಾನುಗ್ರಹ, ಜನರ ಆಶೀರ್ವಾದ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಮ್ಮ ಮನದಾಳದ ಮಾತುಗಳನ್ನು ಆಡಿದರು. ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ನಡೆದ ಎಸ್ ಐ ಆರ್ ಕುರಿತ ವಿಚಾರ ಸಂಕಿರಣ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಕಾರ್ಯಕರ್ತರನ್ನು ಕುರಿತು ಅವರು ಮಾತನಾಡಿದರು.ನಾನು ಜಿಲ್ಲೆಯ ಜೆಡಿಎಸ್ ಶಾಸಕರ ಪೈಕಿ ಹಿರಿಯವನಿದ್ದೇನೆ. ಕಳೆದ ಬಾರಿ ಸಂಯುಕ್ತ ಸರ್ಕಾರದಲ್ಲಿ ಮಂತ್ರಿ ಆಗುವ ಅವಕಾಶ ಇತ್ತು. ಆದರೆ ಸೋತೆ. ಹಾಗಾಗಿ ಮಂತ್ರಿ ಸ್ಥಾನ ಕೈತಪ್ಪಿ ಹೋಯಿತು ಎಂದು ಬೇಸರಿಸಿಕೊಂಡರು. ನಾನು ಇದೇ ನನ್ನ ಕೊನೆ ಚುನಾವಣೆ ಅಂತ ಹೇಳಿದ್ದೂ ಸತ್ಯ. ಆದರೆ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ನೀನೇ ಮುಂದಿನ ಚುನಾವಣೆಯಲ್ಲಿ ನಿಲ್ಲಬೇಕು ಅಂತ ಒತ್ತಾಯ ಮಾಡಿದ್ದಾರೆ. ಅವರಿಗೆ ಇಲ್ಲ ಅನ್ನಕ್ಕಾಗಲ್ಲ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾನೇ ಕ್ಯಾಂಡಿಡೇಟ್ ಆಗ್ತೀನಿ. ನಿಮ್ಮೆಲ್ಲರ ಸಹಕಾರ ಇರಲಿ ಅಂತ ಕೈಮುಗಿದರು.ಇತ್ತೀಚೆಗೆ ಜೆಡಿಎಸ್ ನಿಂದ ಹಲವಾರು ಮಂದಿ ಮುಂದಿನ ಚುನಾವಣೆಯಲ್ಲಿ ಟಿಕೇಟ್ ಬೇಕು ಅಂತ ಜೆಡಿಎಸ್ ವರಿಷ್ಠರಲ್ಲಿ ಕೇಳುತ್ತಿದ್ದಾರೆ. ತಪ್ಪೇನಿಲ್ಲ. ಟಿಕೆಟ್ ಕೊಡುವುದು, ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹಳ ಜನರು ಟಿಕೇಟ್ ಕೇಳ್ತಾ ಇದ್ದಾರೆ. ಅದರಲ್ಲಿ ಮಾಜಿ ಶಾಸಕ ಬಿಜೆಪಿಯ ಮಸಾಲಾ ಜಯರಾಮ್ ಸಹ ಒಬ್ಬರು ಎಂದು ತಿಳಿದುಬಂದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಈರ್ವರ ಹೊಂದಾವಣಿಕೆ ಇದ್ದರೆ ಎನ್ ಡಿ ಎ ಯಿಂದ ಸಹಜವಾಗಿ ಜೆಡಿಎಸ್ ಗೆ ಟಿಕೆಟ್ ಕೊಡ್ತಾರೆ. ಹಾಗಾಗಿ ಬಿಜೆಪಿಯ ಮಸಾಲಾ ಜಯರಾಮ್ ಜೆಡಿಎಸ್ ಸೇರಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ . ಜೆಡಿಎಸ್ ಮತ್ತು ಬಿಜೆಪಿ ಯವರು ರಾಜ್ಯದಲ್ಲಿ ಒಗ್ಗಟ್ಟಾಗಿದ್ದೇವೆ. ಮುಂದೆ ಅಧಿಕಾರಕ್ಕೆ ಬರುವವರೂ ನಾವೇ. ಸಂಯುಕ್ತ ಸರ್ಕಾರ ಬರುವುದರಲ್ಲಿ ಸಂದೇಹವೇ ಬೇಡ. ಹಾಗಾಗಿ ಬಿಜೆಪಿ ಜೊತೆ ಜಗಳ ಆಡಬೇಡಿ. ಅವರನ್ನೂ ಪ್ರೀತಿಯಿಂದ ಕಾಣಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಈ ಸರ್ಕಾರದಲ್ಲಿ ಸಾರ್ವಜನಿಕರ ಕೆಲಸ ಏನೇನೂ ಆಗುತ್ತಿಲ್ಲ. ಜನರು ಬೇಜಾರಾಗಿದ್ದಾರೆ. ಮುಂದೆ ಗ್ರಾಮ ಪಂಚಾಯಿತಿ ಚುನಾವಣೆಗಳು ಬರಲಿವೆ. ಇದು ಸಂಘಟನೆಗೊಳ್ಳಲು ಸಕಾಲ ಎಂದರು.

ಈ ವೇಳೆ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಹಾಗೂ ಎಪಿಎಂಸಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ದಂಡಿನಶಿವರ ಶಂಕರೇಗೌಡ , ಸಿಎಸ್ ಪುರ ನಂಜೇಗೌಡ ಮತ್ತು ನರಸೇಗೌಡ, ವಕೀಲ ಪಿ.ಎಚ್.ಧನಪಾಲ್, ಎಂ.ಎನ್.ಚಂದ್ರೇಗೌಡ, ಸಿ.ಎಸ್.ಪುರ ನರಸಿಂಹಮೂರ್ತಿ, ಬಿ.ಎಸ್. ದೇವರಾಜ್, ಲೀಲಾವತಿ ಗಿಡ್ಡಯ್ಯ, ಅರೇಮಲ್ಲೇನಹಳ್ಳಿ ಎ.ಬಿ.ಜಗದೀಶ್, ಕಲ್ಲಬೊರನಹಳ್ಳಿ ಜಯರಾಮ್, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಸೊಪ್ಪನಹಳ್ಳಿ ರಂಗನಾಥ್, ಹಿಂಡುಮಾರನಹಳ್ಳಿ ನಾಗರಾಜು, ಮಂಗೀಕುಪ್ಪೆ ಬಸವರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.